ಹೈದರಾಬಾದ್: ಟಾಲಿವುಡ್ ನಟ, ನಿರ್ಮಾಪಕ ವಿಷ್ಣು ಮಂಚು ( Vishnu Manchu) ತನ್ನ ಮಾನವೀಯ ಕಾರ್ಯದಿಂದ ಸುದ್ದಿಯಾಗಿದ್ದಾರೆ.ಇತ್ತೀಚೆಗೆ ಕಾಶ್ಮೀರದ ಪಹಲ್ಲಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಕನ್ನಡಿಗರೂ ಸೇರಿದಂತೆ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಕೃತ್ಯವನ್ನು ಭಾರತ ಬಲವಾಗಿ ಖಂಡಿಸಿದೆ. ಭಾರತದ ಜತೆ ಹಲವು ದೇಶಗಳು ಈ ಸಂದರ್ಭದಲ್ಲಿ ನಿಂತಿದೆ.ಪಾಕಿಸ್ತಾನದ ವಿರುದ್ಧ ಭಾರತ ಕಠಿಣ ಕ್ರಮಗಳನ್ನುಕೈಗೊಳ್ಳಲು ಮುಂದಾಗಿದೆ. ಈಗಾಗಲೇ ರಾಜತಾಂತ್ರಿಕವಾಗಿ ಭಾರತ ಈ ಕುರಿತು ದಿಟ್ಟವಾಗಿ ಹೆಜ್ಜೆಯಿಟ್ಟಿದೆ.ಪಹಲ್ಲಾಮ್ ಘಟನೆಯನ್ನು ಸಿನಿಮಾ ಸೆಲೆಬ್ರಿಟಿಗಳು ತೀವ್ರವಾಗಿ ಖಂಡಿಸಿದ್ದಾರೆ. ಟಾಲಿವುಡ್ ನಟ ವಿಷ್ಣು ಮಂಚು ಪಹಲ್ಲಾಮ್ ಕೃತ್ಯದಲ್ಲಿ ತನ್ನವರನ್ನು ಕಳೆದುಕೊಂಡ ಕುಟುಂಬದ ಜತೆಯಾಗಿ ನಿಂತಿರುವ ಕಾರ್ಯಕ್ಕೆ ಅನೇಕರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
ಪಹಲ್ಲಾಮ್‌ಗೆ ಪ್ರವಾಸಕ್ಕೆ ಹೋಗಿದ್ದ ಆಂಧ್ರದ ನೆಲ್ಲೂರು ಜಿಲ್ಲೆಯ ಕಾವೆಲ್ಲಿಯ ಕುಮಾರಿ ಸ್ಟ್ರೀಟ್‌ನಲ್ಲಿ ವಾಸವಿದ್ದ ಸೋಮಶೆಟ್ಟಿ ಮಧುಸೂಧನ್ ರಾವ್ ಉ*ಗ್ರರ ಕೃತ್ಯಕ್ಕೆ ಬ*ಲಿಯಾಗಿದ್ದರು.ಮಧುಸೂಧನ್ ರಾವ್ ಅವರ ನಿವಾಸಕ್ಕೆ ಇತ್ತೀಚೆಗೆ ವಿಷ್ಣು ಮಂಚು ಅವರು ಭೇಟಿ ಅಗಿದ್ದಾರೆ. ಮಧುಸೂಧನ್ ರಾವ್ ಅವರ ಪತ್ನಿ, ಮಕ್ಕಳನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಧುಸೂಧನ್ ಅವರ ಇಬ್ಬರು ಮಕ್ಕಳನ್ನು ವಿಷ್ಣು ಮಂಚು ದತ್ತು ಪಡೆದಿದ್ದು, ಮಕ್ಕಳ ಸಂಪೂರ್ಣ ಶಿಕ್ಷಣದ ಖರ್ಚು – ವೆಚ್ಚವನ್ನು ತಾವೇ ಭರಿಸುವುದಾಗಿ ವಿಷ್ಣು ಹೇಳಿದ್ದಾರೆ.ಇದೇ ವೇಳೆ ಕುಟುಂಬಕ್ಕೆ ಅಗತ್ಯವಿದ್ದ ಆರ್ಥಿಕ ಸಹಾಯವನ್ನು ಕೂಡ ವಿಷ್ಣು ಮಂಚು ಮಾಡಿದ್ದಾರೆ ಎಂದು ವರದಿ ಆಗಿದೆ. ವಿಷ್ಣು ಅವರ ಈ ಕಾರ್ಯಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಸಿನಿಮಾದ ವಿಚಾರಕ್ಕೆ ಬಂದರೆ ವಿಷ್ಣು ಮಂಚು, ಬಿಗ್ ಬಜೆಟ್ ‘ಕಣ್ಣಪ್ಪ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರ ಜೂನ್. 27 ರಂದು ರಿಲೀಸ್ ಆಗಲಿದೆ.
ಅಕ್ಷಯ್ ಕುಮಾರ್, ಪ್ರಭಾಸ್, ಮೋಹನ್ ಲಾಲ್, ಮೋಹನ್ ಬಾಬು, ಕಾಜಲ್ ಅಗರ್ವಾಲ್, ಪ್ರೀತಿ ಮುಕುಂದನ್, ಶರತ್ಕುಮಾರ್, ಮಧು ಮುಂತಾದವರು ನಟಿಸಿದ್ದಾರೆ.













































