ರಾಜ್ಯ ಸರ್ಕಾರದ ದ್ವೇಷ ಭಾಷಣ ಮಸೂದೆಗೆ ಕೇಂದ್ರ ಅಡ್ಡಿ: ಮಸೂದೆಯಲ್ಲಿ ಏನಿದೆ?

Picture of Savistara

Savistara

Bureau Report

ಬೆಂಗಳೂರು: ದ್ವೇಷ ಭಾಷಣ ಮತ್ತು ದ್ವೇಷಾಪರಾಧಎಸಗುವವರನ್ನು ಶಿಕ್ಷೆಗೆ ಗುರಿಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ ಮಸೂದೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ.

ದ್ವೇಷ ಭಾಷಣ ಹಾಗೂ ದ್ವೇಷಾಪರಾಧಗಳನ್ನು ತಡೆಯಲು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ಪ್ರತಿಬಂಧಕ) ಮಸೂದೆ -2025′ ಅನ್ನು ಸಿದ್ದಪಡಿಸಿ, ಅಂಕಿತಕ್ಕಾಗಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಗೆ ಸರ್ಕಾರ ಕಳುಹಿಸಿತ್ತು. ಆದರೆ, ಹಲವು ಕಾರಣಗಳನ್ನು ನೀಡಿ ಅಂಕಿತ ಹಾಕಲು ನಿರಾಕರಿಸಿದ್ದ ರಾಜ್ಯಪಾಲರು, ಮಸೂದೆಯನ್ನು ರಾಷ್ಟ್ರಪತಿಯ ವಿವೇಚನೆಗೆ ಕಾಯ್ದಿರಿಸಿದ್ದರು. ರಾಜ್ಯ ಸರ್ಕಾರ ರಾಷ್ಟ್ರಪತಿಯ ಅಂಕಿತಕ್ಕೆ ರವಾನಿಸಿತ್ತು.ಆದರೆ, ಇಂಥದ್ದೊಂದು ಮಸೂದೆಯ ಅಗತ್ಯ ಇದೆಯೇ’ ಎಂದು ಪ್ರಶ್ನಿಸಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಪತ್ರ ಬರೆದಿದೆ.’ಪ್ರಸ್ತಾವಿತ ಮಸೂದೆಯಲ್ಲಿರುವ ಅಂಶಗಳು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)- 2023ರ ವ್ಯಾಪ್ತಿಯಲ್ಲಿ ಮತ್ತು ಈಗಾಗಲೇ ಜಾರಿಯಲ್ಲಿರುವ ಕಾನೂನುಗಳ ಅಡಿಯಲ್ಲಿ ಸೇರಿಕೊಂಡಿವೆ. ಹೀಗಿರುವಾಗ, ರಾಜ್ಯ ಸರ್ಕಾರವು ಪ್ರತ್ಯೇಕ ಕಾನೂನು ಜಾರಿಗೊಳಿಸುವುದರಿಂದ ನಕಲು ಮತ್ತು ಏಕರೂಪತೆಯ ಕೊರತೆ ಆಗಬಹುದು’ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಕೇಂದ್ರ-ರಾಜ್ಯ ವಿಭಾಗ) ತನ್ನ ಪತ್ರದಲ್ಲಿ ಅಭಿಪ್ರಾಯಪಟ್ಟಿದೆ.

