ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (SIT) ತನಿಖೆಯು ಚುರುಕುಗೊಂಡಿದ್ದು, ಅದು ತನ್ನ ತನಿಖೆಯನ್ನು ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ (Soujanya Case Reopen) ಮತ್ತು ಕೊಲೆ ಪ್ರಕರಣಕ್ಕೂ ವಿಸ್ತಾರಗೊಳಿಸಿದೆಯೇ ಎಂಬ ಅನುಮಾನ ಮೂಡಿದೆ.
ಸೌಜನ್ಯ ಪರ ಹೋರಾಟಗಾರರು ಹಾಗೂ ಕುಟುಂಬಸ್ಥರು ನಿರಂತರ ಆರೋಪಿಸಿರುವ ಉದಯ್ ಕುಮಾರ್ ಜೈನ್, ಧೀರಜ್ ಕೆಲ್ಲಾ. ಮತ್ತು ಮಲ್ಲಿಕ್ ಜೈನ್ ಅವರಿಗೆ ತನಿಖೆಗೆ ಹಾಜರಾಗುವಂತೆ ಎಸ್‌ಐಟಿ ಬುಲಾವ್ ನೀಡಿದರುವುದಾಗಿ ತಿಳಿದು ಬಂದಿದೆ . ಪ್ರಕರಣದ ಮರುತನಿಖೆಗಾಗಿ ಸೌಜನ್ಯ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ SIT ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಇಂದು ಬೆಳ್ತಂಗಡಿಯ SIT ಕಚೇರಿಗೆ ಹಾಜರಾದ ಉದಯ್ ಕುಮಾರ್ ಜೈನ್, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಮಾದ್ಯಮಗಳಿಗೆ ತಿಳಿಸಿದ್ದಾರೆ. “ಯಾವುದೇ ತನಿಖೆಗೆ ನಾವು ಸಿದ್ದ. ಸೌಜನ್ಯ ತಾಯಿ SIT ಗೆ ಕೊಟ್ಟ ದೂರಿಗೆ ನಮ್ಮನ್ನು ಕರೆದಿರಬಹುದು, ಅಥವಾ ಚಿನ್ನಯ್ಯ ನೀಡಿದ ಹೇಳಿಕೆಯ ಕಾರಣಕ್ಕೂ ಕರೆದಿರಬಹುದು” ಎಂದು ಜೈನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.ಆದರೆ, ಈ ತನಿಖೆಯ ಹಿಂದಿನ ಉದ್ದೇಶದ ಬಗ್ಗೆ ಜೈನ್ ಅನುಮಾನ ವ್ಯಕ್ತಪಡಿಸಿದ್ದಾರೆ. “ಇದು ಬುರುಡೆ ಪ್ರಕರಣದ (ನೂರಾರು ಶವ ಹೂತ ಪ್ರಕರಣ) ದಿಕ್ಕು ಬದಲಿಸುವ ಹುನ್ನಾರ. ಗುಂಡಿ ಎಲ್ಲಾ ತೋಡಿ ಆಗಿದೆ… ಈಗ ವಿಷಯಾಂತರ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಬುರುಡೆ ಪ್ರಕರಣ ಮುಚ್ಚಿ ಹಾಕಲು ಈ ಪ್ರಕರಣವನ್ನ ಮತ್ತೆ ಮುನ್ನಲೆಗೆ ತರುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಬೆಳವಣಿಗೆಯಿಂದ ಸೌಜನ್ಯ ಪ್ರಕರಣದಲ್ಲಿ ಮತ್ತೊಮ್ಮೆ ಹೊಸ ತಿರುವು ಸಿಕ್ಕಂತಾಗಿದೆ. ಕಳೆದ ಹಲವು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಸೌಜನ್ಯ ಕುಟುಂಬಕ್ಕೆ ಈ SIT ತನಿಖೆ ಆಶಾಕಿರಣವಾಗುತ್ತದೆಯೇ ಅಥವಾ ಇದು ಕೇವಲ ರಾಜಕೀಯ ಪ್ರೇರಿತ ನಡೆಯೇ ಎಂದು ಕಾದು ನೋಡಬೇಕಿದೆ. SIT ತನಿಖೆಯು ಸತ್ಯವನ್ನು ಹೊರಹಾಕುವಲ್ಲಿ ಯಶಸ್ವಿಯಾಗಲಿದೆಯೇ, ಅಥವಾ ಉದಯ್ ಕುಮಾರ್ ಜೈನ್ ಹೇಳಿದಂತೆ ಇದು ಬೇರೊಂದು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನವೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.











































