ಬಿಯರ್‌, ಐಎಂಎಲ್‌ ದರ ಶೇ.5ರಷ್ಟು ಹೆಚ್ಚಳ; ಮೇ 15ರಿಂದಲೇ ಜಾರಿ

Picture of Savistara

Savistara

Bureau Report

2025ರ ಆರಂಭದಲ್ಲೇ ದೇಶೀಯ ಮದ್ಯ (ಐಎಂಎಲ್‌) ಮತ್ತು ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದ ರಾಜ್ಯ ಸರಕಾರವು ಮತ್ತೆ ಎಇಡಿ ಏರಿಕೆ ಮಾಡಿದೆ. ಪರಿಷ್ಕೃತ ದರವು ಮೇ 15ರಿಂದಲೇ ಜಾರಿಯಾಗಲಿದೆ. ಐಎಂಎಲ್‌ ಮೊದಲ ಮೂರು ಸ್ಪ್ಯಾಬ್‌ಗಳಿಗೆ (180 ಮಿಲಿ ಲೀಟರ್‌) ₹15ರವರೆಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ಬಿಯರ್‌ ಮೇಲಿನ ಎಇಡಿಯನ್ನು ಶೇ.195 ರಿಂದ ಶೇ.200ಕ್ಕೆ ಅಂದರೆ ಶೇ.5ರಷ್ಟು ಹೆಚ್ಚಳ ಮಾಡಲಾಗಿದೆ.

ಬೆಂಗಳೂರು: ವರ್ಷಾರಂಭದಲ್ಲೇ ದೇಶೀಯ ಮದ್ಯ (ಐಎಂಎಲ್‌) ಮತ್ತು ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಹೆಚ್ಚಿಸಿದ್ದ ರಾಜ್ಯ ಸರಕಾರವು ಮತ್ತೆ ಎಇಡಿ ಏರಿಕೆ ಮಾಡಿ ಮಂಗಳವಾರ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಪರಿಷ್ಕೃತ ದರವು ಮೇ 15ರಿಂದಲೇ ಜಾರಿಯಾಗಲಿದೆ. ಐಎಂಎಲ್‌ ಮೊದಲ ಮೂರು ಸ್ಪ್ಯಾಬ್‌ಗಳಿಗೆ (180 ಮಿಲಿ ಲೀಟರ್‌) 15 ರೂ. ಹಾಗೂ ನಾಲ್ಕನೇ ಸ್ಪ್ಯಾಬ್‌ಗೆ 5 ರೂ. ಏರಿಕೆ ಮಾಡಲಾಗಿದೆ. ಅದೇ ರೀತಿ ಬಿಯರ್‌ ಮೇಲಿನ ಎಇಡಿಯನ್ನು ಶೇ.195 ರಿಂದ ಶೇ.200ಕ್ಕೆ ಅಂದರೆ ಶೇ.5ರಷ್ಟು ಹೆಚ್ಚಳ ಮಾಡಲಾಗಿದೆ.

