GOOD NEWS: ಯುವಕರ ಹೋರಾಟಕ್ಕೆ ಮಣಿದ ಸರ್ಕಾರ- 24 ಸಾವಿರ ಹುದ್ದೆಗಳ ನೇಮಕಾತಿ ಮಂಜೂರು

Picture of Savistara

Savistara

Bureau Report

ಬೆಂಗಳೂರು: ಕರ್ನಾಟಕದಲ್ಲಿ (Karnataka) ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ (Jobs) ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ (Dharwad) ಯುವಕರ ಕಿಚ್ಚು ಜೋರಾಗುತ್ತಿದ್ದಂತೆಯೇ ಕರ್ನಾಟಕ ಆರ್ಥಿಕ ಇಲಾಖೆಯು (Karnataka finance department ) 24 ಸಾವಿರ ಹುದ್ದೆಗಳ ನೇಮಕಾತಿಗೆ ಮಂಜೂರಾತಿ ನೀಡಿದೆ.

ಕರ್ನಾಟಕದ ವಿವಿಧ ಒಟ್ಟು 32 ಇಲಾಖೆಯಲ್ಲಿ 24,300 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡಿದೆ. ಎ ದರ್ಜೆಯ 542 ಹುದ್ದೆ, ಬಿ ದರ್ಜೆಯ 619 ಹುದ್ದೆ ಹಾಗೂ ಎಫ್ ಡಿ ಸಿ ದರ್ಜೆಯ 23119 ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಕ್ಲಿಯರೆನ್ಸ್ ನೀಡಿದೆ.

ರಾಜ್ಯದ ವಿವಿಧ ಇಲಾಖೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು, ಹಂತ ಹಂತವಾಗಿ ಭರ್ತಿ ಮಾಡುವುದಾಗಿ ಈ ಹಿಂದೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದರು. ಇನ್ನು ರಾಜ್ಯ ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲಾಗಿದ್ದು, 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ಅಧಿಸೂಚನೆಗಳಿಗೆ ಇದು ಅನ್ವಯವಾಗಲಿದೆ.

ಸಿಎಂ ಹೇಳಿದ್ದೇನು..?: ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಧಾರವಾಡದಲ್ಲಿ ನಡೆಸುತ್ತಿರುವ ಪ್ರತಿಭಟನೆ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮ ಹೇಳಿಕೆ ನೀಡಿದ್ದು, ತಾವು ಈ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿದ್ದಾಗಿ ತಿಳಿಸಿದ್ದಾರೆ.

ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಅನುಭವಿಸುತ್ತಿರುವ ಆತಂಕ, ನಿರಾಶೆ ಮತ್ತು ಅನಿಶ್ಚಿತತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಉದ್ಯೋಗಕ್ಕಾಗಿ ಸಲ್ಲಿಸುವ ಪ್ರತಿ ಅರ್ಜಿಯ ಹಿಂದೆ ಒಂದು ಕನಸಿರುತ್ತದೆ, ಕುಟುಂಬದ ನಿರೀಕ್ಷೆ, ವರ್ಷಗಳ ಕಠಿಣ ಪರಿಶ್ರಮ ಮತ್ತು ನಾಡಿಗಾಗಿ ಸೇವೆ ಸಲ್ಲಿಸುವ ಆಕಾಂಕ್ಷೆ ಇರುತ್ತದೆ. ಯುವಜನರ ಆತಂಕ -ಅಹವಾಲುಗಳು ನನ್ನನ್ನು ತಲುಪಿದೆ. ಅವರ ಭವಿಷ್ಯ ನಮಗೂ ಅತ್ಯಂತ ಮಹತ್ವದ್ದಾಗಿದೆ.

ನಾವು ಅಧಿಕಾರಕ್ಕೆ ಬಂದಾಗ, 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ಇದು ಒಂದೆರೆಡು ದಿನಗಳಲ್ಲಿ ಸೃಷ್ಟಿಯಾದುದಲ್ಲ; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ಸೂಕ್ತ ಯೋಜನೆಯನ್ನು ರೂಪಿಸದಿರುವುದರಿಂದ ಇಷ್ಟು ದೊಡ್ಡ ಸಂಖ್ಯೆಯ ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ವಿರೋಧ ಪಕ್ಷದ ನಾಯಕರು ನಿರಪರಾಧಿ ವಿದ್ಯಾರ್ಥಿಗಳಿಗೆ ತಪ್ಪು ಮಾರ್ಗದರ್ಶನ ಮಾಡಿ ತಮ್ಮ ರಾಜಕೀಯ ಸ್ವಾರ್ಥದ ಈಡೇರಿಕೆಗಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದು ಕುಟುಕಿದ್ದಾರೆ.

[t4b-ticker]
error: Content is protected !!