ಬೆಂಗಳೂರು: ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ 51,720 ಫಲಾನುಭವಿಗಳ ಪಿಂಚಣಿ ರದ್ದು ಮಾಡಲಾಗಿದೆ ಎಂದು ಕಂದಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.
ಕಾಂಗ್ರೆಸ್‌ನ ರೂಪಕಲಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ರಾಷ್ಟ್ರೀಯ ವಿಧವಾ ವೇತನ, ಅಂಗವಿಕಲರ ವೇತನ, ಸಂಧ್ಯಾಸುರಕ್ಷಾ, ಮನಸ್ವಿನಿ, ಮೈತ್ರಿ ಯೋಜನೆಗಳ ಫಲಾನುಭವಿಗಳನ್ನು ಪರಿಶೀಲನೆಗೆ ಒಳಪಡಿಸಿದ್ದು, ಅಂತಹ ಯೋಜನೆಗಳ ಅಡಿ ಪಿಂಚಣಿ ಪಡೆಯುತ್ತಿರುವ ಹಲವರ ದಾಖಲೆಗಳು ಸಮರ್ಪಕವಾಗಿಲ್ಲ ಎಂಬುದು ಪತ್ತೆಯಾಗಿದೆ’ ಎಂದರು.ಪಿಂಚಣಿ ಸ್ಥಗಿತಗೊಂಡಿರುವ ವಿವಿಧ ಯೋಜನೆಗಳ ಫಲಾನುಭವಿಗಳು ತಮ್ಮ ಆದಾಯ ಪ್ರಮಾಣಪತ್ರ, ಯುಡಿಐಡಿ ಕಾರ್ಡ್, ವಯಸ್ಸಿನ ದಾಖಲೆಗಳನ್ನು ಆಯಾ ತಾಲ್ಲೂಕು ಕಚೇರಿಗಳಿಗೆ ಸಲ್ಲಿಸಬೇಕು. ಅದಕ್ಕಾಗಿ 30 ದಿನಗಳ ಸಮಯ ನೀಡಲಾಗಿದೆ. ಪರಿಶೀಲನೆ ನಂತರ ಅರ್ಹರೆಂದು ಕಂಡು ಬಂದ ಫಲಾನುಭವಿಗಳಿಗೆ ಮಾರ್ಚ್ 2026ರಿಂದಲೇ ಪೂರ್ವಾನ್ವಯ ಮಾಡಿ ಪಿಂಚಣಿ ಪಾವತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.’ಸಂಯೋಜನೆ ಆ್ಯಪ್ ಮೂಲಕ ಸಂದೇಹಾಸ್ಪದ ಫಲಾನುಭವಿಗಳು ಎಂದು ಗುರುತಿಸಿರುವ ವೃದ್ಧರು, ಅಂಗವಿಕಲರು ಸೇರಿದಂತೆ ದುರ್ಬಲರ ಮನೆಗೆ ಗ್ರಾಮ ಆಡಳಿತಾಧಿಕಾರಿಗಳು ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸುತ್ತಾರೆ. ಈಗಾಗಲೇ ದಾಖಲೆ ನೀಡಿರುವ 23,14,544 ಫಲಾನುಭವಿಗಳ ದಾಖಲೆಗಳು ಸಮರ್ಪಕವಾಗಿಲ್ಲ ಎನ್ನುವ ಮಾಹಿತಿ ಇದೆ. ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.
`ಆದಾಯ ತೆರಿಗೆ ಪಾವತಿಸುವವರಿಗೆ ಪಿಂಚಣಿ ಹಣ ಸ್ಥಗಿತ ಮಾಡಿರುವುದು ಸರಿಯಾದ ಕ್ರಮ. ಆದರೆ, ಹಲವು ವೃದ್ಧರು ತೊಂದರೆಗೆ ಒಳಗಾಗಿದ್ದಾರೆ. ಕಂದಾಯ ಇಲಾಖೆ ಮಾನವೀಯ ದೃಷ್ಟಿಯಿಂದ ನೋಡಬೇಕು’ ಎಂದು ರೂಪಕಲಾ ಒತ್ತಾಯಿಸಿದರು.












































