ಸುಳ್ಯ : ಮುಕ್ಕೂರು ಯೋಗ ಶಿಬಿರ ಸಮಾರೋಪ ಕಾರ್ಯಕ್ರಮ | ಯೋಗದಿಂದ ವ್ಯಕ್ತಿತ್ವ ವಿಕಸನ ಸಾಧ್ಯ – ಈರಯ್ಯ ದೂಂತೂರು

Picture of Savistara

Savistara

Bureau Report

ಮುಕ್ಕೂರು: ಧ್ಯಾನವು ಮನಸ್ಸಿಗೆ, ಯೋಗವು ದೇಹಕ್ಕೆ ಸಂಬಂಧಿಸಿದ್ದು, ಮನಸ್ಸು ಮತ್ತು ದೇಹ ಎರಡೂ ಸಮತೋಲನದಲ್ಲಿದ್ದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಬೆಳ್ಳಾರೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಈರಯ್ಯ ದೂಂತೂರು ಹೇಳಿದರು.

ಮುಕ್ಕೂರು ನೇಸರ ಯುವಕ ಮಂಡಲ ಹಾಗೂ ನೇಸರ ಯುವತಿ ಮಂಡಲದ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ಒಂದು ವಾರ ಕಾಲ ನಡೆದ ಉಚಿತ ಯೋಗ ತರಬೇತಿ ಶಿಬಿರಕ್ಕೆ ಸಂಬಂಧಿಸಿ ಜೂ. 28ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಯೋಗಾಭ್ಯಾಸದಿಂದ ದುಶ್ಚಟಗಳು ದೂರವಾಗಿ ಆರೋಗ್ಯವಂತ ಜೀವನ ನಡೆಸಲು ಸಾಧ್ಯ. ಯೋಗವು ದೇಹವನ್ನು ಸದೃಢಗೊಳಿಸುವುದರ ಜತೆಗೆ ಮನಸ್ಸಿನ ಏಕಾಗ್ರತೆ ಹೆಚ್ಚಿಸುತ್ತದೆ. ಯೋಗದ ಆಳವನ್ನು ಅರಿತು ಅಭ್ಯಾಸ ಮಾಡಿದರೆ ಒತ್ತಡ ನಿವಾರಣೆಯಾಗಿ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಉತ್ತಮ ಆರೋಗ್ಯಕ್ಕೆ ಯೋಗವೇ ಔಷಧಿಯಾಗಿದ್ದು, ಮುಕ್ಕೂರಿನಲ್ಲಿ ಆರಂಭವಾಗಿರುವ ಈ ಯೋಗ ತರಬೇತಿ ಇತರ ಊರುಗಳಿಗೂ ಮಾದರಿಯಾಗಲಿ ಎಂದ ಅವರು, ಮುಕ್ಕೂರು ಪರಿಸರದಲ್ಲಿ ಎಲ್ಲ ರೀತಿಯ ಮೇರು ವ್ಯಕ್ತಿತ್ವಗಳು ರೂಪುಗೊಂಡಿದ್ದು, ಅದು ಈ ಮಣ್ಣಿನ ವಿಶೇಷತೆ. ಈ ಚಟುವಟಿಕೆಯನ್ನು ನನ್ನ ಊರಿನಲ್ಲಿಯೂ ವಿಸ್ತರಿಸುವೆ ಎಂದರು.

