ಕೊಚ್ಚಿ ಮಾ. 28: 2001 ಹಾಗೂ 2006ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ಕೋರಲು ಯುಡಿಎಫ್ ಅಧ್ಯಕ್ಷ ವಿ.ಡಿ. ಸತೀಶನ್ RSS ನಾಯಕರನ್ನು ಭೇಟಿಯಾಗಿದ್ದರು ಎಂದು ಸಂಘ ಪರಿವಾರದ ನಾಯಕ ಆರ್.ವಿ. ಬಾಬು ಶನಿವಾರ ಪ್ರತಿಪಾದಿಸಿದ್ದಾರೆ.ಆದರೆ, ಈ ಆರೋಪವನ್ನು ವಿ.ಡಿ. ಸತೀಶನ್ ನಿರಾಕರಿಸಿದ್ದಾರೆ. ತಾನು ಎಂದೂ RSS ಅಥವಾ ಬಿಜೆಪಿಯಿಂದ ಮತಗಳನ್ನು ಕೇಳಿಲ್ಲ ಎಂದು ಅವರು ಹೇಳಿದ್ದಾರೆ. ತಾನು ಸ್ಪರ್ಧಿಸುತ್ತಿರುವ ಪರವೂರು ಕ್ಷೇತ್ರದಲ್ಲಿ ವಾಸಿಸುತ್ತಿರುವ ಬಾಬು ಕಾಂಗ್ರೆಸ್ ವಿರೋಧಿಯಾಗಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ RSS ಪರ ಸಂಘಟನೆಯಾದ ಹಿಂದೂ ಐಕ್ಯ ವೇದಿ ರಾಜ್ಯಾಧ್ಯಕ್ಷ ಬಾಬು ಅವರು, ಸತೀಶನ್ 2006ರಲ್ಲಿ RSS ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದನ್ನು ಈ ಹಿಂದೆ ನಿರಾಕರಿಸಿದ್ದರು. ಆದರೆ, ಈಗ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.”ಹಾಗಾದರೆ, ಯಾರು ಸುಳ್ಳು ಹೇಳುತ್ತಿದ್ದಾರೆ? ಇದೇ ರೀತಿ ಭವಿಷ್ಯದಲ್ಲಿ ಅವರು 2001 ಹಾಗೂ 2006ರಲ್ಲಿ ವಿಧಾನಸಭೆ ಚುನಾವಣೆಗಳನ್ನು ಗೆಲ್ಲಲು RSS ಸಹಾಯವನ್ನು ಕೇಳಿರುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ” ಎಂದು ಕೂಡ ಬಾಬು ಹೇಳಿದ್ದಾರೆ.
RSSಗೆ ಸಂಬಂಧಿಸಿದಂತೆ ಕಾಂಗ್ರೆಸ್ ಈಗ ತೆಗೆದುಕೊಂಡ ನಿಲುವು 2001 ಹಾಗೂ 2006ರಲ್ಲಿ ಇದ್ದಂತಿಲ್ಲ. 1996ರಲ್ಲಿ ಸತೀಶನ್ ಅವರು ಸಿಪಿಐಯ ಪಿ. ರಾಜು ವಿರುದ್ಧ ದಯನೀಯವಾಗಿ ಸೋತರು. ಅನಂತರ ಜಯ ಗಳಿಸಲು RSS ನೆರವು ಕೋರಿದರು ಎಂದು ಬಾಬು ತಿಳಿಸಿದ್ದಾರೆ.ಸತೀಶನ್ ಅವರನ್ನು ಸೋಲಿಸಬೇಕೆಂದು ತಾನು ಕೂಡ ಬಯಸಿದ್ದೆ. ತಾನು ಯುಡಿಎಫ್ ಹಾಗೂ ಎಲ್‌ಡಿಎಫ್ ಎರಡನ್ನೂ ಒಂದೇ ನಾಣ್ಯದ ಎರಡು ಮುಖಗಳಾಗಿ ನೋಡುವುದಾಗಿ ಅವರು ಹೇಳಿದ್ದಾರೆ.ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸತೀಶನ್, ತಾನು ಚುನಾವಣೆಯಲ್ಲಿ ಸೋಲಬೇಕೆಂದು ಬಾಬು ಬಯಸಿದ್ದರು. ಇದು ತಾನು ಬಿಜೆಪಿ ಅಥವಾ ಆರ್‌ಎಸ್‌ಎಸ್ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.













































