ನವದೆಹಲಿ: ವಿಮಾನ ಇಂಧನ (ಎಟಿಎಫ್) ದರದಲ್ಲಿಹೆಚ್ಚಳವಾದ ಬೆನ್ನಲ್ಲೇ, ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊ ‘ಇಂಧನ ಶುಲ್ಕ’ವನ್ನು (ಸರ್ಚಾರ್ಜ್) ಸೋಮವಾರ ಪರಿಷ್ಕರಿಸಿದೆ. ಇದರಿಂದ ದೇಶೀಯ, ಅಂತರರಾಷ್ಟ್ರೀಯ ವಿಮಾನ ಪ್ರಯಾಣ ದರದಲ್ಲಿ ಹೆಚ್ಚಳವಾಗಲಿದೆ.
ದೇಶೀಯ ವಿಮಾನಗಳಿಗೆ ಸಂಬಂಧಿಸಿದ ಪರಿಷ್ಕೃತ ಇಂಧನ ಶುಲ್ಕವು ₹375ರಿಂದ ₹1,300 ಇರಲಿದೆ. ಅಂತರರಾಷ್ಟ್ರೀಯ ವಿಮಾನಗಳಿಗೆ ಈ ಶುಲ್ಕದ ಪ್ರಮಾಣವು ₹1,000 ರಿಂದ ₹10,000ವರೆಗೆ ಇರಲಿದೆ.
ಈ ಶುಲ್ಕವು ಪ್ರಯಾಣಿಸುವ ದೂರದ ಮೇಲೆ ಅವಲಂಬಿತವಾಗಿದ್ದು, ಟಿಕೆಟ್ ದರಗಳಲ್ಲಿಯೂ ಹೆಚ್ಚಳವಾಗಲಿದೆ. ಅಕ್ಟೋಬರ್ 6ರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರಲಿವೆ ಎಂದು ಸಂಸ್ಥೆ ಹೇಳಿದೆ.ಆಗಸ್ಟ್‌ನಲ್ಲಿ ಎಟಿಎಫ್ ದರವನ್ನು ಪ್ರತಿ ಲೀಟರ್‌ಗೆ ₹5ರಷ್ಟು ಏರಿಕೆ ಮಾಡಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಮತ್ತೆ ಪ್ರತಿ ಲೀಟರ್‌ಗೆ ₹6.28ರಷ್ಟು ಹೆಚ್ಚಿಸಲಾಗಿತ್ತು. ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯ ವೆಚ್ಚದಲ್ಲಿ ಎಟಿಎಫ್ ಶೇಕಡ 40ರಷ್ಟು ಪಾಲು ಹೊಂದಿರುತ್ತದೆ. ಹೀಗಾಗಿ ಇಂಧನ ಬೆಲೆ ವಿಮಾನಯಾನ ಸಂಸ್ಥೆಗಳಿಗೆ ಪ್ರಮುಖ ವೆಚ್ಚದ ಅಂಶವಾಗಿದೆ.
ಪರಿಷ್ಕೃತ ಶುಲ್ಕಗಳು ಅಕ್ಟೋಬರ್ 6ರಿಂದ ಮಾಡುವ ಎಲ್ಲಾ ಹೊಸ ಬುಕಿಂಗ್‌ಗಳಿಗೆ ಅನ್ವಯಿಸುತ್ತವೆ ಎಂದು ಇಂಡಿಗೊ ಪ್ರಕಟಣೆಯಲ್ಲಿ ತಿಳಿಸಿದೆ.











































