ಪಂಜ ಗ್ರಾಮ ಪಂಚಾಯತ್ ಸಿಬ್ಬಂದಿ ಹಣ ದುರುಪಯೋಗ ಬಗ್ಗೆ ಪತ್ರಿಕೆ, ವಾಟ್ಸಪ್ ಗ್ರೂಪ್ ಗಳಲ್ಲಿ ವರದಿ ಪ್ರಕಟಣೆ | ಪಂಜ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಸ್ಪಷ್ಟಿಕರಣ

Picture of Savistara

Savistara

Bureau Report

ಪಂಜ ಗ್ರಾಮ ಪಂಚಾಯತ್ ಸಿಬ್ಬಂದಿ ಬಾಬು ಎ.ರವರು ಬಿಲ್ ಕಲೆಕ್ಟರ್ ಹುದ್ದೆಯಲ್ಲಿ ಸುಮಾರು 20 ವರ್ಷಗಳಿಂದ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2024-25ನೇ ಸಾಲಿನ ಗ್ರಾಮ ಪಂಚಾಯತ್ ಲೆಕ್ಕಪರಿಶೋಧನೆಗೆ ಪೂರ್ವತಯಾರಿಗೆ ದಾಖಲೆಗಳನ್ನು ಪರಿಶೀಲಿಸುವ ಸಂದರ್ಭ ಅಭಿವೃದ್ಧಿ ಅಧಿಕಾರಿಯವರಿಗೆ ಪಂಚಾಯತ್‌ನ ತೆರಿಗೆ ಸಂಗ್ರಹದಲ್ಲಿ ಹಣ ಬ್ಯಾಂಕ್‌ಗೆ ಜಮೆಯಾಗದ ಬಗ್ಗೆ ಅನುಮಾನಗೊಂಡು ಪರಿಶೀಲಿಸಿದಾಗ ಒಂದಷ್ಟು ವ್ಯತ್ಯಾಸಗಳು ಕಂಡುಬಂತು. ಈ ಜವಾಬ್ದಾರಿಯು ಸಿಬ್ಬಂದಿಯಾದ ಬಾಬುರವರ ಸುಪರ್ದಿಯಲ್ಲಿ ಇರುವುದರಿಂದ ಸದ್ರಿಯವರನ್ನು ಅಭಿವೃದ್ಧಿ ಅಧಿಕಾರಿಯವರು ಕರೆದು ವಿಚಾರಿಸಿದರು. ಆಗ ಅವರು ಒಂದಷ್ಟು ಹಣ ನನ್ನಲ್ಲಿ ಖರ್ಚಾಗಿದೆ. ನನ್ನಿಂದ ತಪ್ಪಾಗಿದೆ ಎಂದು ಹೇಳಿದರು. ತಕ್ಷಣ ಪಿ.ಡಿ.ಒ.ರವರು ಸಿಬ್ಬಂದಿಯಾದ ಬಾಬುರವರಿಗೆ ನೋಟೀಸು ನೀಡಿ ದುರುಪಯೋಗವಾದ ಹಣವನ್ನು ಮರುಪಾವತಿಗೊಳಿಸುವಂತೆ ಸೂಚಿಸಿದಾಗ ಆಗ ಅವರು ಸುಮಾರು 50000.00 ದಷ್ಟು ಮೊತ್ತವನ್ನು ಪಂಚಾಯತ್ ಬ್ಯಾಂಕ್ ಖಾತೆಗೆ ಜಮೆಗೊಳಿಸಿರುತ್ತಾರೆ. ಆದರೆ 2024 ಎಪ್ರಿಲ್‌ನಿಂದ ಈವರೆಗೆ ಪರಿಶೀಲಿಸಿದಾಗ ಇನ್ನೂ ಸುಮಾರು 13,94,956.00 ಮೊತ್ತ ಮರುಪಾವತಿಗೆ ಬಾಕಿಯಿದ್ದು, ಈ ಹಣ ಪಾವತಿಸಲು ದೀರ್ಘ ಕಾಲವಕಾಶ ಬೇಕೆಂದು ಕೇಳಿದರು.

