ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ಕರ್ನಾಟಕದ ಉಚ್ಚ ನ್ಯಾಯಾಲಯವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಲಹೆ ನೀಡಿದೆ.
ಬೆಂಗಳೂರು : ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಿರುವ ತತ್ವಗಳ ಉದ್ದೇಶವನ್ನು ಈಡೇರಿಸುವ ಸಲುವಾಗಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಕುರಿತಂತೆ ಕಾನೂನು ಜಾರಿಗೆ ತರಲು ಪ್ರಯತ್ನ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಸಮೀವುಲ್ಲಾ ಖಾನ್ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ನ್ಯಾಯಪೀಠ ಈ ಸಲಹೆ ನೀಡಿದೆ.ಭಾರತ ಸಂವಿಧಾನದ 44ನೇ ಪರಿಚ್ಛೇದದ ಅಡಿಯಲ್ಲಿ ಪ್ರತಿಪಾದಿಸಲಾಗಿರುವ ಏಕರೂಪ ನಾಗರಿಕ ಸಂಹಿತೆಯ ಶಾಸನವನ್ನು ಜಾರಿಗೆ ತರವುದರಿಂದ ನಿಜವಾದ ಜಾತ್ಯಾತೀತ, ಪ್ರಜಾತಂತ್ರ, ಗಣರಾಜ್ಯ ಏಕತೆ, ರಾಷ್ಟ್ರೀಯ ಸಮಗ್ರತೆ, ನ್ಯಾಯ ಮತ್ತು ಸ್ವಾತಂತ್ರ್ಯ ಸೇರಿದಂತೆ ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವ ಸಮಾನತೆ ಮತ್ತು ಭ್ರಾತೃತ್ವದ ಉದ್ದೇಶವನ್ನು ಈಡೇರಿಸಬುದಾಗಿದೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವುದರಿಂದ ಮಹಿಳೆಯರಿಗೆ ನ್ಯಾಯ ಒದಗಿಸಿದಂತಾಗಲಿದೆ. ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ಸಾಧಿಸಬಹುದಾಗಿದೆ. ಜಾತಿ ಧರ್ಮವನ್ನು ಬದಿಗಿರಿಸಿ ಸಮಾನತೆ ಕನಸನ್ನು ಕಾಣುವ ಮತ್ತು ಭ್ರಾತೃತ್ವದ ಮೂಲಕ ವೈಯಕ್ತಿಕ ಘನತೆಯನ್ನು ಖಾತರಿಪಡಿಸುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ದೇಶದಲ್ಲಿ ಗೋವಾ ಮತ್ತು ಉತ್ತರಾಖಂಡ ಸೇರಿ ಕೆಲವು ರಾಜ್ಯಗಳಲ್ಲಿ ಈಗಾಗಲೇ ಏಕರೂಪ ನಾಗರಿಕ ಸಂಹಿತೆ ಕುರಿತಂತೆ ಕಾನೂನುಗಳನ್ನು ಜಾರಿ ಮಾಡಲಾಗಿದೆ. ಅದೇ ರೀತಿಯಲ್ಲಿ ದೇಶದಲ್ಲಿ ಸಂವಿಧಾನ ಪರಿಚ್ಛೇದ 44ರ ಅಡಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಭರವಸೆಯೊಂದಿಗೆ ಈ ಆದೇಶವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾನೂನು ಕಾರ್ಯದರ್ಶಿಗಳಿಗೆ ಕಳುಹಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ನ್ಯಾಯಪೀಠ ಸೂಚನೆ ನೀಡಿದೆ.
