ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬೆಲೆ ಏರಿಕೆ ಕುರಿತು ಮಾತನಾಡಿ, ರಾಜ್ಯ ಸರ್ಕಾರಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ತೆರಿಗೆ ಏರಿಕೆ ಮಾಡುತ್ತವೆ ಎಂದು ಸಮರ್ಥನೆ ನೀಡಿದ್ದಾರೆ.
ಬೆಂಗಳೂರು: “ಬೆಲೆ ಏರಿಕೆ ಕೇಂದ್ರ ಸರ್ಕಾರದ ನೀತಿಗಳಿಂದ ಆಗುತ್ತದೆ. ತೆರಿಗೆ ವಿಚಾರದಲ್ಲಿ ಕೇಂದ್ರವೇ ಹೆಚ್ಚು ನಿಯಂತ್ರಣ ಹೊಂದಿದೆ” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ರಾಜ್ಯ ಸರ್ಕಾರಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ತೆರಿಗೆ ಏರಿಕೆ ಮಾಡುತ್ತವೆ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ 2 ರೂಗೆ ಏರಿಕೆ ಸ್ವಾಭಾವಿಕ. ಕೇಂದ್ರ ಸರ್ಕಾರ ತೆರಿಗೆ ನಿಯಂತ್ರಿಸಿದರೆ ರಾಜ್ಯಗಳಿಗೆ ಅನುಕೂಲವಾಗುತ್ತದೆ” ಎಂದರು.
ವಕ್ಫ್ ತಿದ್ದುಪಡಿ ಮಸೂದೆ ವಿಚಾರ: “ಲೋಕಸಭೆಯಲ್ಲಿ ವಕ್ಫ್ ಮಸೂದೆಗೆ ಸಾಕಷ್ಟು ವಿರೋಧ ವ್ಯಕ್ತವಾದರೂ, 288 ಜನ ಸದಸ್ಯರು ಇದರ ಪರವಾಗಿ ಮತ ಚಲಾಯಿಸಿದ್ದಾರೆ. ಈ ಕಾರಣದಿಂದಾಗಿ, ರಾತ್ರಿ ಒಂದು ಗಂಟೆಗೆ ಮಸೂದೆಯು ಅಂಗೀಕಾರಗೊಂಡಿದೆ. ಆದರೆ, ಈ ನಿರ್ಧಾರಕ್ಕೆ ಬಹಳಷ್ಟು ಜನರಿಂದ ವಿರೋಧವಿದ್ದು, ಮುಖ್ಯವಾಗಿ ಮುಸಲ್ಮಾನ ಸಮುದಾಯ ಮತ್ತು ಇತರರು ಇದನ್ನು ರಾಜಕೀಯವಾಗಿ ಉಪಯೋಗಿಸುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ವಿಧೇಯಕ ಪಾಸ್ ಆಗಿದೆ. ಆದರೆ ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ” ಎಂದು ಹೇಳಿದರು.ರಾಜ್ಯದ ಸಚಿವರು ಮತ್ತು ಶಾಸಕರು ರಾಹುಲ್ ಗಾಂಧಿಯವರನ್ನು ಭೇಟಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, “ಅವರು ಬೇರೆ ವಿಚಾರಕ್ಕಾಗಿ ಹೋಗಿದ್ದಾರೆ. ರಾಜ್ಯ ರಾಜಕಾರಣದ ಬಗ್ಗೆ ಯಾವುದೇ ಚರ್ಚೆ ಆಗುವುದಿಲ್ಲ. ಇದು ಕೇವಲ ಸೃಷ್ಟಿ ಮಾತ್ರ” ಎಂದು ತಿಳಿಸಿದರು.
