ಭಟ್ಕಳ ಶಿರಾಲಿ ಅಳ್ವೆಕೋಡಿಯಲ್ಲಿ ದುರಂತದಲ್ಲಿ 10 ಮಂದಿಜಲಸಮಾಧಿ: ₹5 ಲಕ್ಷ ಪರಿಹಾರ

Picture of Savistara

Savistara

Bureau Report

ಭಟ್ಕಳ (ಉತ್ತರ ಕನ್ನಡ ಜಿಲ್ಲೆ): ಕಪ್ಪೆಚಿಪ್ಪು ಆರಿಸಿ ತರಲುತಾಲ್ಲೂಕಿನ ಶಿರಾಲಿ ಅಳ್ವೆಕೋಡಿಯ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಗೆ ಇಳಿದಿದ್ದ, ಶಾರದಾಹೊಳೆ ಗ್ರಾಮದ 10 ಮಂದಿ ಭಾನುವಾರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರು ಸಂಬಂಧಿಕರು.

ಲಕ್ಷ್ಮಿ ಮಹಾದೇವ ನಾಯ್ಕ (40), ಉಮೇಶ ಮಂಜುನಾಥ ನಾಯ್ಕ (25), ಲಕ್ಷ್ಮಿ ಮಾದೇವ ನಾಯ್ಕ (40), ಲಕ್ಷ್ಮಿ ಅಣ್ಣಪ್ಪ ನಾಯ್ಕ (50), ಲಕ್ಷ್ಮಿ ಶಿವರಾಮ ನಾಯ್ಕ (40), ಜ್ಯೋತಿ ನಾಗಪ್ಪ ನಾಯ್ಕ (40), ಮಾಲತಿ ಜಟ್ಟಪ್ಪ ನಾಯ್ಕ (38), ಮಾಸ್ತಮ್ಮ ಮಂಜುನಾಥ ನಾಯ್ಕ (45), ಮಂಜಮ್ಮ ಗೊಯ್ದ ನಾಯ್ಕ (40), ನಾಗರತ್ನ ಪರಮೇಶ್ವರ ನಾಯ್ಕ (38) ಮೃತರು. ಅಳ್ವೆಕೋಡಿಯಲ್ಲಿ ಶವಗಳು ಪತ್ತೆಯಾಗಿವೆ.ಮಾದೇವ ಬೈರಪ್ಪ ನಾಯ್ಕ (45) ಅವರು ಕಣ್ಮರೆಯಾಗಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.ತೀವ್ರ ಅಸ್ವಸ್ಥಗೊಂಡಿದ್ದ ಮಾದೇವಿ ಮಂಜುನಾಥ ನಾಯ್ಕ (60), ಲತಾ ಜಗದೀಶ ನಾಯ್ಕ (38), ನಾಗರತ್ನ ಈಶ್ವರ ನಾಯ್ಕ (40) ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಕಪ್ಪೆಚಿಪ್ಪು ಆರಿಸಲು ತೆರಳಿದ್ದಾಗ ನೀರಿನ ಹರಿವು ಕಡಿಮೆ ಇತ್ತು. ನದಿ ಮಧ್ಯಕ್ಕೆ ಸಾಗಿದಾಗ ಸಮುದ್ರದ ಉಬ್ಬರದಿಂದ ನೀರು ಒಳ ನುಗ್ಗಿದೆ. ನೀರಿನ ಮಟ್ಟ ಏಕಾಏಕಿ ಹೆಚ್ಚಿ, ಎಲ್ಲರೂ ಮುಳುಗಿದ್ದಾರೆ. ಮೃತರಿಗೆ ಈಜು ಬರುತ್ತಿರಲಿಲ್ಲ. ಹೂಳು ಹೆಚ್ಚಿದ್ದರಿಂದ ಅವರಿಗೆ ಪಾರಾಗಲು ಸಾಧ್ಯವಾಗಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ತಿಳಿಸಿದರು.’ಸಮುದ್ರ ಉಬ್ಬರದ ಸಾಧ್ಯತೆಯಿಂದ ನದಿಗೆ ಇಳಿಯದಂತೆ ಸ್ಥಳೀಯ ಮೀನುಗಾರರು ಎಚ್ಚರಿಸಿದ್ದರು. ಆದರೆ, ಬೆಳಿಗ್ಗೆ 10 ಗಂಟೆಗೆ ಮೊದಲು ನೀರಿನ ಹರಿವು ತೀರಾ ಕಡಿಮೆ ಇತ್ತು. ಆಗ ನದಿಯ ಮಧ್ಯಭಾಗಕ್ಕೆ ತೆರಳಿರುವ ಸಾಧ್ಯತೆ ಇದೆ. ಘಟನೆ ನಡೆದ ಸ್ಥಳದಿಂದ ಕೇವಲ ಒಂದು ಕಿ.ಮೀ ಅಂತರದಲ್ಲಿಯೇ ಅರಬ್ಬಿ ಸಮುದ್ರ ಇದ್ದು, ಅದರಿಂದ ಉಬ್ಬರದ ಸಮಯದಲ್ಲಿ ಬಹುಬೇಗನೆ ನೀರು ನದಿಗೆ ಬಂದಿದೆ. ಕಪ್ಪೆ ಚಿಪ್ಪು ಆರಿಸಲು ನದಿಗೆ ಇಳಿದಿದ್ದವರು ಪಾರಾಗಲು ಪರಸ್ಪರ ಕೈ ಹಿಡಿದು ಸಾಗಿರುವ ಶಂಕೆ ಇದೆ. ಗಾಬರಿಗೊಂಡು ಕೈ ಎಳೆದುಕೊಂಡಿದ್ದರಿಂದ ನಿಯಂತ್ರಣ ತಪ್ಪಿ ಮುಳುಗಿರಬಹುದು’ ಎಂದು ಅಳ್ವೆಕೋಡಿ ಗ್ರಾಮಸ್ಥರು ಹೇಳಿದರು.

