ಸುಳ್ಯ:ಪರಿವರ್ತನೆ ಜಗದ ನಿಯಮ, ಸಂಪರ್ಕವಿಲ್ಲದ ಗ್ರಾಮಗಳ ಕೊಂಡಿಯಾಗಿ, ಲಾಭ ನಷ್ಟಕ್ಕಿಂತ 1980ರ ದಶಕದಲ್ಲಿ ಸುಳ್ಯ ತಾಲೂಕಿನ ಅಜ್ಜಾವರ, ಮಂಡೆಕೋಲು, ತೋಡಿಕಾನದಂತಹ ಕುಗ್ರಾಮಗಳಿಗೆ ನೂರಾರು ಜನರು ನಗರದೊಂದಿಗೆ ಸಂಪರ್ಕಕ್ಕೆ ಪರದಾಡುತ್ತಿದ್ದ ಸಂದರ್ಭದಲ್ಲಿ, ಚಾಲೆಂಜ್ ಸ್ವೀಕರಿಸಿ ಕಿರಿದಾದ ಕಚ್ಚಾ ರಸ್ತೆಯಲ್ಲೂ ಬಸ್ ಸಂಚಾರ ಆರಂಭಿಸಿ ಸಂಪರ್ಕ ಕೊಂಡಿಯಾದವರು ದಿವಂಗತ ನಾರಾಯಣ ರೈ,ನಾಳೆ (ಸೆ.16 ಬುಧವಾರದಿಂದ) ಕುಗ್ರಾಮ ಸೀಮೆಯ ಮಲ್ಲಿಕಾರ್ಜುನ ದೇವಸ್ಥಾನವಿರುವ ತೋಡಿಕಾನಕ್ಕೆ ಸರ್ಕಾರಿ ಬಸ್ ಪ್ರಾರಂಭವಾಗಲಿದೆ. ಆದರೆ ಅದಕ್ಕಿಂತ 40 ವರ್ಷಗಳ ಹಿಂದೆಯೇ ಗ್ರಾಮೀಣ ಜನರ ಬದುಕಿನ ಬಂಡಿಯ ಸಾರಥಿಯಾಗಿ ಈ ಮಾರ್ಗದಲ್ಲಿ ಸೇವೆ ನೀಡಿದ ಅವಿನಾಶ್ ಬಸ್ ನ ಕೊಡುಗೆಯನ್ನು ಮರೆಯುವಂತಿಲ್ಲ.
ಗ್ರಾಮೀಣ ಸಂಚಾರ ಕ್ರಾಂತಿಯ ಹರಿಕಾರ: ಪೇರಾಲು ಪೂಜಾರಿ ಮನೆ ರಾಮಣ್ಣ ರೈ ಮತ್ತು ಸೀತಮ್ಮ ರೈ ದಂಪತಿಯ ಪುತ್ರ ನಾರಾಯಣ ರೈ (65) ಅವರನ್ನು ಗ್ರಾಮೀಣ ಸಂಚಾರ ಕ್ರಾಂತಿಯ ಹರಿಕಾರ ಎಂದೇ ಕರೆಯಲಾಗುತ್ತಿತ್ತು.
ಸುಳ್ಯದಿಂದ ದೊಡ್ಡ ನಗರಗಳಿಗೆ ಬಸ್ ಓಡಿಸುವ ಅವಕಾಶವಿದ್ದರೂ, ನಾರಾಯಣ ರೈ ಅವರು ಆಯ್ಕೆ ಮಾಡಿಕೊಂಡದ್ದು ಹಿಂದುಳಿದ ಗ್ರಾಮಗಳನ್ನೇ. ಯಾವ ಗ್ರಾಮಗಳಿಗೆ ಬಸ್ ವ್ಯವಸ್ಥೆ ಅಥವಾ ವಾಹನ ಸೌಕರ್ಯ ಇರಲಿಲ್ಲವೋ ಅಂತಹ ಕುಗ್ರಾಮಗಳಿಗೇ ಸೇವೆ ನೀಡಿದ್ದು ಅವರ ವಿಶೇಷ.ಆಗ ಉತ್ತಮ ರಸ್ತೆಯೇ ಇರಲಿಲ್ಲ, ಡಾಂಬರೇ ಇಲ್ಲದ ಕಿರಿದಾದ ಕಚ್ಚಾ ರಸ್ತೆಯಲ್ಲಿಯೂ ಅವಿನಾಶ್ ಬಸ್‌ಗಳು ಸಂಚರಿಸಿ ಗ್ರಾಮಗಳಿಗೆ ಸಂಪರ್ಕ ಸೇತುವೆಯಾದವು.
ಕಳೆದ ನಾಲ್ಕು ದಶಕಗಳಿಂದ (40 ವರ್ಷಗಳಿಂದ) ಸುಳ್ಯ ತಾಲೂಕಿನ ಗ್ರಾಮೀಣ ಭಾಗಗಳಿಗೆ ಜೀವನಾಡಿಯಾಗಿದ್ದ ಈ ಬಸ್‌ಗಳು, 80-90ರ ದಶಕದಲ್ಲಿ ಜನರಿಗೆ ಏಕೈಕ ಆಶ್ರಯವಾಗಿತ್ತು. ಅನೇಕ ಬಾರಿ ಸ್ವತಃ ಚಾಲಕರಾಗಿ ಕೆಲಸ ಮಾಡಿ ಜನರನ್ನು ತಲುಪಿಸಿದ ನಾರಾಯಣ ರೈ ಅವರು, 2021ರಲ್ಲಿ ಅನಾರೋಗ್ಯದ ಕಾರಣದಿಂದ ನಿಧನರಾದರು.
ಸರ್ಕಾರಿ ಬಸ್ ಬರುವುದು ಸ್ವಾಗತಾರ್ಹ. ಆದರೆ ಅದಕ್ಕೂ ಮೊದಲು ಗ್ರಾಮೀಣ ಬದುಕಿಗೆ ಬೆಳಕಾದ ಅವಿನಾಶ್ ಬಸ್ ಮತ್ತು ನಾರಾಯಣ ರೈ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ, ವ್ಯವಹಾರದಲ್ಲಿ ಲಾಭ ನಷ್ಟ ಸಹಜ ಆದರೆ ಗ್ರಾಮೀಣ ಪ್ರದೇಶ ಸರ್ಕಾರಿ ಬಸ್ ಓಡಾಡದ ಕಾಲದಲ್ಲಿ ಬಸ್ ಸೇವೆ ಮುಖಾಂತರ ನೂರಾರು ವಿದ್ಯಾರ್ಥಿಗಳು, ಬದುಕು ಕಟ್ಟಿಕೊಳ್ಳಲು ಅವಿನಾಶ್ ಬಸ್ ಕಾರಣವಾಗಿರುವುದನ್ನು ನೆನಪಿಸಿಕೊಳ್ಳಲೆಬೇಕು.
















































