ಯತ್ನಾಳ್ ಉಚ್ಚಾಟನೆಯಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಆಗದು: ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ್

Picture of Savistara

Savistara

Bureau Report

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟಿಸಿದ ಪಕ್ಷದ ತೀರ್ಮಾನವನ್ನು ರಾಜ್ಯ ಬಿಜೆಪಿ ಸ್ವಾಗತಿಸುತ್ತದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆಯಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಆಗಲಾರದು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಲ್ಹಾದ್ ಜೋಶಿಯವರು ಅಧ್ಯಕ್ಷರಾಗಿದ್ದಾಗ ಹಿಂದೆ ಯತ್ನಾಳ್ ಅವರನ್ನು ಉಚ್ಚಾಟಿಸಲಾಗಿತ್ತು. ಯಡಿಯೂರಪ್ಪನವರು ಅದನ್ನು ರದ್ದು ಮಾಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದರೂ ಅವರ ವರ್ತನೆಯಲ್ಲಿ ಸುಧಾರಣೆ ಆಗಲಿಲ್ಲ ಎಂದರು.ಕಳೆದ ಒಂದೂವರೆ ವರ್ಷದಿಂದ ಬಿಜೆಪಿ ಶಾಸಕರಾಗಿರುವ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದ ನಾಯಕರ ವಿರುದ್ಧವಾಗಿ ಅಶಿಸ್ತಿನಿಂದ ವರ್ತಿಸಿದ್ದರು. ಅವರ ವಿರುದ್ಧ ಹೇಳಿಕೆ ನೀಡಿದ್ದಲ್ಲದೇ, ಪಕ್ಷಕ್ಕೆ ಮುಜುಗರ ಆಗುವಂತೆ ಹೇಳಿಕೆ ಬಿಡುಗಡೆ ಮಾಡಿದ್ದರು. ಸುಮಾರು ವರ್ಷಗಳಿಂದ ಇದು ನಡೆದಿತ್ತು ಎಂದು ಹೇಳಿದರು.

ಕೇಂದ್ರ ಶಿಸ್ತು ಸಮಿತಿ 3 ಬಾರಿ ನೋಟಿಸ್ ಕೊಟ್ಟಿತ್ತು:

ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಅವರ ವಿರುದ್ಧವಾಗಿ, ಕರ್ನಾಟಕದಲ್ಲಿ ಯಡಿಯೂರಪ್ಪ, ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್ ಅವರ ವಿರುದ್ಧವಾಗಿ ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ವರ್ತಿಸಿದ್ದರು. ಕೇಂದ್ರ ಶಿಸ್ತು ಸಮಿತಿ ಮೂರು ಬಾರಿ ಅವರಿಗೆ ನೋಟಿಸ್ ಕೊಟ್ಟಿತ್ತು. ಅವರು ಸುಧಾರಣೆ ಮಾಡಿಕೊಂಡು ತಪ್ಪನ್ನು ತಿದ್ದಿಕೊಳ್ಳುವ ನಿರೀಕ್ಷೆ ಇಡಲಾಗಿತ್ತು. ಆದರೆ ತಪ್ಪನ್ನು ಅವರು ತಿದ್ದಿಕೊಂಡಿಲ್ಲ. ಕೇಂದ್ರ ಶಿಸ್ತು ಸಮಿತಿಯು ಯತ್ನಾಳ್​ರನ್ನು ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಇದು ಕೇಂದ್ರ ಶಿಸ್ತು ಸಮಿತಿ ಮತ್ತು ಪಕ್ಷದ ತೀರ್ಮಾನ. ಇದರೊಂದಿಗೆ ಎರಡನೇ ಬಾರಿಗೆ ಅವರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದರು.

ಇದೊಂದು ಎಚ್ಚರಿಕೆಯ ಘಂಟೆ:

ನಮ್ಮ ಅಭ್ಯರ್ಥಿ ವಿರುದ್ಧ ಅವರು ಎಂಎಲ್‍ಸಿ ಸ್ಥಾನಕ್ಕೆ ಸ್ಪರ್ಧಿಸಿ ಎಂಎಲ್‍ಸಿ ಆಗಿದ್ದರು. ಆದರೂ ಯಡಿಯೂರಪ್ಪ ಅವರು ಉಚ್ಚಾಟನೆ ರದ್ದು ಮಾಡಿ ಎಂಎಲ್‍ಎ ಟಿಕೆಟ್ ಕೊಟ್ಟಿದ್ದರು. ಅವರು ಸುಧಾರಣೆ ಆಗಲಿಲ್ಲ. ಟೀಕೆ ಮಾಡುತ್ತಾ ಬಂದರು. ಪಕ್ಷ ಇವರ ಹೇಳಿಕೆ, ನಡವಳಿಕೆಯನ್ನು ಗಂಭೀರವಾಗಿ ಪರಿಣಿಸಿ ಉಚ್ಚಾಟನೆ ಮಾಡಿದೆ. ಪಕ್ಷದ ತೀರ್ಮಾನವನ್ನು ರಾಜ್ಯ ಬಿಜೆಪಿ ಸ್ವಾಗತಿಸುತ್ತದೆ. ಪಕ್ಷದ ವಿರುದ್ಧ ಅಶಿಸ್ತಿನಿಂದ ನಡೆದುಕೊಳ್ಳುವವರಿಗೆ ಇದೊಂದು ಎಚ್ಚರಿಕೆಯ ಘಂಟೆ ಎಂದು ತಿಳಿದುಕೊಳ್ಳಬೇಕಿದೆ ಎಂದರು.

ಫೆಬ್ರವರಿ 10 ರಂದು ಬಸನಗೌಡ ಪಾಟೀಲ್ ಯತ್ನಾಳ್​ಗೆ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್​ ನೋಟಿಸ್​ ಜಾರಿ ಮಾಡಿ, 72 ಗಂಟೆಗಳಲ್ಲಿ ಉತ್ತರಿಸಿ ಎಂದು ಸೂಚಿಸಿತ್ತು. ಇದಾದ ಬಳಿಕ ಅವರು ಉತ್ತರವನ್ನು ಕೊಟ್ಟಿದ್ದರು. ಅವರ ಉತ್ತರವನ್ನು ಪರಿಶೀಲಿಸಿ ಅಂತಿಮವಾಗಿ ಪಕ್ಷ ಅವರನ್ನು ಇಂದು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ.

[t4b-ticker]
error: Content is protected !!