ಬಿಜೆಪಿ ಶಾಸಕರ ಅಮಾನತು ಸ್ಪೀಕರ್‌ಗೆ ಬಿಟ್ಟ ವಿಚಾರ: ವಿಧಾನಸಭೆಯಿಂದ 18 ಬಿಜೆಪಿ ಶಾಸಕರ ಅಮಾನತು ಕುರಿತ ಪ್ರಶ್ನೆಗೆ, “ಇದು ಸಭಾಧ್ಯಕ್ಷರಿಗೆ ಬಿಟ್ಟ ವಿಷಯವಾಗಿದ್ದು, ಇದರಲ್ಲಿ ಸರ್ಕಾರದ ಪಾತ್ರ ಇಲ್ಲ” ಎಂದರು.
“ಸ್ಪೀಕರ್ ಆಯ್ಕೆಯಲ್ಲಿ ಎಲ್ಲರೂ ಒಮ್ಮತದಿಂದ ಭಾಗಿಯಾಗಿದ್ದು, ಬಿಜೆಪಿಯವರು ಸಹ ಇದನ್ನು ಬೆಂಬಲಿಸಿದ್ದರು. ಆದರೆ, ಸಭಾಧ್ಯಕ್ಷರ ಪೀಠದ ಬಳಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸ್ಪೀಕರ್ ಎಷ್ಟೇ ಪರಿಪರಿಯಾಗಿ ಕೇಳಿಕೊಂಡರೂ, ಬಿಜೆಪಿಯವರು ಅವರ ಮಾತಿಗೆ ಗೌರವ ಕೊಡದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಸಚಿವ ಕೆ.ಎನ್.ರಾಜಣ್ಣ ಹಾಗೂ ಅವರ ಪುತ್ರ ರಾಜೇಂದ್ರ ಅವರ ಹನಿಟ್ರ್ಯಾಪ್ ಆರೋಪ ಪ್ರಕರಣದಲ್ಲಿ ಯೂ-ಟರ್ನ್ ಕುರಿತು ಪರಮೇಶ್ವರ್ ಪ್ರತಿಕ್ರಿಯಿಸಿದ್ದು, “ತನಿಖೆ ನಡೆಯುತ್ತಿದೆ. ಇದರ ಮಧ್ಯೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ತನಿಖೆಯ ಒಳಗಿನ ಮಾಹಿತಿ ನಮಗೆ ಗೊತ್ತಿಲ್ಲ. ರಾಜಣ್ಣ ಅವರು ಸದನದಲ್ಲಿ ಇರುವ ರೀತಿ ಬೀದಿಯಲ್ಲಿ ಇರುವುದು ಕಷ್ಟ” ಎಂದರು.ನಾಗಮೋಹನ್ ದಾಸ್ ಅವರ 40% ಕಮಿಷನ್‌ಗೆ ಸಾಕ್ಷಿಗಳಿಲ್ಲ ಎಂಬ ವರದಿಗೆ, “ಅವರು ತಮಗೆ ಸಿಕ್ಕ ಸಾಕ್ಷಿಗಳ ಆಧಾರದಲ್ಲಿ ವರದಿ ಮಾಡಿದ್ದಾರೆ. ಚುನಾವಣೆಯಲ್ಲಿ ನಾವು ಇದನ್ನು ಪ್ರಮುಖವಾಗಿ ಎತ್ತಿದ್ದೆವು. ಹೆಚ್ಚಿನ ಸಾಕ್ಷಿ ಸಿಕ್ಕರೆ ಅಂತಿಮ ವರದಿ ಸಲ್ಲಿಸಬಹುದು. ಇದು ಕೇವಲ ಮಧ್ಯಂತರ ವರದಿ” ಎಂದರು.ಇದೇ ವೇಳೆ ಮುಡಾ ಪ್ರಕರಣದಲ್ಲಿ ಇ.ಡಿ. ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, “ಕೋರ್ಟ್ ಅನುಮತಿ ಕೊಟ್ಟಿದ್ದರೆ ತನಿಖೆ ಮಾಡುತ್ತಾರೆ. ತನಿಖೆ ಮಾಡಲೇಬೇಕು” ಎಂದರು.













