ಪತಂಜಲಿ ಯೋಗ ಶಿಕ್ಷಣ ಕೇಂದ್ರ ಬೆಳ್ಳಾರೆ ಇದರ ಯೋಗ ಶಿಕ್ಷಕರಾದ ಕೆ. ಗಣಪಯ್ಯ ವನಶ್ರೀ ಮಾತನಾಡಿ, ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾನವರು ಮಾಧವರಾಗುತ್ತಾರೆ. ಯೋಗದಿಂದ ಜೀವನ ಪ್ರಕಾಶಮಾನವಾಗುತ್ತದೆ. ಒಮ್ಮೆ ಯೋಗದತ್ತ ಒಲವು ಬೆಳೆದರೆ ಅದು ನಮ್ಮ ಜೀವನದ ಭಾಗವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ನಿರಂತರವಾಗಿ ಯೋಗಾಭ್ಯಾಸ ನಡೆಸಬೇಕು ಎಂದು ಕರೆ ನೀಡಿದ ಅವರು, 40 ವರ್ಷಗಳಿಂದ ಜೀವನ ಸಾಗಿಸಿದ ಈ ಊರಿನಲ್ಲಿ ಯೋಗದ ದೀಪ ಬೆಳಗಿಸುವ ಅವಕಾಶ ಸಿಕ್ಕಿದ್ದು ಸೌಭಾಗ್ಯ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಕ್ಕೂರು ನೇಸರ ದಶಪ್ರಣತಿ ಸಮಿತಿ-2026ರ ಅಧ್ಯಕ್ಷ ಡಾ. ನರಸಿಂಹ ಶರ್ಮ ಕಾನಾವು ಮಾತನಾಡಿ, ಜೂನ್ 22ರಿಂದ 28ರವರೆಗೆ ನಡೆದ ಯೋಗ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಗಳು ಚಳಿಯನ್ನೂ ಲೆಕ್ಕಿಸದೆ ಉತ್ಸಾಹದಿಂದ ಭಾಗವಹಿಸಿರುವುದು ಶ್ಲಾಘನೀಯ. ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ; ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಜೀವನ ಪದ್ಧತಿಯಾಗಿದೆ. ಇಂದಿನ ಯಾಂತ್ರಿಕ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯುತ್ತಮ ಮಾರ್ಗವಾಗಿದ್ದು, ಶಿಬಿರ ಮುಕ್ತಾಯಗೊಂಡರೂ ಇಲ್ಲಿ ಕಲಿತ ಯೋಗಾಸನ ಹಾಗೂ ಪ್ರಾಣಾಯಾಮವನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಹಲವು ವರ್ಷಗಳಿಂದ ಸಂಸ್ಥೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಮುಂಜಾನೆಯ ಯೋಗ ತರಬೇತಿ ಕಾರ್ಯಕ್ರಮ ಪ್ರಥಮ ಪ್ರಯತ್ನವಾಗಿದ್ದು, ಸಮಾಜದಲ್ಲಿ ಸಾಮರಸ್ಯ ಹಾಗೂ ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸಲು ಯೋಗ ಸಹಕಾರಿಯಾಗಿದೆ ಎಂದರು.

ನೇಸರ ದಶಪ್ರಣತಿ ಸಮಿತಿ-2026ರ ಸಂಚಾಲಕ ಕುಂಬ್ರ ದಯಾಕರ ಆಳ್ವ ಮಾತನಾಡಿ, ಯೋಗದ ಬಗ್ಗೆ ಹಲವು ವರ್ಷಗಳಿಂದ ಆಸಕ್ತಿ ಇತ್ತು. ಮುಕ್ಕೂರಿನಲ್ಲೇ ಇಂತಹ ತರಬೇತಿ ಆಯೋಜಿಸಿರುವುದು ಸಂತಸದ ವಿಷಯ ಎಂದು ಹೇಳಿದರು.

ಗೌರವಾರ್ಪಣೆ

ಒಂದು ವಾರ ಕಾಲ ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಯೋಗ ಶಿಕ್ಷಕ ಕೆ. ಗಣಪಯ್ಯ ವನಶ್ರೀ ಅವರನ್ನು ನೇಸರ ಸಂಸ್ಥೆಯ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.ಶಿಬಿರಾರ್ಥಿಗಳಾದ ಶ್ರೀಧರ ಗೌಡ ಕೊಂಡೆಪ್ಪಾಡಿ ಹಾಗೂ ಜಯಂತ ಕುಂಡಡ್ಕ ತಮ್ಮ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಮುಕ್ಕೂರು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಘುನಾಥ ಶೆಟ್ಟಿ ಬರಮೇಲು, ನೇಸರ ಯುವಕ ಮಂಡಲದ ಅಧ್ಯಕ್ಷ ರಕ್ಷಿತ್ ಗೌಡ ಕಾನಾವು ಉಪಸ್ಥಿತರಿದ್ದರು. ಊರ ಪ್ರಮುಖರಾದ ನರಸಿಂಹ ತೇಜಸ್ವಿ ಕಾನಾವು, ಗೋಪಾಲಕೃಷ್ಣ ಭಟ್ ಮನವಳಿಕೆ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಜಯಂತ ಪೂಜಾರಿ ಕೊಡಂಗೆ, ಬೆಳ್ಳಾರೆ ಪತಂಜಲಿ ಯೋಗ ಸಮಿತಿಯ ಹೊನ್ನಪ್ಪ, ಪ್ರಸಾದ್ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.

ನೇಸರ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ತೇಜಸ್ವಿತ್ ಅಡ್ಯತಕಂಡ ಸ್ವಾಗತಿಸಿದರು.ನೇಸರ ಯುವತಿ ಮಂಡಲದ ಸದಸ್ಯೆ ಪೃಥ್ವಿ ಅಡ್ಯತಕಂಡ ವಂದಿಸಿದರು. ನೇಸರ ಯುವತಿ ಮಂಡಲದ ಅಧ್ಯಕ್ಷೆ ಬೃಂದಾ ಪೂಜಾರಿ ಮುಕ್ಕೂರು ನಿರೂಪಿಸಿದರು.

[t4b-ticker]
error: Content is protected !!