ರಾಜ್ಯದಲ್ಲಿ ವಿದ್ಯಾರ್ಥಿಗಳ ಮೊಬೈಲ್ (Student Mobile) ಬಳಕೆಗೆ ಕಡಿವಾಣ ಹಾಕುವ ಬಗ್ಗೆ ದೊಡ್ಡ ಸುದ್ದಿ ಮುನ್ನೆಲೆಗೆ ಬಂದಿದೆ. 16 ವರ್ಷದೊಳಗಿನ ಮಕ್ಕಳಿಗೆ ಶಾಲೆ (School) ಹಾಗೂ ಕಾಲೇಜು ಕ್ಯಾಂಪಸ್‌ನಲ್ಲಿ (College Campus) ಮೊಬೈಲ್ ಫೋನ್ ನಿಷೇಧ (Mobile Phone Ban) ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಸೋಶಿಯಲ್ ಮೀಡಿಯಾ ಹಾಗೂ ಮಾದಕ ವಸ್ತುಗಳ ವ್ಯಸನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬಹುದೆಂಬ ಸುಳಿವು ದೊರೆತಿದೆ.
ಏಕೆ ಮೊಬೈಲ್ ಬ್ಯಾನ್ ಬಗ್ಗೆ ಚರ್ಚೆ?
ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಸೋಶಿಯಲ್ ಮೀಡಿಯಾ ಗೀಳು ಹೆಚ್ಚಾಗಿದೆ. ದಿನದ ಹಲವಾರು ಗಂಟೆಗಳು ಫೋನ್‌ನಲ್ಲಿ ಕಳೆಯುವುದರಿಂದ ಗೆ ಸಮಯ ಕಡಿಮೆಯಾಗುತ್ತಿದೆ. ಕೆಲವರು ಗೇಮಿಂಗ್, ರೀಲ್ಸ್ ಹಾಗೂ ಚಾಟ್‌ಗಳಲ್ಲಿ ತಲ್ಲೀನರಾಗುತ್ತಿದ್ದಾರೆ. ಇದರಿಂದ ಮಾನಸಿಕ ಒತ್ತಡ, ನಿದ್ರೆ ಕೊರತೆ ಹಾಗೂ ಅಂಕಗಳಲ್ಲಿ ಕುಸಿತ ಕಾಣಿಸುತ್ತಿದೆ. ಈ ಕಾರಣದಿಂದ ಮೊಬೈಲ್ ಬ್ಯಾನ್ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿ ಹೇಳಿದ್ದೇನು?
ಇಂದಿನ ದಿನಗಳಲ್ಲಿ ಯುವಕರು ಡ್ರಗ್ಸ್‌ಗೆ ಬಲಿಯಾಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದ ಅತಿಯಾದ ಬಳಕೆ ಕೂಡ ಅವರಿಗೆ ಹಾನಿ ಮಾಡುತ್ತಿದೆ. ಹೀಗಾಗಿ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್ ಮಾಡುವ ಬಗ್ಗೆ ಯೋಚನೆ ಇದೆ. ಈ ಬಗ್ಗೆ ಸಲಹೆ ನೀಡಿ ಎಂದು ಕುಲಪತಿಗಳಿಂದ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ಕೇಳಿದ್ದಾರೆ.
ಆಸ್ಟ್ರೇಲಿಯಾ ಮಾದರಿ?
ಕೆಲವು ದೇಶಗಳಲ್ಲಿ ಶಾಲಾ ಮಕ್ಕಳಿಗೆ ಮೊಬೈಲ್ ನಿಷೇಧಿಸಲಾಗಿದೆ. ಉದಾಹರಣೆಗೆ ಆಸ್ಟ್ರೇಲಿಯಾದಲ್ಲಿ ಶಾಲಾ ಸಮಯದಲ್ಲಿ ಫೋನ್ ಬಳಕೆಗೆ ನಿಯಂತ್ರಣ ಹೇರಲಾಗಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿಯೂ ಕ್ರಮ ಜಾರಿಯಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.
ಯಾವ ಮಟ್ಟಿಗೆ ಬ್ಯಾನ್?
ಸರ್ಕಾರದ ಯೋಚನೆ ಪ್ರಕಾರ, ಇದು ಎಲ್ಲರಿಗೂ ಅನ್ವಯಿಸುವ ನಿಯಮವಲ್ಲ. 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆ ಮತ್ತು ಕಾಲೇಜು ಕ್ಯಾಂಪಸ್ ಒಳಗೆ ಮೊಬೈಲ್ ಬಳಕೆಗೆ ನಿರ್ಬಂಧ ಇರಬಹುದು. ಮನೆ ಅಥವಾ ಹೊರಗೆ ಬಳಕೆಗೆ ಸಂಪೂರ್ಣ ನಿಷೇಧ ಇರುವುದಿಲ್ಲ ಎಂದು ಹೇಳಲಾಗಿದೆ.
ಕುಲಪತಿಗಳ ಅಭಿಪ್ರಾಯ ಏನು?
ಸಭೆಯಲ್ಲಿ ಭಾಗವಹಿಸಿದ್ದ ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳು ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದಾರಂತೆ. ವಿದ್ಯಾರ್ಥಿಗಳ ಗಮನ ನತ್ತ ಕೇಂದ್ರೀಕರಿಸಲು ಇದು ಸಹಾಯಕವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ತುರ್ತು ಪರಿಸ್ಥಿತಿಯಲ್ಲಿ ಪೋಷಕರ ಸಂಪರ್ಕ ಹೇಗೆ? ಆನ್‌ಲೈನ್ ಕಲಿಕೆಯ ಅವಶ್ಯಕತೆ ಏನು? ಎಂಬ ಪ್ರಶ್ನೆಗಳೂ ಎದುರಾಗಿವೆ.
ಮುಂದಿನ ಹೆಜ್ಜೆ ಏನು?
ಇದು ಇನ್ನೂ ಚರ್ಚಾ ಹಂತದಲ್ಲಿದೆ. ತಕ್ಷಣವೇ ನಿಯಮ ಜಾರಿಯಾಗುವುದಿಲ್ಲ. ಸರ್ಕಾರ ತಜ್ಞರು, ಶಿಕ್ಷಕರು ಹಾಗೂ ಪೋಷಕರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ. ಒಟ್ಟಿನಲ್ಲಿ, ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಸರ್ಕಾರ ಹೊಸ ಕ್ರಮ ಯೋಚಿಸುತ್ತಿದೆ. ಮೊಬೈಲ್ ನಿಷೇಧ ಜಾರಿಯಾಗುತ್ತದೆಯೇ? ಅಥವಾ ನಿಯಂತ್ರಿತ ಬಳಕೆಗೆ ಮಾತ್ರ ಅವಕಾಶ ಕೊಡಲಾಗುತ್ತದೆಯೇ? ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.













