ಭಾರತದಲ್ಲಿ ಎಲ್ಲಾ ಮಹಿಳೆಯರೂ ಸಮಾನರಾಗಿದ್ದಾರೆ. ಆದರೆ, ಧರ್ಮದ ಪ್ರಕಾರ ವೈಯಕ್ತಿಕ ಕಾನೂನು ಮಹಿಳೆಯರ ನಡುವೆ ವ್ಯತ್ಯಾಸವನ್ನುಂಟು ಮಾಡುತ್ತದೆ. ಹಿಂದೂ ಕಾನೂನಿನಡಿಯಲ್ಲಿ ಮಗಳಿಗೂ ಸಹ ಮಗನಂತೆಯೇ ಎಲ್ಲ ರೀತಿಯಲ್ಲಿಯೂ ಸಮಾನ ಸ್ಥಾನಮಾನ ಮತ್ತು ಹಕ್ಕುಗಳನ್ನು ನೀಡಲಾಗಿದೆ. ಆದರೆ, ಮಹಮ್ಮದೀಯ ಕಾನೂನಿನಲ್ಲಿ ಆ ರೀತಿಯಲ್ಲಿಲ್ಲ. ಹಿಂದೂ ಕಾನೂನಿನಲ್ಲಿ ಸಹೋದರಿಯಾದವರು ಸಮಾನ ಅರ್ಹತೆಗಳನ್ನು ಹೊಂದಿದ್ದರೆ ಮಹಮ್ಮದೀಯ ಕಾನೂನಿನಲ್ಲಿ ಸಹೋದರಿಯಾದವರು ಉಳಿಕೆ ಅಂಶದಲ್ಲಿ ಭಾಗಿದಾರರಾಗಲು ಅರ್ಹರಾಗಿರುತ್ತಾರೆ. ಆದರೆ, ಆಸ್ತಿಯಲ್ಲಿ ಪಾಲುದಾರರಾಗಲು ಅರ್ಹರಿಲ್ಲ. ಆದ್ದರಿಂದ ನಮ್ಮ ದೇಶಕ್ಕೆ ವೈಯಕ್ತಿಕ ಕಾನೂನುಗಳು ಹಾಗೂ ಧರ್ಮಕ್ಕೆ ಸಂಬಂಧಿಸಿದಂತೆ ಏಕರೂಪ ನಾಗರಿಕ ಸಂಹಿತೆ ಜಾರಿ ಅತ್ಯಗವಾಗಿದೆ. ಹಾಗಾದಲ್ಲಿ ಮಾತ್ರ ಸಂವಿಧಾನದ ಪರಿಚ್ಛೇದ 14ನೇ(ಸಮಾನತೆ) ವಿಧಿಯ ಉದ್ದೇಶವನ್ನು ಈಡೇರಿಸಬಹುದಾಗಿದೆ ಎಂದು ಪೀಠ ತಿಳಿಸಿದೆ.
ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಯ ಕುರಿತಂತೆ ಆದೇಶದಲ್ಲಿ ಉಲ್ಲೇಖಿಸಿರುವ ನ್ಯಾಯಪೀಠ, ಸಂವಿಧಾನದ ರಚನಾ ಸಮಿತಿಯ ಹಲವು ಸದಸ್ಯರು ಏಕರೂಪ ನಾಗರಿಕ ಸಂಹಿತೆಯ ಪರವಾಗಿದ್ದರು. ಕೆಲವು ಸದಸ್ಯರು ವಿರೋಧಿಸಿದ್ದರು. ಕರಡು ಸಮಿತಿಯ ಅಧ್ಯಕ್ಷ ಡಾ. ಬಿ. ಆರ್. ಅಂಬೇಡ್ಕರ್ ಏಕರೂಪ ನಾಗರಿಕ ಸಂಹಿತೆ ಪರವಾಗಿ ವಾದಿಸಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್. ಡಾ.ರಾಜೇಂದ್ರ ಪ್ರಸಾದ್, ಟಿ.ಕೃಷ್ಣಮಾಚಾರಿ ಮತ್ತು ಮೌಲಾನ ಹಸ್ರತ್ ಮೊಹಾನಿ ಅವರಂತಹ ನಾಯಕರು ಸಂಹಿತೆಯ ಪರವಾಗಿದ್ದರು ಎಂದು ತಿಳಿಸಿರುವ ನ್ಯಾಯಪೀಠ, ಸುಪ್ರೀಂಕೋರ್ಟ್ ಹಲವು ಪ್ರಕರಣಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ ಈ ಸಲಹೆ ನೀಡಿದೆ.













