ರಾಜ್ಯದಲ್ಲಿ ಸದ್ಯ ಬಿಯರ್‌ ಮೇಲಿನ ಎಇಡಿಯು ಉತ್ಪಾದನಾ ವೆಚ್ಚದ ಶೇ.195ರಷ್ಟಿದೆ. ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.205ಕ್ಕೆ ಹೆಚ್ಚಿಸುವುದಾಗಿ ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಈಗ ಎಇಡಿ ಏರಿಕೆಯೊಂದಿಗೆ ಪ್ರೀಮಿಯಂ ಅಥವಾ ಇತರೆ ಬಿಯರ್‌ ಬ್ರ್ಯಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲಿಗೆ ಸರಾಸರಿ 10ರಿಂದ 15 ರೂ. ಏರಿಕೆ ಆಗಬಹುದೆಂದು ನಿರೀಕ್ಷಿಸಲಾಗಿದೆ.ಪ್ರೀಮಿಯಂ ಬ್ರ್ಯಾಂಡ್‌ಗಳ ಬಿಯರ್‌ ದರವು ಬಾಟಲಿಗೆ 10 ರೂ. ಏರಿಕೆಯಾಗಬಹುದು. ಮಧ್ಯಮ ಶ್ರೇಣಿಯ ಮತ್ತು ಅಗ್ಗದ ಸ್ಥಳೀಯ ಬ್ರ್ಯಾಂಡ್‌ಗಳ ಬಿಯರ್‌ ದರ 5 ರೂ.ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಬೆಲೆ ಏರಿಕೆಯು ಬ್ರ್ಯಾಂಡ್‌ನಿಂದ ಬ್ರ್ಯಾಂಡ್‌ಗೆ ವ್ಯತ್ಯಾಸವಾಗಲಿದೆ. ಆಲ್ಕೋಹಾಲ್‌ ಪ್ರಮಾಣ ಹೆಚ್ಚಿರುವ ಬ್ರ್ಯಾಂಡ್‌ಗಳ ಬಿಯರ್‌ ಬೆಲೆಯು ಗಣನೀಯವಾಗಿ ಏರಿಕೆಯಾಗಲಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ಅಕ್ಕಪಕ್ಕದ ರಾಜ್ಯಗಳಲ್ಲಿನ ಐಎಂಎಲ್‌ ದರಕ್ಕೆ ಹೊಂದಿಕೆಯಾಗುವಂತೆ ರಾಜ್ಯದಲ್ಲೂ ದರ ಹೆಚ್ಚಳ ಮಾಡಲಾಗಿದೆ. ಮೊದಲ ನಾಲ್ಕು ಸ್ಪ್ಯಾಬ್‌ಗಳಿಗೆ ಒಳಪಡುವ ಐಎಂಎಲ್‌ ಬ್ರ್ಯಾಂಡ್‌ಗಳಿಗೆ ದರ ಏರಿಕೆ ಅನ್ವಯವಾಗಲಿದೆ. ವಿಸ್ಕಿ, ಜಿನ್‌ ಹಾಗೂ ರಮ್‌ ಸೇರಿದಂತೆ ವಿವಿಧ ಮದ್ಯಗಳ ಬೆಲೆ ಏರಿಕೆಯಾಗಲಿದೆ. ದುಬಾರಿ ದರದ ಮದ್ಯಗಳ ಬೆಲೆಯನ್ನು ಹೆಚ್ಚಳ ಮಾಡಿಲ್ಲ ಎಂದು ಮೂಲಗಳು ಹೇಳಿವೆ.

ಮೂರನೇ ಬಾರಿಗೆ ಏರಿಕೆ:ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬಿಯರ್‌ ಮೇಲಿನ ತೆರಿಗೆಯನ್ನು 3ನೇ ಬಾರಿಗೆ ಏರಿಕೆ ಮಾಡಿದಂತೆ ಆಗಿದೆ. 2023ರ ಜುಲೈನಲ್ಲಿ ಕಾಂಗ್ರೆಸ್‌ ಸರಕಾರವು ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.175ರಿಂದ ಶೇ.185ಕ್ಕೆ ಹೆಚ್ಚಿಸಿತ್ತು. ಇದಾದ ನಂತರ 2025ರ ಜ.20ರಂದು ಬಜೆಟ್‌ಗೂ ಮುನ್ನವೇ ‘ಹೆಚ್ಚುವರಿ ಅಬಕಾರಿ ಸುಂಕ’ (ಎಇಡಿ) ಪರಿಷ್ಕರಣೆ ಮಾಡಿತ್ತು. ಆಗ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.185ರಿಂದ ಶೇ.195ಕ್ಕೆ (ಪ್ರತಿ ಬಲ್ಕ್‌ ಲೀಟರ್‌ಗೆ ರೂ.130ರವರೆಗೆ) ಹೆಚ್ಚಿಸಿತ್ತು. ಇದೀಗ ಸರಕಾರವು ಮೂರನೇ ಬಾರಿಗೆ ತೆರಿಗೆ ಹೆಚ್ಚಳ ಮಾಡಿದ್ದು, ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.195ರಿಂದ ಶೇ.200ಕ್ಕೆ ಏರಿಕೆ ಮಾಡಿದೆ.

[t4b-ticker]
error: Content is protected !!