ಚೆನ್ನೈ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅಭಿವೃದ್ಧಿ ನೀತಿ ಗುಜರಾತ್ ಕೇಂದ್ರಿತವಾಗಿದೆ ಎಂದು ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಹಾಗೂ ‘ವಿ ದಿ ಲೀಡರ್ಸ್’ ಚಳವಳಿಯ ಸಂಸ್ಥಾಪಕ ಕೆ.ಅಣ್ಣಾಮಲೈ ಕಟುವಾಗಿ ಟೀಕಿಸಿದ್ದಾರೆ.
ಹೂಡಿಕೆ, ತಂತ್ರಜ್ಞಾನ ಯೋಜನೆಗಳು ಮತ್ತು ಬೃಹತ್ ಕ್ರೀಡಾಕೂಟಗಳು ಕೇವಲ ಒಂದೇ ರಾಜ್ಯಕ್ಕೆ ಸೀಮಿತವಾಗಬಾರದು ಎಂದು ಅಣ್ಣಾಮಲೈ ಪ್ರತಿಪಾದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಗುಜರಾತ್ ರಾಜ್ಯದವರು ಎಂಬುದನ್ನು ಅಣ್ಣಾಮಲೈ ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.ಚೆನ್ನೈನಲ್ಲಿ ಸೋಮವಾರ ನಡೆದ ‘ಇಂಡಿಯಾ ಟುಡೇ ತಮಿಳುನಾಡು ರೌಂಡ್ ಟೇಬಲ್” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಿಜೆಪಿ ನಿರ್ಧಾರಗಳು ದಿನದಿಂದ ದಿನಕ್ಕೆ ದೆಹಲಿ ಕೇಂದ್ರಿತ ಆಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜ್ಯ ಮಟ್ಟದ ನಾಯಕರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದರು.42 ವರ್ಷದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ರಾಜಕಾರಣಿ ಅಣ್ಣಾಮಲೈ ಗುಜರಾತ್ ಕೇಂದ್ರಿತ ಮಾದರಿಯನ್ನು ತರಾಟೆಗೆ ತೆಗೆದುಕೊಂಡರು. ಎಐ ಕಂಪನಿಗಳು, ಸೆಮಿಕಂಡಕ್ಟರ್ ಕಂಪನಿಗಳು ಅಲ್ಲಿಗೆ ಹೋಗುವುದನ್ನು ಒಪ್ಪಲು ಸಾಧ್ಯವಿಲ್ಲ. 2030ರ ಕಾಮನ್‌ವೆಲ್ತ್ ಗೇಮ್ಸ್, ಪೊಲೀಸ್ ಗೇಮ್ಸ್ ಮತ್ತು 2036ರ ಒಲಿಂಪಿಕ್ಸ್ ಕ್ರೀಡಾಕೂಟಗಳೂ ಅಹಮದಾಬಾದ್‌ಗೆ ಹೋಗುತ್ತಿವೆ. ಇಡೀ ಭಾರತದ ಅಭಿವೃದ್ಧಿಗೆ ‘ಗುಜರಾತ್ ಮಾದರಿ’ಯನ್ನು ಹೇರುವುದು ಸರಿಯಲ್ಲ. ಈ ವ್ಯವಸ್ಥೆ ಬದಲಾಗಬೇಕು, ಜನ ಇದನ್ನು ಗಮನಿಸುತ್ತಿದ್ದಾರೆ ಎಂದು ಕಿಡಿಕಾರಿದರು.












































