ಬರ, ಮಳೆಯ ಅಭಾವ ನಡುವೆ ರೈತರಿಗೆ ಶಾಕ್ | ಪಂಪ್ ಸೆಟ್ ತ್ರಿ ಫೇಸ್ 6 ತಾಸು ಮಾತ್ರ

Picture of Savistara

Savistara

Bureau Report

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲ ಹಾಗೂ ತೀವ್ರ ವಿದ್ಯುತ್ ಕೊರತೆಯ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ ವಿದ್ಯುತ್‌ ಪೂರೈಕೆಯನ್ನು ಕಡಿತಗೊಳಿಸಲಾಗಿದೆ. ಈ ಹಿಂದೆ ನೀಡುತ್ತಿದ್ದ 7 ಗಂಟೆಗಳ ಬದಲು ಇನ್ನು ಮುಂದೆ 6 ಗಂಟೆ ಮಾತ್ರ ವಿದ್ಯುತ್ ಪೂರೈಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಬುಧವಾರ ನಡೆದ ಬರದ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸದಸ್ಯರಾದ ಚಿದಾನಂದ ಗೌಡ ಮತ್ತು ಪಿ.ಎಚ್. ಪೂಜಾ‌ರ್ ಸೇರಿದಂತೆ ಹಲವರು ಲೋಡ್‌ಶೆಡ್ಡಿಂಗ್ ಹಾಗೂ ವಿದ್ಯುತ್ ಕಡಿತದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ರಾಜ್ಯದ ವಿದ್ಯುತ್ ಬೇಡಿಕೆ ಸದ್ಯ 20 ಸಾವಿರ ಮೆಗಾವ್ಯಾಟ್ ದಾಟಿದ್ದು, ಅದಕ್ಕೆ ತಕ್ಕಂತೆ ಹೆಚ್ಚುವರಿ ವಿದ್ಯುತ್‌ ಲಭ್ಯವಿಲ್ಲದಿರುವುದರಿಂದ ಕಡಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡರು.

“ಹೊರರಾಜ್ಯಗಳಿಂದ ವಿನಿಮಯ ಆಧಾರದಲ್ಲಿ ವಿದ್ಯುತ್‌ ಖರೀದಿಸಲಾಗುತ್ತಿದೆ. ಒಪ್ಪಂದದ ಪ್ರಕಾರ ಈ ತಿಂಗಳ ಅಂತ್ಯದವರೆಗೆ ಪಂಜಾಬ್, ಹರಿಯಾಣ, ಛತ್ತೀಸ್‌ಗಢ. ಉತ್ತರ ಪ್ರದೇಶಕ್ಕೆ ವಿದ್ಯುತ್ ಹಿಂದಿರುಗಿಸಬೇಕಿದೆ. ಆನಂತರ ವಿದ್ಯುತ್‌ ಪೂರೈಕೆ ಸಮಸ್ಯೆ ಕೊಂಚಮಟ್ಟಿಗೆ ಸುಧಾರಿಸಲಿದೆ.” ಎಂದು ಸಚಿವರು ಹೇಳಿದರು.ಬಿಜೆಪಿಯ ಪಿ.ಎಚ್‌. ಪೂಜಾರ್, “ನಿತ್ಯ 3-4 ಗಂಟೆ ಮಾತ್ರ ವಿದ್ಯುತ್‌ ನೀಡಲಾಗುತ್ತಿದೆ. ಇದರಿಂದ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ,” ಎಂದರು. ಸಚಿವರು ಇದಕ್ಕೆ, “ಸೌರ ಮತ್ತು ಪವನ ವಿದ್ಯುತ್‌ನಿಂದಾಗಿ ಹಗಲಿನಲ್ಲಿ ಸಮಸ್ಯೆಯಾಗುತ್ತಿಲ್ಲ. ಬರದಿಂದಾಗಿ ಜಲವಿದ್ಯುತ್‌ ಉತ್ಪಾದನೆ ಕಡಿಮೆಯಾಗಿದ್ದು, ಸದ್ಯ ಒಂದು ಗಂಟೆ ಕಡಿತಗೊಳಿಸಲಾಗುತ್ತಿದೆ,” ಎಂದು ತಿಳಿಸಿದರು.

‘ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಬರದ ತೀವ್ರತೆ ಹೆಚ್ಚಿದ್ದು, ವಿದ್ಯುತ್‌ ಪರಿವರ್ತಕಗಳ ರಿಪೇರಿಗಾಗಿ ರೈತರು ತಿಂಗಳುಗಟ್ಟಲೆ ಅಲೆಯಬೇಕಾಗಿದೆ. ಸಂಜೆ 6ರಿಂದ ರಾತ್ರಿ 9ರ ಅವಧಿಯಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳಿಸಬಾರದು,” ಎಂದು ಚಿದಾನಂದ ಗೌಡ ‘ಆಗ್ರಹಿಸಿದರು.ಸಚಿವ ಕೆ.ಜೆ. ಜಾರ್ಜ್, “ರಾಜ್ಯದಲ್ಲಿ ವಿದ್ಯುತ್‌ ಪರಿವರ್ತಕಗಳ ಬ್ಯಾಂಕ್ ಸ್ಥಾಪಿಸಲಾಗಿದೆ. ನಗರ ಪ್ರದೇಶಗಳಲ್ಲಿ 24 ತಾಸು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 72 ಗಂಟೆಯೊಳಗೆ ಟ್ರಾನ್ಸ್‌ಫಾರ್ಮ‌್ರಗಳನ್ನು ಬದಲಿಸಿಕೊಡಲಾಗುತ್ತಿದೆ.ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್‌ನ ಸಬ್ಸಿಡಿಗೆ ವಾರ್ಷಿಕ 24 ಸಾವಿರ ಕೋಟಿ ವೆಚ್ಚವಾಗುತ್ತಿದೆ,” ಎಂದು ಹೇಳಿದರು.ಠೇವಣಿ ಕಟ್ಟದಿದ್ದರೆ ಸಂಪರ್ಕ ಕಡಿತ”ಅಕ್ರಮ ಸಕ್ರಮ ಯೋಜನೆಯಡಿ 4.50 ಲಕ್ಷ ಕೃಷಿ ಪಂಪ್‌ಸೆಟ್‌ಗಳ ಪೈಕಿ 3.50 ಲಕ್ಷ ಪಂಪ್‌ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ. ಕೇವಲ 50 ರೂ. ಶುಲ್ಕ ಪಾವತಿ ಮಾಡಿರುವವರ ಪಂಪ್‌ಸೆಟ್ಗಳನ್ನು ಸಕ್ರಮ ಮಾಡಲಾಗಿದೆ. ಆದರೆ, ಕೆಲವರು ನಿಗದಿತ ಠೇವಣಿಯನ್ನು ಪಾವತಿ ಮಾಡುತ್ತಿಲ್ಲ. ಅವರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು. ಅಲ್ಲದೆ, ಅನಧಿಕೃತವಾಗಿ ಸಂಪರ್ಕ ಪಡೆದಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು,’ ಎಂದು ಸಚಿವ ಜಾರ್ಜ್ ಎಚ್ಚರಿಕೆ ನೀಡಿದರು.

[t4b-ticker]
error: Content is protected !!