ದೇಶದಲ್ಲಿ ರಸಗೊಬ್ಬರ ಸಾಕಷ್ಟು ದಾಸ್ತಾನಿದೆ, ಆತಂಕಕ್ಕೆ ಒಳಗಾಗಬೇಕಿಲ್ಲ: ಜೆ.ಪಿ.ನಡ್ಡಾ

Picture of Savistara

Savistara

Bureau Report

ನವದೆಹಲಿ: ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರಲಭ್ಯವಿದೆ. ಮುಂಬರುವ ಮುಂಗಾರು (ಜೂನ್-ಸೆಪ್ಟೆಂಬರ್) ಅವಧಿಯಲ್ಲಿ ಬೆಳೆಗಳಿಗೆ ಅನುಕೂಲವಾಗುವಂತೆ ರೈತರಿಗೆ ರಸಗೊಬ್ಬರ ಪೂರೈಸಲು ಅಗತ್ಯ ಕ್ರಮ ಕೈಗೊಂಡಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ತಿಳಿಸಿದ್ದಾರೆ.ಶುಕ್ರವಾರ ಲೋಕಸಭೆಯಲ್ಲಿ ಕೇಂದ್ರ ಸಚಿವ ಜೆ.ಪಿ.ನಡ್ಡಾ ಮಾತನಾಡಿ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಯುದ್ಧದ ಹೊರತಾಗಿಯೂ ರಸಗೊಬ್ಬರ ಪೂರೈಕೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ರಾಜ್ಯದ ಎಲ್ಲ ಕೃಷಿ ಸಚಿವರ ಜೊತೆಗೆ ಗುರುವಾರವೇ ಮಾತುಕತೆ ನಡೆಸಿ, ರಸಗೊಬ್ಬರ ದಾಸ್ತಾನಿನ ಕುರಿತಂತೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದ್ದಾರೆ.ಯುದ್ಧದ ಬಳಿಕ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ವ್ಯತ್ಯಯ ಉಂಟಾಗಿದ್ದರಿಂದ ಮುಂದಿನ ಮುಂಗಾರು ಅವಧಿಯಲ್ಲಿ ರಸಗೊಬ್ಬರ ಕೊರತೆ ಉಂಟಾಗಬಹುದು ಎಂದು ಹಲವು ಸಂಸದರು ಸದನದಲ್ಲಿ ಕಳವಳ ವ್ಯಕ್ತಪಡಿಸಿದ್ದರು.ಯುದ್ಧ ಆರಂಭಗೊಂಡ ಬೆನ್ನಲ್ಲೇ, ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಿಂದ ರಸಗೊಬ್ಬರ ತಯಾರಿಕೆಗೆ ಬೇಕಾಗುವ ಕಚ್ಚಾವಸ್ತುಗಳ ತರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ರಸಗೊಬ್ಬರ ಲಭ್ಯತೆ ಕುರಿತಂತೆ ಈಗಾಗಲೇ ಕಾರ್ಯತಂತ್ರ ರೂಪಿಸಿದ್ದೇವೆ ಎಂದು ಸದನಕ್ಕೆ ಮಾಹಿತಿ ನೀಡಿದ್ದಾರೆ.

ರಸಗೊಬ್ಬರ ಸಾಕಷ್ಟು ಲಭ್ಯವಿದೆ: ಅನುಪ್ರಿಯಾ ಪಟೇಲ್

ಇದೇ ವಿಚಾರದ ಕುರಿತಾಗಿ ಲೋಕಸಭೆಯಲ್ಲಿ ಲಿಖಿತ ಮಾಹಿತಿ ನೀಡಿದ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, ‘ದೇಶದಲ್ಲಿ ಮಾರ್ಚ್ ಮೊದಲ ಮೂರು ವಾರಗಳ ಕಾಲ ಯೂರಿಯಾ, ಡಿಎಪಿ ಸೇರಿದಂತೆ 24.23 ಲಕ್ಷ ಟನ್ ರಸಗೊಬ್ಬರ ಲಭ್ಯವಿದೆ’ ಎಂದು ತಿಳಿಸಿದ್ದಾರೆ.ಇದರಲ್ಲಿ, ಯೂರಿಯಾ ಉತ್ಪಾದನೆಯು 2026 ಮಾರ್ಚ್ 1-24ರ ಅವಧಿಯಲ್ಲಿ 13.55 ಲಕ್ಷ ಟನ್‌ಗಳಷ್ಟಿದ್ದರೆ, ಡೈ ಅಮೋನಿಯಂ ಫಾಸ್ಪೇಟ್ (ಡಿಎಪಿ), ಎನ್‌ಪಿಕೆ ಮತ್ತು ಸಿಂಗಲ್ ಸೂಪರ್ ಫಾಸ್ಪೇಟ್ (ಎಸ್‌ಎಸ್‌ಪಿ) ಕ್ರಮವಾಗಿ 7.62 ಲಕ್ಷ ಟನ್‌ಗಳು ಮತ್ತು 3.06 ಲಕ್ಷ ಟನ್‌ಗಳಷ್ಟು ಲಭ್ಯವಿದೆ ಎಂದು ಹೇಳಿದ್ದಾರೆ.

[t4b-ticker]
error: Content is protected !!