ಛತ್ತೀಸ್‌ಗಢದಲ್ಲಿ ಇಂದು ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಭರ್ಜರಿ ಯಶ ಕಂಡಿವೆ. ಇದನ್ನು ಕೇಂದ್ರಹ ಗೃಹ ಸಚಿವ ಅಮಿತ್ ಶಾ ಅಭಿನಂದಿಸಿದ್ದಾರೆ.
ನವದೆಹಲಿ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ 16 ಮಾವೋವಾದಿಗಳು ಸಾವನ್ನಪ್ಪಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಕ್ಸಲಿಸಂ ಮೇಲೆ ಮತ್ತೊಂದು ಬೃಹತ್ ದಾಳಿ. ನಮ್ಮ ಭದ್ರತಾ ಪಡೆಗಳು ಸುಕ್ಮಾದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 16 ನಕ್ಸಲರು ಹತರಾಗಿದ್ದಾರೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ವಶಕ್ಕೆ ಪಡೆಯಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಶಸ್ತ್ರಾಸ್ತ್ರಗಳು ಮತ್ತು ಹಿಂಸಾಚಾರದಿಂದ ಬದಲಾವಣೆ ತರಲು ಸಾಧ್ಯವಿಲ್ಲ. ಶಾಂತಿ ಮತ್ತು ಅಭಿವೃದ್ಧಿ ಕಾರ್ಯಗಳಿಂದ ಮಾತ್ರ ಅದು ಸಾಧ್ಯ ಎಂದು ಅವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 2026 ರ ಮಾರ್ಚ್ 31ಕ್ಕೂ ಮೊದಲು ನಕ್ಸಲಿಸಂ ಅನ್ನು ದೇಶದಿಂದಲೇ ನಿರ್ಮೂಲನೆ ಮಾಡಲು ಸರ್ಕಾರ ಸಂಕಲ್ಪ ತೊಟ್ಟಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.ನಾವು ಇಲ್ಲಿಯವರೆಗೆ 16 ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಂಡಿದ್ದೇವೆ. ಎಕೆ -47, ಎಸ್‌ಎಲ್‌ಆರ್, ಐಎನ್‌ಎಸ್‌ಎಎಸ್ ರೈಫಲ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಸಿಕ್ಕಿವೆ. ಕಾರ್ಯಾಚರಣೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಬಸ್ತಾರ್ ಐಜಿಪಿ ಸುಂದರರಾಜ್ ಮಾಹಿತಿ ನೀಡಿದ್ದಾರೆ.
ಛತ್ತೀಸ್‌ಗಢದಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಪ್ರಮುಖ ಎನ್‌ಕೌಂಟರ್‌ಗಳು
20 ಮಾರ್ಚ್ 2025: ಬಿಜಾಪುರ ಮತ್ತು ಕಾಂಕೇರ್‌ನಲ್ಲಿ ನಡೆದ ಎರಡು ನಕ್ಸಲ್ ಎನ್‌ಕೌಂಟರ್‌ಗಳಲ್ಲಿ 30 ನಕ್ಸಲರ ಸಾವು
ಫೆಬ್ರವರಿ 9, 2025: ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 31 ಮಾವೋವಾದಿಗಳ ಹತ
ಜನವರಿ 20-21, 2025: ಗರಿಯಾಬಂದ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 16 ಮಾವೋವಾದಿಗಳು ಖತಂ
ಜನವರಿ 19, 2025: ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಜಯರಾಮ್ ಅಲಿಯಾಸ್ ಚಲಪತಿ ಸೇರಿದಂತೆ 14 ಮಾವೋವಾದಿಗಳು ಬಲಿ
ಜನವರಿ 16, 2025: ಬಿಜಾಪುರ ಜಿಲ್ಲೆಯಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ 18 ಮಾವೋವಾದಿಗಳ ಸಾವು
22 ನವೆಂಬರ್ 2024: ಸುಕ್ಮಾ ಜಿಲ್ಲೆಯಲ್ಲಿ ಎನ್‌ಕೌಂಟರ್, 10 ಮಾವೋವಾದಿಗಳು ಹತ್ಯೆ.
04 ಅಕ್ಟೋಬರ್ 2024: ಅಬುಜ್ಮದ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 38 ನಕ್ಸಲರು ಹತ
10 ಮೇ 2024: ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 12 ನಕ್ಸಲರ ಸಾವು













































