ಹೊಸದಿಲ್ಲಿ: ಪಹಲ್ಲಾಮ್ ನಲ್ಲಿ ಏಪ್ರಿಲ್ 22ರಂದು ನಡೆದ ಉಗ್ರ ಕೃತ್ಯಕ್ಕೆ ಮೂರು ದಿನಗಳ ಮೊದಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.ಮಂಗಳವಾರ (ಮೇ 06) ಈ ಬಗ್ಗೆ ಆರೋಪ ಮಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ ಉಗ್ರ ದಾಳಿ ನಡೆಯುವ ಬಗ್ಗೆ ಪ್ರಧಾನಿ ಮೋದಿಗೆ ಮೊದಲೇ ಗುಪ್ತಚರ ಮಾಹಿತಿ ದೊರಕಿತ್ತು. ಹೀಗಾಗಿಯೇ ಅವರು ಜಮ್ಮು ಕಾಶ್ಮೀರ ಪ್ರವಾಸವನ್ನು ರದ್ದು ಮಾಡಿದ್ದರು ಎಂದಿದ್ದಾರೆ.“ಗುಪ್ತಚರ ವೈಫಲ್ಯವಿದೆ, ಸರ್ಕಾರ ಅದನ್ನು ಒಪ್ಪಿಕೊಂಡಿದೆ. ಅವರಿಗೆ ಇದು ತಿಳಿದಿದ್ದರೂ ಏಕೆ ಏನನ್ನೂ ಮಾಡಲಿಲ್ಲ? ದಾಳಿಗೆ ಮೂರು ದಿನಗಳ ಮೊದಲು ಪ್ರಧಾನಿ ಮೋದಿಗೆ ಗುಪ್ತಚರ ವರದಿಯನ್ನು ಕಳುಹಿಸಲಾಗಿತ್ತು, ಆದ್ದರಿಂದ ಅವರು ಕಾಶ್ಮೀರಕ್ಕೆ ಭೇಟಿ ನೀಡುವ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದರು, ನಾನು ಇದನ್ನು ಪತ್ರಿಕೆಯಲ್ಲಿ ಓದಿದ್ದೇನೆ…” ಎಂದು ಅವರು ಹೇಳಿದರು.
ಪಹಲ್ಲಾಮ್‌ನಲ್ಲಿ ರಜೆಯನ್ನು ಆನಂದಿಸುತ್ತಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಬಲಿ ತೆಗೆದುಕೊಂಡ ದಾಳಿಯಲ್ಲಿ ಗುಪ್ತಚರ ವೈಫಲ್ಯವಿತ್ತು ಎಂದು ಸರ್ಕಾರ ಒಪ್ಪಿಕೊಂಡಿದೆ ಎಂದು ಖರ್ಗೆ ಹೇಳಿದರು.“ಅವರು ಅದನ್ನು ಸುಧಾರಿಸುವುದಾಗಿ ಹೇಳಿದರು. ನಿಮಗೆ ಅದರ ಬಗ್ಗೆ ತಿಳಿದಿದ್ದರೂ ಸರಿಯಾದ ವ್ಯವಸ್ಥೆ ಏಕೆ ಮಾಡಲಿಲ್ಲ ಎಂಬುದು ನಮ್ಮ ಪ್ರಶ್ನೆ?” ಎಂದು ಖರ್ಗೆ ಕೇಳಿದರು.ಏಪ್ರಿಲ್ 24 ರಂದು ನಡೆದ ಸರ್ವಪಕ್ಷ ಸಭೆಯಲ್ಲಿ, ಪಹಲ್ಲಾಮ್ ಭಯೋತ್ಪಾದಕ ದಾಳಿಯ ಸಮಯದಲ್ಲಿ ಭದ್ರತಾ ಲೋಪವಾಗಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ವರದಿ ಹೇಳಿದೆ.













































