ರಾಜಕೀಯ ಕಥಾಹಂದರದ ಎಂಪುರಾನ್ ಸಿನಿಮಾವು ತೀವ್ರ ವಿವಾದ ಸೃಷ್ಟಿಸಿದೆ. ಇದಕ್ಕೆ ನಟ ಮೋಹನ್ಲಾಲ್ ವಿಷಾದಿಸಿದ್ದು, ವಿವಾದಿತ ದೃಶ್ಯಗಳನ್ನು ಕೈಬಿಡುವುದಾಗಿ ಹೇಳಿದ್ದಾರೆ.
ತಿರುವನಂತಪುರಂ (ಕೇರಳ) : ಇತ್ತೀಚೆಗೆ ಬಿಡುಗಡೆಯಾದ ಮಲಯಾಳಂ ನಟ ಮೋಹನ್ಲಾಲ್ ಅಭಿನಯದ ‘ಎಲ್2: ಎಂಪುರಾನ್’ ಸಿನಿಮಾವು ವಿವಾದ ಸೃಷ್ಟಿಸಿದೆ. ಬಲಪಂಥೀಯ ರಾಜಕಾರಣದ ಟೀಕೆ, ಗುಜರಾತ್ ಗಲಭೆಯ ರಹಸ್ಯದ ಬಗ್ಗೆ ಉಲ್ಲೇಖಿಸಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ದಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಸಿನಿಮಾದ ವಿವಾದಿತ ದೃಶ್ಯಗಳನ್ನು ತೆಗೆದುಹಾಕುವುದಾಗಿ ಮೋಹನ್ಲಾಲ್ ಭರವಸೆ ನೀಡಿದ್ದಾರೆ.
ವಿಷಾದ ವ್ಯಕ್ತಪಡಿಸಿದ ನಟ: ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬರೆದುಕೊಂಡಿರುವ ನಟ, ಒಬ್ಬ ಕಲಾವಿದನಾಗಿ, ತಮ್ಮ ಯಾವುದೇ ಚಿತ್ರಗಳು ಯಾವುದೇ ರಾಜಕೀಯ ಚಳವಳಿ, ಸಿದ್ಧಾಂತ ಅಥವಾ ಒಂದು ಧಾರ್ಮಿಕ ಸಮುದಾಯದ ವಿರುದ್ಧ ದ್ವೇಷವನ್ನು ಬೆಳೆಯದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿದೆ. ಎಂಪುರಾನ್ನ ಕೆಲ ದೃಶ್ಯಗಳು ಅನೇಕರಿಗೆ ನೋವುಂಟು ಮಾಡಿದ್ದಕ್ಕೆ ವಿಷಾದಿಸುತ್ತೇನೆ ಎಂದಿದ್ದಾರೆ.ಸಿನಿಮಾ ತಂಡವು ವಿವಾದಿತ ದೃಶ್ಯಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಕಳೆದ ನಾಲ್ಕು ದಶಕಗಳಿಂದ ನಾನು ಸಿನಿಮಾದ ಮೂಲಕ ಜನರಲ್ಲಿ ಒಬ್ಬನಾಗಿ ಬದುಕುತ್ತಿದ್ದೇನೆ. ನಿಮ್ಮ ಪ್ರೀತಿ ಮತ್ತು ವಿಶ್ವಾಸವೇ ನನ್ನ ಶಕ್ತಿ. ಅದನ್ನು ಮೀರಿ ಈ ಮೋಹನ್ ಲಾಲ್ ಇಲ್ಲ ಎಂದು ಹೇಳಿದ್ದಾರೆ.ನಟ ಪೃಥ್ವಿರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಎಂಪುರಾನ್ ‘ಲೂಸಿಫರ್’ ಸಿನಿಮಾದ ಎರಡನೇ ಭಾಗವಾಗಿದೆ. ಸಿನಿಮಾದಲ್ಲಿ ಬಲಪಂಥೀಯ ರಾಜಕೀಯವನ್ನು ಟೀಕಿಸಲಾಗಿದೆ. ಗುಜರಾತ್ ಗಲಭೆಯ ಕುರಿತ ವಿಷಯವು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಸಂಘ ಪರಿವಾರವು ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇತ್ತ ಕಾಂಗ್ರೆಸ್ ಮತ್ತು ಎಡಪಂಥೀಯ ರಾಜಕೀಯ ಪಕ್ಷಗಳು ಸಿನಿಮಾದ ಕಥಾಹಂದರವನ್ನು ಮೆಚ್ಚಿಕೊಂಡಿವೆ.
ಎಂಪುರಾನ್ಗೆ ಕೇರಳ ಸಿಎಂ ಶ್ಲಾಘನೆ: ಈ ಮಧ್ಯೆ, ಮೋಹನ್ಲಾಲ್ ಅವರ ಸಿನಿಮಾಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೋಮುವಾದದ ವಿರುದ್ಧದ ನಿರ್ಮಾಪಕರನ್ನು ಮೆಚ್ಚಿದ್ದಾರೆ.ಸಿನಿಮಾದಲ್ಲಿನ ಕೆಲ ಅಂಶಗಳ ವಿರುದ್ಧ ಟೀಕೆಗಳು ವ್ಯಕ್ತವಾದ ಹಿನ್ನೆಲೆ ಚಿತ್ರವನ್ನು ವೀಕ್ಷಿಸಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ನಾಯಕರಿಗೆ ಇದು ಅಪಥ್ಯವಾಗಿದೆ. ಸಿನಿಮಾ ನಿರ್ಮಾಪಕರ ವಿರುದ್ಧ ಸಾರ್ವಜನಿಕ ಬೆದರಿಕೆ ಬಂದಿವೆ. ಕೆಲ ದೃಶ್ಯಾವಳಿಗಳನ್ನು ತೆಗೆದುಹಾಕುವ ಒತ್ತಡ ಬಂದಿದೆ. ಸಂಘ ಪರಿವಾರದ ಈ ನಡೆಯು ಕಳವಳಕಾರಿ ಎಂದು ಪಿಣರಾಯಿ ಟೀಕಿಸಿದ್ದಾರೆ. ಕಲಾವಿದರು ಕೋಮುವಾದದ ವಿರುದ್ಧ ನಿಲುವು ತೆಗೆದುಕೊಂಡಲ್ಲಿ ಅದನ್ನು ಟೀಕಿಸುವುದು ಮತ್ತು ಅವರ ಮೇಲೆ ದಾಳಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ.













