ಹೆಚ್ಚಿನವರು ಕೂಲಿ ಕಾರ್ಮಿಕರು

ಮೃತಪಟ್ಟವರಲ್ಲಿ ಬಹುತೇಕರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಕಪ್ಪೆ ಚಿಪ್ಪು (ಕಳಿನಟ್ಟಿ) ಹೇರಳವಾಗಿ ಸಿಗುವ ಕಾರಣಕ್ಕೆ ಈ ನದಿಗೆ 7 ಕಿ.ಮೀ ದೂರದ ಶಾರದಾಹೊಳೆ ಗ್ರಾಮದಿಂದ ಕಪ್ಪೆಚಿಪ್ಪು ಆರಿಸಲು ಬಂದಿದ್ದರು. ‘ಮಾಲತಿ ಜಟ್ಟಪ್ಪ ನಾಯ್ಕ ಆಶಾ ಕಾರ್ಯಕರ್ತೆಯಾಗಿದ್ದರು. ಲಕ್ಷ್ಮಿ ಶಿವರಾಮ ನಾಯ್ಕ ಅವರ ಪತಿ 12 ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಅವರಿಗೆ ಮೂವರು ಮಕ್ಕಳು. ಶಿರಾಲಿಯ ಸೇಂಟ್ ಥಾಮಸ್‌ ಶಾಲೆಯಲ್ಲಿ ಸಹಾಯಕಿಯಾಗಿದ್ದ ಲಕ್ಷ್ಮಿ ಭಾನುವಾರ ರಜೆ ಇದ್ದುದರಿಂದ ಕಪ್ಪೆ ಚಿಪ್ಪು ಆರಿಸಲು ಬಂದಿದ್ದರು’ ಎಂದು ಮೃತರ ಸಂಬಂಧಿಯೊಬ್ಬರು ಕಣ್ಣೀರಾದರು.

ತಲಾ ₹5 ಲಕ್ಷ ಪರಿಹಾರ

ದುರಂತಕ್ಕೆ ದುಃಖ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಬೆಂಗಳೂರಿಗೆ ತೆರಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನಿಗದಿತ ಕಾರ್ಯಕ್ರಮ ಮೊಟಕುಗೊಳಿಸಿ ಸಂಜೆಯ ವೇಳೆಗೆ ಶಿರಾಲಿಗೆ ಮರಳಿದ್ದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!