ಸದಾಶಿವನಗರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಎಐಸಿಸಿ ಮಲ್ಲಿಕಾರ್ಜುನ ಖರ್ಗೆಯವರನ್ನು ಶನಿವಾರ ರಾತ್ರಿ ಭೇಟಿ ಮಾಡಿ ಚರ್ಚೆ ನಡೆಸಿದರು.
ಬೆಂಗಳೂರು: ನಾಯಕತ್ವ ಬದಲಾವಣೆ ಕೇವಲ ಊಹಾಪೋಹವಾಗಿದೆ. ನೀವೇ(ಮಾಧ್ಯಮದವರು) ಆ ಊಹಾಪೋಹ ಹುಟ್ಟುಹಾಕಿರುವುದು ಎಂದು ಸಿಎಂ ಸಿದ್ದರಾಮಯ್ಯ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ತಿಳಿಸಿದರು.ಸದಾಶಿವನಗರ ನಿವಾಸದಲ್ಲಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆಯವರನ್ನು ಶನಿವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚೆ ನಡೆಸಿದರು. ಸುಮಾರು ಒಂದೂವರೆ ತಾಸುಗಳ ಕಾಲ ಉಭಯ ನಾಯಕರು ಚರ್ಚೆ ನಡೆಸಿದರು. ಅಧಿಕಾರ ಹಂಚಿಕೆ ಚರ್ಚೆ ಜೋರಾಗಿರುವ ಮಧ್ಯೆ ಉಭಯ ನಾಯಕರ ಸುದೀರ್ಘ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಭೇಟಿ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಭೇಟಿ ವೇಳೆ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ್ದೇವೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಬರುತ್ತಿದ್ದು, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ, ಜಿಬಿಎ ವ್ಯಾಪ್ತಿಯಲ್ಲಿನ ನಗರ ಪಾಲಿಕೆಗಳ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗಿದೆ. ಇದೊಂದು ಸೌಹಾರ್ದ ಭೇಟಿಯಾಗಿದೆ ಅಷ್ಟೇ ಎಂದರು.ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಆಗಿಲ್ಲ. ನಾಯಕತ್ವ ಬದಲಾವಣೆ ಬಗ್ಗೆ ಕೇವಲ ಊಹಾಪೋಹವಾಗಿದೆ. ನೀವೇ ಆ ಊಹಾಪೋಹ ಹುಟ್ಟುಹಾಕಿರುವುದು ಎಂದು ಇದೇ ವೇಳೆ ತಿಳಿಸಿದರು. ಆದರೆ, ಪವರ್ ಶೇರಿಂಗ್ ಬಗ್ಗೆ ಸಿಎಂ ಯಾವುದೇ ಗುಟ್ಟು ರಟ್ಟು ಮಾಡಿಲ್ಲ.
ಖರ್ಗೆಯವರನ್ನು ದೆಹಲಿಗೆ ಹೋಗಿ ಕೆಲ ಶಾಸಕರು ಭೇಟಿಯಾಗಿರುವ ಬಗ್ಗೆ ಕೇಳಿದಿರಾ ಎಂಬ ಪ್ರಶ್ನೆಗೆ, ಇಲ್ಲ ನಾನು ಅವರನ್ನು ಆ ಬಗ್ಗೆ ಕೇಳಿಲ್ಲ. ಆ ಮಾಹಿತಿಯನ್ನು ಗುಪ್ತಚರ ಇಲಾಖೆಯಿಂದ ಪಡೆಯುತ್ತೇನೆ. ಖರ್ಗೆಯವರ ಬಳಿ ಆ ಬಗ್ಗೆ ಮಾತನಾಡಿಲ್ಲ. ಇದು ಕೇವಲ ಸೌಹಾರ್ದಯುತ ಭೇಟಿಯಾಗಿದೆ ಎಂದು ತಿಳಿಸಿದರು.
ನಾನು ಡಲ್ ಆಗುವ ಪ್ರಶ್ನೆಯೇ ಇಲ್ಲ: ಯಾಕೋ ಡಲ್ ಆಗಿದ್ದೀರಲ್ವಾ ಎಂದು ಕೇಳಿದ ಪ್ರಶ್ನೆಗೆ, ನಾನು ಡಲ್ ಆಗಿಲ್ಲ. ನಾನು ಯಾವತ್ತೂ ಡಲ್ ಆಗಿರುವುದೇ ಇಲ್ಲ. ನೀವೇ ಕೇಳೋದು ಡಲ್ ಆಗಿದ್ದೀರಾ ಅಂತ. ನಾನು ಯಾವಾಗಲೂ ಡಲ್ ಆಗುವ ಪ್ರಶ್ನೆಯೇ ಇಲ್ಲ. ಡಲ್ ಆಗುವುದು ಇಲ್ಲ. ಅತಿ ಖುಷಿ ಪಡುವುದೂ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಹೈ ಕಮಾಂಡ್ ತೀರ್ಮಾನ ಒಪ್ಪಲೇಬೇಕು: ನಾಯಕತ್ವ ಬದಲಾವಣೆ ಸಂಬಂಧ ಕೈ ಶಾಸಕರು ದೆಹಲಿಗೆ ಹೋದ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ದೆಹಲಿಗೆ ಹೋಗಲಿ. ಅಂತಿಮವಾಗಿ ಹೈ ಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದನ್ನು ಎಲ್ಲರೂ ಒಪ್ಪಲೇಬೇಕು. ಎಲ್ಲಾ ಮಂತ್ರಿಗಳು ಒಪ್ಪಬೇಕು. ನಾನು ಕೂಡ ಒಪ್ಪಬೇಕು ಮತ್ತು ಡಿ.ಕೆ. ಶಿವಕುಮಾರ್ ಕೂಡ ಒಪ್ಪಬೇಕು. ನಾಯಕತ್ವ ಬದಲಾವಣೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಬಳಿ ಪ್ರಸ್ತಾಪ ಆಗಿಲ್ಲ ಎಂದು ಅವರು ತಿಳಿಸಿದರು.
ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಭೇಟಿ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಸದ್ಯದ ಕ್ಷಿಪ್ರ ರಾಜಕೀಯ ಬೆಳವಣಿಗೆ, ಸಂಪುಟ ಪುನಾರಚನೆ, ಅಧಿಕಾರ ಹಂಚಿಕೆ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.










