‘ಈ ಅಂಶಗಳ ಕಾರಣಕ್ಕೆ ಪ್ರಸ್ತಾವಿತ ಮಸೂದೆಯು ಈ ಹಂತದಲ್ಲಿ ಅಗತ್ಯವಿಲ್ಲವೆಂದು ಭಾವಿಸಲಾಗಿದೆ. ಅಲ್ಲದೆ, ಈ ಮಸೂದೆಯಲ್ಲಿ ಉಲ್ಲೇಖಿಸಿರುವ ಎಲ್ಲ ಕಳವಳಗಳನ್ನು ಪರಿಹರಿಸಲು ಸದ್ಯ ಜಾರಿಯಲ್ಲಿರುವ ಕಾನೂನು ಚೌಕಟ್ಟು ಸಾಕು’ ಎಂದೂ ಸಚಿವಾಲಯ ಸ್ಪಷ್ಟವಾಗಿ ಹೇಳಿದೆ. ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ ಈ ಅಭಿಪ್ರಾಯ ನೀಡಲಾಗಿದೆ ಎಂದು ತಮ್ಮ ಇಲಾಖೆಯ ಕಾನೂನು ಘಟಕಕ್ಕೆ ಸಚಿವಾಲಯದ ಉಪ ಕಾರ್ಯದರ್ಶಿ ಸುಭಾಷ್ ಕುಮಾ‌ರ್ ತಿಳಿಸಿದ್ದಾರೆ.ಈ ಪತ್ರವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳು ಮತ್ತು ಶಾಸನ ಇಲಾಖೆಯ ಕಾರ್ಯದರ್ಶಿಗೆ ಮೇ 12ರಂದು ಪತ್ರ ಬರೆದಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಕಾನೂನು ವಿಭಾಗ, ‘ಪ್ರಸ್ತಾಪಿತ ಮಸೂದೆಯ ಕುರಿತಂತೆ ಮುಂದಿನ ಪ್ರಕ್ರಿಯೆ ಕೈಗೊಳ್ಳಲು, ಪತ್ರದಲ್ಲಿರುವ ಅಂಶಗಳ ಕುರಿತಂತೆ ಸ್ಪಷ್ಟಿಕರಣ ನೀಡಬೇಕು’ ಎಂದು ತಿಳಿಸಿದೆ.ಇದೀಗ, ಸರ್ಕಾರದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಇದೇ 20ರಂದು ಪತ್ರ ಬರೆದಿರುವ ಸಂಸದೀಯ ವ್ಯವಹಾರಗಳು ಮತ್ತು ಶಾಸನ ಇಲಾಖೆಯ ಕಾರ್ಯದರ್ಶಿ ಜಿ. ಶ್ರೀಧ‌ರ್, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಮಸೂದೆಯ ಕುರಿತಂತೆ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಸ್ಪಷ್ಟಿಕರಣ ನೀಡುವಂತೆ ಮನವಿ ಮಾಡಿದ್ದಾರೆ.

‘ದ್ವೇಷ ಅಪರಾಧಗಳನ್ನು ಸಹಿಸುವುದಿಲ್ಲ’ ಎಂದು 2018ರ ಜುಲೈ 17ರಂದು ಹಾಗೂ ‘ಕೋಮು ದ್ವೇಷ ಹರಡುವ ಅಥವಾ ದ್ವೇಷ ಭಾಷಣದಲ್ಲಿ ತೊಡಗಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ’ ಎಂದು 2025ರ ಮೇ 5ರಂದು ಪ್ರತ್ಯೇಕ ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ತೀರ್ಪುಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ, ಈ ಮಸೂದೆಯನ್ನು ರೂಪಿಸಿ ಅಂಕಿತಕ್ಕೆ ರಾಜ್ಯಪಾಲರಿಗೆ ಕಳುಹಿಸಿತ್ತು.ಆದರೆ, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ನೀಡಿದ್ದ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ಮತ್ತು ಸಾಂವಿಧಾನಿಕವಾಗಿ ಸಂರಕ್ಷಿತ ಪ್ರಜಾಪ್ರಭುತ್ವದ ಚರ್ಚೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಉಂಟು ಮಾಡುವ ಸಾಧ್ಯತೆಯ ಆತಂಕ ವ್ಯಕ್ತಪಡಿಸಿ ಮಸೂದೆಯನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದ ರಾಜ್ಯಪಾಲರು, ರಾಷ್ಟ್ರಪತಿಯ ವಿವೇಚನೆಗೆ ಕಾಯ್ದಿರಿಸಿದ್ದರು. ರಾಷ್ಟ್ರಪತಿಯ ಅಂಕಿತಕ್ಕಾಗಿ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ (ನ್ಯಾಯಾಂಗ) ಫೆ. 4ರಂದು ರವಾನಿಸಲಾಗಿತ್ತು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಮಸೂದೆಯಲ್ಲಿ ಏನಿದೆ?

ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸಿದ್ಧಪಡಿಸಿದ್ದ ಈ ಮಸೂದೆಯು 2025ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಸದಸ್ಯರ ತೀವ್ರ ವಿರೋಧ ಮತ್ತು ಪ್ರತಿಭಟನೆ ನಡುವೆ ಅಂಗೀಕಾರಗೊಂಡಿತ್ತು. ದ್ವೇಷ ಭಾಷಣ ಪ್ರಸರಣೆ, ಪ್ರಕಟಣೆ, ಪ್ರಚಾರ ತಡೆಯಲು, ನಿರ್ದಿಷ್ಟ ವ್ಯಕ್ತಿ, ಸಮೂಹ, ಸಂಸ್ಥೆಗಳ ವಿರುದ್ಧ ದ್ವೇಷ ಹುಟ್ಟಿಸುವ ಅಪರಾಧಗಳನ್ನು ತಡೆಯಲು ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಮೊದಲ ಬಾರಿಗೆ ದ್ವೇಷ ಭಾಷಣ ಮಾಡಿದರೆ ಅಥವಾ ದ್ವೇಷ ಅಪರಾಧದಲ್ಲಿ ಭಾಗಿಯಾದರೆ ಕನಿಷ್ಠ 1 ವರ್ಷ, ಗರಿಷ್ಠ 7 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ₹50 ಸಾವಿರ ದಂಡ, ಪುನರಾವರ್ತನೆ ಮಾಡಿದರೆ ಕನಿಷ್ಠ 2 ವರ್ಷದಿಂದ ಗರಿಷ್ಠ 7 ವರ್ಷದವರೆಗೆ ಜೈಲು ಶಿಕ್ಷೆ, ₹1 ಲಕ್ಷ ದಂಡ ವಿಧಿಸಲು ಅವಕಾಶ ನೀಡಲಾಗಿತ್ತು. ದ್ವೇಷ ಭಾಷಣ ಮಾಡಿದರೆ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಾದರೆ ಜಾಮೀನುರಹಿತ ಪ್ರಕರಣವಾಗಲಿದೆ. ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ದ್ವೇಷ ಭಾಷಣಗಳ ವಿಚಾರಣೆಗೂ ಅವಕಾಶ ನೀಡಲಾಗಿದೆ.

ರಾಜ್ಯಪಾಲರ ಆಕ್ಷೇಪವೇನು?

ಮಸೂದೆಗೆ ಅಂಕಿತ ಹಾಕದೆ ಸರ್ಕಾರಕ್ಕೆ ವಾಪಸ್ ಮಾಡಿದ್ದ ರಾಜ್ಯಪಾಲರು, 29 ಕಾರಣಗಳನ್ನು ನೀಡಿದ್ದರು. ಮಸೂದೆಯಲ್ಲಿ ದ್ವೇಷ ಭಾಷಣ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ ಎಂದಿದ್ದರು. ಇದರಿಂದಾಗಿ ಜಾತಿ, ಧರ್ಮ, ಜನಾಂಗದ ವ್ಯಕ್ತಿಗಳ ಮೇಲೆ ಪೂರ್ವಗ್ರಹದಿಂದ ಕ್ರಮ ಆಗುವ ಸಾಧ್ಯತೆ ಇದೆ. ಕೆಲವೊಂದು ಅಂಶಗಳು ಸಂವಿಧಾನಾತ್ಮಕವಾಗಿ ಸಂರಕ್ಷಿತ ಪ್ರಜಾಪ್ರಭುತ್ವದ ಚರ್ಚೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುವ ಸಾಧ್ಯತೆ ಇದೆ. ಮಸೂದೆ ಕಾನೂನಾದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಮೂಲಭೂತ ಹಕ್ಕನ್ನು ಕಸಿಯುವ ಸಾಧ್ಯತೆ ಇದೆ. ಆನ್‌ಲೈನ್ ವಿಷಯಗಳನ್ನು ನಿಯಂತ್ರಿಸುವ ಹಾಗೂ ಪೊಲೀಸ್ ಬಲ ಬಳಸಿಕೊಂಡು ಕಾನೂನು ದುರುಪಯೋಗಪಡಿಸುವ ಸಾಧ್ಯತೆ ಇದೆ. ದ್ವೇಷ ಭಾಷಣ ನಿಯಂತ್ರಣಕ್ಕೆ ಈಗಾಗಲೇ ಹಲವು ಕಾನೂನುಗಳಿವೆ. ಹೀಗಾಗಿ, ಈ ಮಸೂದೆಯ ಅಗತ್ಯವೇನಿದೆ? ಬೌದ್ಧಿಕ ಚಿಂತನೆ ಹಾಗೂ ಸ್ವತಂತ್ರ ಅಭಿವ್ಯಕ್ತಿಗೆ ಇಂತಹ ಮಸೂದೆಯಿಂದ ಅಡ್ಡಿಯಾಗುವ ಸಾಧ್ಯತೆ ಇದೆ’ ಎಂದೂ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದೂ ಮೂಲಗಳು ಹೇಳಿವೆ.

[t4b-ticker]
error: Content is protected !!