ಸುಬ್ರಹ್ಮಣ್ಯ: ನಾಗರಾಧನೆಗೆ ಪವಿತ್ರ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಹೆಸರನ್ನು ಬಳಸಿಕೊಂಡು ಕೆಲವು ಖಾಸಗಿ ವೆಬ್‌ಸೈಟ್‌ಗಳು ಮತ್ತು ಏಜೆನ್ಸಿಗಳು ಭಕ್ತರ ಭಾವನೆಗೆ ವಂಚನೆ ಮಾಡುತ್ತಿವೆ.ದೇವಸ್ಥಾನದ ಚಿತ್ರಗಳನ್ನು ಹಾಕಿ, ವಿಡಿಯೋ ಮುಖಾಂತರ “ನಾವು ಆನ್‌ಲೈನ್‌ನಲ್ಲೇ ನಿಮ್ಮ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಮಾಡಿಕೊಡುತ್ತೇವೆ” ಎಂದು ಹಣ ಪಡೆಯುತ್ತಿದ್ದಾರೆ. ಇದರಿಂದ ಭಕ್ತರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸತ್ಯ ಏನು?
1. ಅಧಿಕೃತ ವೆಬ್‌ಸೈಟ್ ಒಂದೇ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅಧಿಕೃತ ಪೂಜೆ ಬುಕಿಂಗ್ Website: https://itms.kar.nic.in
2. ಖಾಸಗಿ ಸೈಟ್‌ಗಳಿಗೆ ಸಂಬಂಧವಿಲ್ಲ: ಯಾವುದೇ ಖಾಸಗಿ ಜಾಲತಾಣಗಳು, ಟ್ರಸ್ಟ್ ವೆಬ್‌ಸೈಟ್‌ಗಳು, ಮಠಗಳ ವೆಬ್ ಸೈಟ್‌ಗಳು ದೇವಸ್ಥಾನಕ್ಕೆ ಅಧಿಕೃತವಾಗಿ ಸಂಬಂಧಿಸಿಲ್ಲ. ಇವು ಇ-ಕಾಮರ್ಸ್ ಮಾದರಿಯಲ್ಲಿ ನಡೆಯುವ ಖಾಸಗಿ ಸೇವಾ ಸಂಸ್ಥೆಗಳು.
3. ಹೆಚ್ಚುವರಿ ಹಣ: ಇವರು ದೇವಸ್ಥಾನದ ನಿಜವಾದ ಪೂಜೆ ದರಕ್ಕಿಂತ ತಮ್ಮ ಕಮಿಷನ್ ಮತ್ತು ಪ್ರಸಾದ ಕಳುಹಿಸುವ ಹೆಸರಿನಲ್ಲಿ ಹೆಚ್ಚಿನ ಹಣ ಪಡೆಯುತ್ತಾರೆ. ಪ್ರಸಾದ ಸರಿಯಾಗಿ ಬರುತ್ತದೆಯೆಂಬ ಗ್ಯಾರಂಟಿಯೂ ಇಲ್ಲ.
ಜಾಗ್ರತೆ ವಹಿಸಿ
ನಾಗರಾಧನೆ ಮಾಡಿಸಿಕೊಳ್ಳಬೇಕಾದರೆ 2 ದಾರಿಗಳಿವೆ:
1. ನೇರವಾಗಿ ಬನ್ನಿ: ನಿಮ್ಮ ಪೂಜೆಗಳಿದ್ದರೆ ನಿಮ್ಮ ಮನೆಯ ಹತ್ತಿರವಿರುವ ನಾಗಬನದಲ್ಲಿ ಮಾಡಿಸಿ, ಅಥವಾ ಕುಕ್ಕೆಯಲ್ಲೇ ಮಾಡಿಸಬೇಕೆಂದು ನಿಮಗೆ ಅನಿಸಿದರೆ ದೇವಾಲಯದಲ್ಲೇ ಮಾಡಿಸಿ ಅದು ಬಿಟ್ಟು ಬೇರೆ ಎಲ್ಲೋ ಮಾಡಿಸಿದರೆ ಕುಕ್ಕೆ ದೇವರಿಗೆ ಅರ್ಪಿಸಿದಂತೆ ಆಗುವುದಿಲ್ಲ ಆದುರಿಂದ ಅಧಿಕೃತವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಸೇವೆ ಪಡೆಯಿರಿ ಅಥವಾ ಮೇಲೆ ನೀಡಿರುವ ಅಧಿಕೃತ ಸರ್ಕಾರಿ ITMS ವೆಬ್‌ಸೈಟ್ ಮೂಲಕ ಮಾತ್ರ ಬುಕ್ ಮಾಡಿ.
ಇಂಟರ್ನೆಟ್‌ನಲ್ಲಿ ಬೇರೆ ಸೈಟ್‌ಗಳ ರಿವ್ಯೂ ನೋಡಿ, URL ಚೆಕ್ ಮಾಡಿ. ಅನುಮಾನ ಬಂದರೆ ಬುಕ್ ಮಾಡಬೇಡಿ.ಈ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿ ಈಗಾಗಲೇ ಪೊಲೀಸ್ ಇಲಾಖೆಗೆ ದೂರು ನೀಡಿದೆ. ಮುಜರಾಯಿ ಇಲಾಖೆಯೂ ಈ ಬಗ್ಗೆ ಗಮನಹರಿಸಿ, ದೇವಸ್ಥಾನದ ಹೆಸರಿನಲ್ಲಿ ದಾರಿ ತಪ್ಪಿಸುವ ಸಂಸ್ಥೆ, ವ್ಯಕ್ತಿ ಮತ್ತು ವೆಬ್ ಸೈಟ್‌ಗಳ ಮೇಲೆ ನಿಗಾ ವಹಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದ ಪಾವಿತ್ರ್ಯತೆ ಕಾಪಾಡೋಣ.












