ಈ ವಿಚಾರವನ್ನು ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಗಮನಕ್ಕೆ ತಂದಾಗ ಅಧ್ಯಕ್ಷರು ತಕ್ಷಣ ಬಾಬುರವರಿಗೆ ನೋಟೀಸು ನೀಡಲು ಸೂಚಿಸಿದರು. ಮುಂದುವರೆದು ದಿನಾಂಕ 02.12.2025 ರಂದು ಆಡಳಿತ ಮಂಡಳಿಯ ತುರ್ತು ಸಭೆಯನ್ನು ಕರೆಯಲು ಸೂಚಿಸಿದರು. ಆದರೆ ದುರದೃಷ್ಟಾವಶಾತ್ ಅಧ್ಯಕ್ಷರ ತಂದೆಯವರು ಆ ದಿನ ಮೃತರಾದ ಕಾರಣ ಉಪಾಧ್ಯಕ್ಷರಾದ ಶ್ರೀ ನಾರಾಯಣ ಎನ್. ಇವರಿಗೆ ಸಭೆ ನಡೆಸುವಂತೆ ಆದೇಶಿಸಿದರು. ಆ ಪ್ರಕಾರ ಆಡಳಿತ ಮಂಡಳಿಯವರು ಸಭೆ ಸೇರಿ ಸಿಬ್ಬಂದಿಯಾದ ಬಾಬುರವರನ್ನು ಹಣದುರುಪಯೋಗದ ಬಗ್ಗೆ ಪ್ರಶ್ನಿಸಿದಾಗ ಅವರು ಹಣ ನನ್ನಲ್ಲಿ ಖರ್ಚಾಗಿದೆ ಎಂದು ಹೇಳಿದರಷ್ಟೆ ಅಲ್ಲದೇ ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಮತ್ತೆ ಬೇರೆ ಸಿಬ್ಬಂದಿ ಅಥವಾ ಆಡಳಿತ ಮಂಡಳಿಯ ಸದಸ್ಯರಿಂದ ನಿಮಗೇನಾದರೂ ತೊಂದರೆಯಾಗಿದೆಯೇ ಅಥವಾ ಸಮಸ್ಯೆಯಾಗಿದೆಯೇ ಎಂದು ಕೇಳಿದಾಗ ನನ್ನಿಂದಲೇ ಸಮಸ್ಯೆಯಾಗಿದೆ ನನಗೆ ದೀರ್ಘ ಕಾಲಾವಕಾಶ ಕೊಟ್ಟರೆ ಪೂರ್ತಿ ಹಣವನ್ನು ಮರುಪಾವತಿಸುತ್ತೇನೆ ಎಂದು ಸಭೆಗೆ ತಿಳಿಸಿದರು. ಒರ್ವ ಹಿರಿಯ ಸಿಬ್ಬಂದಿಯಾಗಿ ಇಷ್ಟು ದೊಡ್ಡ ಮೊತ್ತವನ್ನು ಸ್ವಂತಕ್ಕೆ ಬಳಸಿರುವುದು ಕಾನೂನಿನಲ್ಲಿ ಅಪರಾದ ಹಾಗೂ ಕರ್ತವ್ಯ ಲೋಪ ಎಂದು ಪರಿಗಣಿಸಿ ಸಭೆ ಅವರನ್ನು ಅಮಾನತುಗೊಳಿಸುಂತೆ ಆಗ್ರಹಿಸಿತು. ಅದರಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 113(3) ರಂತೆ ಹಣ ದುರುಪಯೋಗಗೊಳಿಸಿದ ಆರೋಪಿ ಸಿಬ್ಬಂದಿ ಬಾಬು ಎ. ರವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ, ಪೋಲೀಸ್ ದೂರು ನೀಡುವುದು ಹಾಗೂ ಮೇಲಾಧಿಕಾರಿಗಳಾದ ತಾಲೂಕು ಪಂಚಾಯತ್ ಇ.ಒ. ರವರು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಕೇಳಿಕೊಳ್ಳುವುದಾಗಿ ಸಭೆಯಲ್ಲಿ ತಿರ್ಮಾನಿಸಲಾಯಿತು.

ಈ ಸಂದರ್ಭ ಆರೋಪಿತ ಬಾಬುರವರು ಮೌಖಿಕವಾಗಿ ಆನಂದ ಬೆಳ್ಳಾರೆಯವರು ನನ್ನಲ್ಲಿ ನಿಮ್ಮ ಗ್ರಾಮ ಪಂಚಾಯತ್‌ನಲ್ಲಿ ಶೌಚಾಲಯದ ಕೆಲಸ ನಿರ್ವಹಿಸುತ್ತಿರುವ ಆಚ್ಚುತರಿಗೆ ಸ್ವಲ್ಪ ದುಡ್ಡಿನ ಅವಶ್ಯಕತೆಯಿದೆ. ನಿನ್ನಲ್ಲಿ ವಸೂಲಿಯಾದ ಹಣವಿದ್ದರೆ ಅದನ್ನು ಒಮ್ಮೆಗೆ ಅವನಿಗೆ ಕೊಡು, ಅವನ ಕೆಲಸದ ಬಿಲ್ಲು ಪಾವತಿಯಾದಾಗ ಆ ಹಣವನ್ನು ನಿನಗೆ ವಾಪಸು ಕೊಡಿಸುತ್ತೇನೆ ಎಂದು ಆನಂದ ಬೆಳ್ಳಾರೆಯವರು ನನ್ನಲ್ಲಿ ಹೇಳಿದ್ದಾರೆ. ಆದ್ದರಿಂದ ದುರುಪಯೋಗವಾದ ಹಣ ಅವರಲ್ಲಿ ಇದೆ ಎಂದು ಹೇಳಿ ಕಣ್ಣೀರು ಹಾಕಿದರು. ನೀವು ಆಗ ತನಿಖೆಯ ಸಂದರ್ಭ ಹೇಳಬೇಕಿತ್ತು. ಈಗ ಹೇಳಿದರೆ ನಾವೇನೂ ಮಾಡಲು ಸಾಧ್ಯವಿಲ್ಲ ತನಿಖೆಯ ನಂತರ ಪಂಚಾಯತ್‌ಗೆ ಬರತಕ್ಕ ಹಣವನ್ನು ದುರುಪಯೋಗ ಪಡಿಸಿದವರೇ ಪಾವತಿಸಬೇಕೆಂದು ಸೂಚಿಸಿದೆವು.

ಮುಂದುವರೆದು ಸುಳ್ಯ ತಾಲೂಕು ಪಂಚಾಯತ್ ನಿಂದ ದಿ.09.12.2025 ರಂದು ಪಂಜ ಗ್ರಾಮ ಪಂಚಾಯತ್‌ನಲ್ಲಿ ಹಣ ದುರುಪಯೋಗದ ಬಗ್ಗೆ ತನಿಖೆಯ ಸಂದರ್ಭ ತನಿಖಾ ತಂಡದವರು ಆರೋಪಿತ ಸಿಬ್ಬಂದಿ ಬಾಬುರವರಿಂದ ಹೇಳಿಕೆಯನ್ನು ಪಡಕೊಳ್ಳುತ್ತಿರುವಾಗ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ಆನಂದ ಬೆಳ್ಳಾರೆ, ಅಚ್ಚುತ ಮಲ್ಕಜೆ ಮತ್ತು ಆರೋಪಿತ ಸಿಬ್ಬಂದಿ ಬಾಬುರವರ ಪತ್ನಿ ಶ್ರೀಮತಿ ಕವಿತಾರವರ ಒಳಗೂಡಿ ತನಿಖಾ ಕೊಠಡಿಯ ಒಳ ನುಗ್ಗಿ ಬೆರಳು ತೋರಿಸಿ ನೀವು ದಲಿತರ ದೌರ್ಜನ್ಯ ಮಾಡುತ್ತೀರಿ ಎಂದು ಆರೋಪಿಸಿ, ಆರೋಪಿತ ಸಿಬ್ಬಂದಿ ಬಾಬುರವರನ್ನು ಹೊರಗಡೆ ಎಳೆದುಕೊಂಡು ಹೋಗಿ ನಾವು ಹೇಳಿದಂತೆ ನೀನು ಹೇಳಿಕೆ ನೀಡಬೇಕು ಎಂದು ಹೇಳಿ ಬಾಬುರವರು ಬರೆದ ಹೇಳಿಕೆಯ ಪ್ರತಿಯನ್ನು ಅವರ ಕೈಯಿಂದ ಎಳೆದುಕೊಂಡು ಆನಂದ ಬೆಳ್ಳಾರೆ, ಅಚ್ಚುತ ಮಲ್ಕಜೆಯವರು ತಯಾರಿಸಿ ತಂದ ಹೇಳಿಕೆಯ ಪ್ರತಿಯನ್ನು ತನಿಖಾ ತಂಡಕ್ಕೆ ನೀಡಿರುವುದು ಕಂಡುಬಂತು. ಆದರೆ ಈ ಬಗ್ಗೆ ನಮ್ಮ ಪ್ರಶ್ನೆಯೆನೆಂದರೇ ತಪ್ಪು ಮಾಡಿದ ಸಿಬ್ಬಂದಿಯನ್ನು ಪ್ರಶ್ನಿಸುವ ಹಕ್ಕು ಪಂಚಾಯತ್ ರಾಜ್ ವ್ಯವಸ್ಥೆಯಡಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿಗೆ ಇಲ್ಲವೇ? ಮತ್ತು ಆರೋಪಿಯ ತನಿಖಾ ಸಂದರ್ಧದಲ್ಲಿ ಪಂಜ ಗ್ರಾಮ ಪಂಚಾಯತ್‌ಗೆ ಸಂಬಂಧಪಡದ ವ್ಯಕ್ತಿಗಳಾದ ಆನಂದ ಬೆಳ್ಳಾರೆ ಮತ್ತು ಅಚ್ಚುತ ಮಲ್ಕಜೆಯವರು ಆರೋಪಿತ ಸಿಬ್ಬಂದಿಯನ್ನು ತನಿಖೆ ಮಾಡದಂತೆ ಒತ್ತಡ ಹೇರಲು ಕಾರಣವೇನು?

ಆದ್ದರಿಂದ ನಮಗೂ ಕೂಡಾ ಆರೋಪಿತ ಬಾಬುರವರು ಈ ಮೇಲೆ ಹೇಳಿದ ಮೌಖಿಕ ಹೇಳಿಕೆ ಸತ್ಯ ಇರಬಹುದೆಂಬ ಸಂಶಯವಿದೆ. ಈ ಕುರಿತು ಆಡಳಿತ ಮಂಡಳಿಯವರಿಗೆ ಮತ್ತು ಅಧಿಕಾರಿ ವರ್ಗದವರಿಗೆ ತಿಳಿದಿರಲಿಲ್ಲವೇ ಎಂಬ ಪ್ರಶ್ನೆಗೆ ಸುಮಾರು 20 ವರ್ಷಗಳಿಂದ ಒಬ್ಬ ಜವಾಬ್ದಾರಿಯುತ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾಗ ಅವನ ಮೇಲೆ ವಿಶ್ವಾಸವಿರುತ್ತದೆ. ಪ್ರಸಕ್ತ ಈ ಬದಲಾದ ಕಾಲಘಟ್ಟದಲ್ಲಿ ಆನ್ ಲೈನ್ ಮುಖಾಂತರವೇ ಎಲ್ಲಾ ಕಛೇರಿ ಕೆಲಸಗಳು ಕಾರ್ಯಚರಿಸುತ್ತಿದ್ದು, ಆರೋಪಿ ಸಿಬ್ಬಂದಿಯು ಆ ವ್ಯವಸ್ಥೆಯಲ್ಲಿಯೇ ಲೋಪವೆಸಗಿರುವುದು ನಮ್ಮ ಗಮನಕ್ಕೆ ಬರಲು ತಡವಾಯಿತು. ಆದಲ್ಲದೇ ಸುಳ್ಯ ತಾಲೂಕಿನಲ್ಲಿ ಪಿ.ಡಿ.ಓ/ಕಾರ್ಯದಶಿಗಳ ಕೊರತೆಯು ತುಂಬಾ ಇದೆ. ಇದ್ದವರೆಲ್ಲಾ 2ರಿಂದ3 ಗ್ರಾಮ ಪಂಚಾಯತ್‌ಳಲ್ಲಿ ಪ್ರಭಾರವಾಗಿ ಕರ್ತವ್ಯ ನಿರ್ವಹಿಸುವವರೇ ಹೆಚ್ಚು.

ಗ್ರಾಮ ಪಂಚಾಯತ್ ಸಿಬ್ಬಂದಿ ಕೊರತೆಗಳ ನಡುವೆಯೂ 1 ರಿಂದ 2 ಪಂಚಾಯತ್‌ಗಳಲ್ಲಿ ಕರ್ತವ್ಯ ನಿರ್ವಹಿಸುವುದು ಹರಸಾಹಸವೇ ಆಗಿದೆ. ಹಾಗಿರುವಾಗ ಕೆಲವೊಂದು ಸಂದರ್ಭ ಸಿಬ್ಬಂದಿಗಳ ಕರ್ತವ್ಯವನ್ನು ಗಮನಿಸುವಾಗ ವಿಳಂಬವಾಗುವುದು ಸಹಜ. ಹಾಗಾಗಿ ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬುದೇ ಪಂಜ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

ನಾರಾಯಣ ಕೃಷ್ಣನಗರ, ಉಪಾಧ್ಯಕ್ಷರು ಪಂಜ ಗ್ರಾಮ ಪಂಚಾಯತ್

[t4b-ticker]
error: Content is protected !!