ಮಂತ್ರಾಲಯದಲ್ಲಿ ವಿವಾದ- ಕನ್ನಡ ಬೋರ್ಡ್‌ಗಳಿಗೆ ತೆಲುಗು ಭಾಷಿಗರ ಆಕ್ಷೇಪ

Picture of Savistara

Savistara

Bureau Report

ಕರ್ನಾಟಕದಲ್ಲಿ ಅನ್ಯ ಭಾಷಿಕರು ಕನ್ನಡ ಕಲಿಯದೆ, ಹಿಂದಿ, ತೆಲುಗು ಮತ್ತಿತರ ಭಾಷೆಗಳಲ್ಲಿ ವ್ಯವಹರಿಸುವುದರ ವಿರುದ್ಧ ಆಗಾಗ ಅಸಮಾಧಾನ ವ್ಯಕ್ತವಾಗುತ್ತಿರುವ ನಡುವೆಯೇ, ಪ್ರಸಿದ್ಧ ಧಾರ್ಮಿಕ ಕೇಂದ್ರ ಮಂತ್ರಾಲಯದಲ್ಲಿ ಕನ್ನಡ ಬಳಕೆ ಹೆಚ್ಚಳಕ್ಕೆ ತೆಲುಗು ಭಾಷಿಕರಿಂದ ಆಕ್ಷೇಪ ವ್ಯಕ್ತವಾಗಿದೆ.ಮಂತ್ರಾಲಯವೂ ಸೇರಿ ಆಂಧ್ರದ ಎಲ್ಲೆಡೆ ತೆಲುಗು ಭಾಷೆಯನ್ನೇ ಬಳಸಬೇಕು, ಅಲ್ಲಿ ಕನ್ನಡಕ್ಕೆ ಏತಕ್ಕಾಗಿ ಸ್ಥಾನ ನೀಡಲಾಗಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಹೊತ್ತಿಸಿದೆ. ಭಾಷೆ ವಿಚಾರವಾಗಿ ಈವರೆಗೂ ನೆರೆಯ ಆಂಧ್ರದ ಜತೆ ಕರ್ನಾಟಕ ಎಂದಿಗೂ ಸಂಘರ್ಷಕ್ಕೆ ಇಳಿದಿಲ್ಲ. ತುಂಗಭದ್ರಾ, ಕೃಷ್ಣಾ ನದಿ ನೀರಿನ ಬಳಕೆ ವಿಚಾರವಾಗಿ ಸಣ್ಣಪುಟ್ಟ ತಗಾದೆಗಳಿದ್ದವು. ಆದರೆ ಈಗ ರಾಯಚೂರಿನ ಗಡಿಯಲ್ಲಿರುವ ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಮಠವನ್ನು ಭಾಷೆಯ ವಿಚಾರಕ್ಕೆ ಎಳೆದು ತರಲಾಗಿದೆ. ಮಠದ ಮುಂಭಾಗದಲ್ಲಿ ರಾಯರ ಸ್ತೋತ್ರದ ಶ್ಲೋಕ ‘ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯಚ’ ಸೇರಿ ಮಠದೊಳಗೆ ಕನ್ನಡ ಭಾಷೆ ಫಲಕ ಅಳವಡಿಸಿರುವುದು ಮತ್ತು ಆಡಳಿತದಲ್ಲಿ ಬಹುತೇಕ ಕನ್ನಡವನ್ನೇ ಬಳಸುತ್ತಿರುವುದು ತೆಲುಗು ಜನರ ಆಕ್ಷೇಪಕ್ಕೆ ಕಾರಣವಾಗಿದೆ.

ಆಂಧ್ರದವರ ವಿರೋಧ ಏಕೆ?

ಮಠವು ಆಂಧ್ರದಲ್ಲಿದ್ದರೂ ಕನ್ನಡ ಬಳಕೆಯೇ ಹೆಚ್ಚಾಗಿದೆ. ಬ್ಯಾಂಕುಗಳಲ್ಲಿ ತೆಲುಗು ಭಾಷಿಕರು ನೇಮಕ ಗೊಂಡರೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಹಾಗಿರುವಾಗ ಆಂಧ್ರದಲ್ಲಿ ಕನ್ನಡವನ್ನೇಕೆ ಬಳಸಬೇಕು ಎಂಬ ವಾದ ಮಂಡಿಸಲಾಗುತ್ತಿದೆ. ಮಠದ ಆಡಳಿತ ತೆಲುಗನ್ನು ಪ್ರಾದೇಶಿಕ ಭಾಷೆಯನ್ನಾಗಿ ಅಳವಡಿಸಿ ಕೊಳ್ಳಬೇಕೆಂದು ಆಗ್ರಹ ಕೇಳಿ ಬರತೊಡಗಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯುತ್ತಿಲ್ಲ ಎಂಬ ಚರ್ಚೆ ಶುರುವಾಗಿದೆ.

ಕರ್ನಾಟಕದವರೇ ಹೆಚ್ಚು

ವಾಸ್ತವದಲ್ಲಿ ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡುವವರಲ್ಲಿ ಕರ್ನಾಟಕದ ಭಕ್ತರೇ ಹೆಚ್ಚು. ಆಂಧ್ರದ ಸರ್ಕಾರ ಕ್ಷೇತ್ರದ ಪ್ರಗತಿಗೆ ಹೆಚ್ಚು ಗಮನ ಹರಿಸಿಲ್ಲ. ಶುದ್ಧ ಕುಡಿಯುವ ನೀರು, ಆರೋಗ್ಯ ಸೇವೆ. ಸಮರ್ಪಕ ವಿದ್ಯುತ್ ಸಹ ಗಡಿಯಲ್ಲಿರುವ ಮಂತ್ರಾಲಯಕ್ಕೆ ಅಲ್ಲಿನ ಸರ್ಕಾರ ಒದಗಿಸಲು ಆಸಕ್ತಿ ತೋರಿಲ್ಲ. 2009ರಲ್ಲಿ ತುಂಗಭದ್ರಾ ನದಿಗೆ ಪ್ರವಾಹ ಬಂದಾಗ ನದಿಗೆ ನಿರ್ಮಿಸಿದ್ದ ಸೇತುವೆ ಕೊಚ್ಚಿ ಹೋಗಿ ಸಂಚಾರ ಸ್ಥಗಿತಗೊಂಡಿತ್ತು. ಆಗ ಕರ್ನಾಟಕದ సీఎం ໖.໑. ಯಡಿಯೂರಪ್ಪ ಕೈಗೊಂಡ ನಿರ್ಧಾರದಿಂದ ಸ್ಟೀಲ್ ಸೇತುವೆ ನಿರ್ಮಾಣವಾಯಿತು. ಆಂಧ್ರ ಸರ್ಕಾರ ಪ್ರವಾಹ ಸಂತ್ರಸ್ತರ ನೆರವಿಗೆ ಬರಲಿಲ್ಲ. ಇದಕ್ಕೆ ಕರ್ನಾಟಕದಲ್ಲಿ ರಾಯರ ಭಕ್ತರ ಸಂಖ್ಯೆ ಹೆಚ್ಚಾಗಿರುವುದೇ ಕಾರಣ ಎಂಬ ಮಾತು ಜನಜನಿತವಾಗಿದೆ.

[t4b-ticker]
error: Content is protected !!