ಇದು ಎನ್‌ಡಿಎ ಪಾಲಿಗೆ ಐತಿಹಾಸಿಕ ಗೆಲುವು ಎಂದು ಬಣ್ಣಿಸಿರುವ ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನೂಪ್ ಆ್ಯಂಟನಿ ಜೋಸೆಫ್ ಅವರು, ಮೋದಿ ಸರಕಾರ ಮತ್ತು ಬಿಜೆಪಿ ವಕ್ಸ್ ವಿರುದ್ಧದ ಹೋರಾಟದಲ್ಲಿ ಮುನಂಬಮ್ ಜನರೊಂದಿಗೆ ನಿಂತಿವೆ ಮತ್ತು ಅವರು ಈಗ ತಮ್ಮ ಜನಾದೇಶವಾಗಿ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಈ ವಾರ್ಡ್‌ನ್ನು ಕಾಂಗ್ರೆಸ್ ಗೆದ್ದಿತ್ತು.2019ರಲ್ಲಿ ಕೇರಳ ವಕ್ಸ್ ಮಂಡಳಿಯು 404 ಎಕರೆಗೂ ಹೆಚ್ಚಿನ ಭೂಮಿಯನ್ನು ವಕ್ಸ್ ಆಸ್ತಿ ಎಂದು ಘೋಷಿಸಿದ ಬಳಿಕ ಮುನಂಬಮ್ ಪ್ರತಿಭಟನೆಗಳು ಮತ್ತು ನ್ಯಾಯಾಲಯಗಳಲ್ಲಿನ ಪ್ರಕರಣಗಳ ಕೇಂದ್ರಬಿಂದುವಾಗಿದೆ.ಮುನಂಬಮ್‌ನ ವಿವಾದಿತ ಭೂಮಿಯಲ್ಲಿ ಸುಮಾರು 500 ಕುಟುಂಬಗಳು ವಾಸಿಸುತ್ತಿದ್ದುಹೆಚ್ಚಿನವರು ಕ್ರೈಸ್ತರಾಗಿದ್ದಾರೆ. ತೆರವು ಕಾರ್ಯಾಚರಣೆಯ ಭೀತಿಯನ್ನು ಎದುರಿಸುತ್ತಿರುವ ಈ ಕುಟುಂಬಗಳು ಕಳೆದ 400ಕ್ಕೂ ಅಧಿಕ ದಿನಗಳಿಂದ ಮುನಂಬಮ್ ಭೂಮಿ ಸಂರಕ್ಷಣಾ ಮಂಡಳಿಯ ಆಶ್ರಯದಲ್ಲಿ ಪ್ರತಿಭಟನೆಯನ್ನು ನಡೆಸುತ್ತಿವೆ.ತಮ್ಮ ಭೂ ಹಿಡುವಳಿಗಳ ಕಂದಾಯ ಹಕ್ಕನ್ನು ಮರುಸ್ಥಾಪಿಸುವಂತೆ ಈ ಜನರು ಒತ್ತಾಯಿಸಿದ್ದಾರೆ. ವಿವಾದಿತ ಭೂಮಿಯಲ್ಲಿ ವಾಸವಾಗಿರುವ ಕುಟುಂಬಗಳಿಂದ ಭೂ ತೆರಿಗೆಯನ್ನು ಸ್ವೀಕರಿಸುವುದನ್ನು ಸರಕಾರವು ನಿಲ್ಲಿಸಿತ್ತು.
ಈ ವರ್ಷದ ಪೂರ್ವಾರ್ಧದಲ್ಲಿ ಕೇಂದ್ರವು ವಕ್ಸ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದಾಗ ಮುನಂಬಮ್‌ನ ಕ್ರೈಸ್ತ ನಿವಾಸಿಗಳ ಪ್ರತಿಭಟನೆಗಳು ದೇಶದ ಗಮನವನ್ನು ಸೆಳೆದಿದ್ದವು. ಕಾನೂನು ವಕ್ಸ್ ಆಸ್ತಿಗಳ ನಿಯಂತ್ರಣದಲ್ಲಿ ಸರಕಾರದ ಪಾತ್ರವನ್ನು ಹೆಚ್ಚಿಸಿದೆ.ಆರಂಭದಲ್ಲಿ ಈ ಕುಟುಂಬಗಳು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದವು,ಆದರೆ ಅಂತಿಮವಾಗಿ ಮತದಾನದಲ್ಲಿ ಪಾಲ್ಗೊಂಡಿದ್ದವು.ಮುನಂಬಮ್ ವಕ್ಸ್ ಆಸ್ತಿಯಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಶುಕ್ರವಾರ ತಡೆಹಿಡಿದಿರುವ ಸರ್ವೋಚ್ಚ ನ್ಯಾಯಾಲಯವು, ವಿವಾದಿತ ಭೂಮಿಗೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಿದೆ.

















































