ಪುತ್ತೂರು: ಐವರ್ನಾಡು ಗ್ರಾಮದ ವಿವಿಧ ಪ್ರದೇಶಗಳಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿಯಿಂದ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ, ‘ಐವರ್ನಾಡಿನ ಕೃಷಿಕ – ಬಂಧುಗಳ ನಿಯೋಗ’ ಇಂದು ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಸುಬ್ಬಯ್ಯ ನಾಯ್ಕ ಹಾಗೂ ವಲಯ ಅರಣ್ಯಾಧಿಕಾರಿ (RFO) ಕಿರಣ್‌ರವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು.ಕಳೆದ ಕೆಲವು ಸಮಯದಿಂದ ಐವರ್ನಾಡಿನ ಕೊಚ್ಚಿ, ಕುದುಂಗು, ನಿಡುಬೆ, ಜಬಳೆ, ