ಮೈಸೂರು: ಮೈಸೂರು–ಕುಶಾಲನಗರ ನಡುವಿನ ರಾಷ್ಟ್ರೀಯ ಹೆದ್ದಾರಿ 275ರ ಎರಡನೇ ಹಂತದ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಅಂತಿಮ ಅನುಮೋದನೆ ಲಭಿಸಿದ್ದು, ಡಿಸೆಂಬರ್ 8ರಿಂದ ಪ್ಯಾಕೇಜ್–2ರ ಕಾಮಗಾರಿ ಅಧಿಕೃತವಾಗಿ ಆರಂಭವಾಗಲಿದೆ. ಒಟ್ಟು 92.3 ಕಿಲೋಮೀಟರ್ ಉದ್ದದ ಈ ಹೆದ್ದಾರಿಯನ್ನು ನಾಲ್ಕು ಲೇನ್‌ಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದಕ್ಕಾಗಿ ₹4,126 ಕೋಟಿ ಮೊತ್ತವನ್ನು ಮೀಸಲಿರಿಸಲಾಗಿದೆ.ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಮೈಸೂರು–ಮಡಿಕೇರಿ ರಸ್ತೆಯಲ್ಲಿ ಉಂಟಾಗುತ್ತಿರುವ ತೀವ್ರ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಮಹತ್ವದ ಉತ್ತೇಜನ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.ಈ ಮಹತ್ವಾಕಾಂಕ್ಷಿ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 12, 2023ರಂದು ಮಂಡ್ಯದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಮೈಸೂರು–ಕೊಡಗು ಸಂಸದ ಯದುವೀರ್ ಒಡೆಯರ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅರಣ್ಯ ಮತ್ತು ಪರಿಸರ ಸಂಬಂಧಿತ ಎಲ್ಲಾ ನಿಯಮಾವಳಿಗಳನ್ನು ಪೂರೈಸಿದ ಬಳಿಕವೇ ಈ ಯೋಜನೆಗೆ ಹಸಿರು ನಿಶಾನೆ ದೊರೆತಿದೆ ಎಂದು ತಿಳಿಸಿದ್ದಾರೆ.18 ತಿಂಗಳಲ್ಲಿ ಪ್ಯಾಕೇಜ್–2 ಪೂರ್ಣಗೊಳ್ಳುವ ನಿರೀಕ್ಷೆಎರಡನೇ ಹಂತದ ಕಾಮಗಾರಿ ಬಸವನಹಳ್ಳಿಯಿಂದ ಪಿರಿಯಾಪಟ್ಟಣದವರೆಗಿನ 22.7 ಕಿಲೋಮೀಟರ್ ರಸ್ತೆ ಭಾಗವನ್ನು ಒಳಗೊಂಡಿದ್ದು, ಸುಮಾರು 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಅಂದಾಜು 2027ರ ವೇಳೆಗೆ ಈ ಪ್ಯಾಕೇಜ್ ಕಾರ್ಯ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಅಗತ್ಯ ಯಂತ್ರೋಪಕರಣಗಳು ಹಾಗೂ ತಾಂತ್ರಿಕ ಸಿದ್ಧತೆಗಳನ್ನು ಈಗಾಗಲೇ ಗುತ್ತಿಗೆದಾರ ಸಂಸ್ಥೆ ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅರಣ್ಯ ಪ್ರದೇಶದಲ್ಲಿ ಹೆದ್ದಾರಿ ವಿಸ್ತರಣೆ ಕುರಿತು ಚರ್ಚೆಕುಶಾಲನಗರ–ಮಡಿಕೇರಿ ನಡುವಿನ ಹೆದ್ದಾರಿ ಭಾಗವು ದಟ್ಟ ಅರಣ್ಯ ಪ್ರದೇಶದ ಮೂಲಕ ಹಾದುಹೋಗುವುದರಿಂದ ಪ್ಯಾಕೇಜ್–1ಕ್ಕೆ ಸಂಬಂಧಿಸಿದಂತೆ ಇನ್ನೂ ಅರಣ್ಯ ಇಲಾಖೆಯ ಅನುಮತಿ ಪ್ರಕ್ರಿಯೆ ಮುಂದುವರಿದಿದೆ. ಈ ಕುರಿತು ಕೊಡಗು ಸಾರ್ವಜನಿಕ ಅರಣ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ಎಂ. ಗಿರೀಶ್ ಮಾತನಾಡಿ, ಬಸವನಹಳ್ಳಿ ಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಸ್ತಾವನೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದಿದ್ದಾರೆ.ಇದೇ ವೇಳೆ, ವಿವರವಾದ ಯೋಜನಾ ವರದಿ (DPR) ತಯಾರಿಸುವ ಮುನ್ನ ಅರಣ್ಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದರೆ, ಸಾಧ್ಯತೆಗಳನ್ನು ಪರಿಶೀಲಿಸಿ ಅನುಮತಿ ನೀಡಲಾಗುವುದು ಎಂದು ಕೊಡಗು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಸ್ಪಷ್ಟಪಡಿಸಿದ್ದಾರೆ.ಮೈಸೂರು–ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಐದು ಪ್ಯಾಕೇಜ್‌ಗಳಾಗಿ ವಿಭಜಿಸಲಾಗಿದೆ. ಅವುಗಳ ವಿವರ ಹೀಗಿದೆ:ಪ್ಯಾಕೇಜ್–1: ಕುಶಾಲನಗರದಿಂದ ಮಡಿಕೇರಿವರೆಗೆ – 22 ಕಿ.ಮೀ (ಅರಣ್ಯ ಅನುಮತಿ ಪ್ರಕ್ರಿಯೆ ಹಂತದಲ್ಲಿದೆ)ಪ್ಯಾಕೇಜ್–2: ಗುಡ್ಡೇಹೊಸೂರುದಿಂದ ಹಾಸನ–ಪಿರಿಯಾಪಟ್ಟಣ ರಸ್ತೆ ಜಂಕ್ಷನ್ ವರೆಗೆ – 22.7 ಕಿ.ಮೀ (ಡಿ.8ರಿಂದ ಕಾಮಗಾರಿ ಆರಂಭ)ಪ್ಯಾಕೇಜ್–3: ಹೇಮ್ಮಿಗೆ ಗ್ರಾಮದಿಂದ ರಾಮನಾಥಪುರ–ತೇರಕಾನಂಬಿ ರಸ್ತೆ ಹಾಗೂ ಕೆ.ಆರ್.ನಗರ ಜಂಕ್ಷನ್ ವರೆಗೆ – 24.1 ಕಿ.ಮೀಪ್ಯಾಕೇಜ್–4: ರಾಮನಾಥಪುರ–ತೇರಕಾನಂಬಿ ರಸ್ತೆ ಹಾಗೂ ಕೆ.ಆರ್.ನಗರ ಜಂಕ್ಷನ್‌ನಿಂದ ಯಲಚಹಳ್ಳಿ ವರೆಗೆ – 26.5 ಕಿ.ಮೀ ಪ್ಯಾಕೇಜ್–5: ಯಲಚಹಳ್ಳಿಯಿಂದ ಶ್ರೀರಂಗಪಟ್ಟಣ ಬೈಪಾಸ್ ಸಮೀಪದ ಪಶ್ಚಿಮವಾಹಿನಿವರೆಗೆ – 19 ಕಿ.ಮೀಪ್ರಸ್ತುತ ಮೈಸೂರು–ಮಡಿಕೇರಿ ರಸ್ತೆಯಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರದಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಈ ಹೊಸ ನಾಲ್ಕು ಲೇನ್ ಹೆದ್ದಾರಿ ನಿರ್ಮಾಣದಿಂದ ಪ್ರಯಾಣದ ಸಮಯ ಕಡಿಮೆಯಾಗುವುದರ ಜೊತೆಗೆ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ದಾರಿ ತೆರೆದುಕೊಳ್ಳಲಿದೆ. ಜೊತೆಗೆ ಮೈಸೂರು ಹಾಗೂ ಕೊಡಗು ಜಿಲ್ಲೆಗಳ ನಡುವಿನ ಸಂಪರ್ಕ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.
ಮೈಸೂರು–ಕುಶಾಲನಗರ ರಾಷ್ಟ್ರೀಯ ಹೆದ್ದಾರಿ 275 | ಪ್ಯಾಕೇಜ್–2 ಕಾಮಗಾರಿಗೆ ಚಾಲನೆ | ₹4,126 ಕೋಟಿ ವೆಚ್ಚದ 4-ಲೇನ್ ರಸ್ತೆ ಯೋಜನೆಗೆ ಅರಣ್ಯ ಇಲಾಖೆಯ ಅನುಮತಿ
Savistara
Bureau Report
[t4b-ticker]













































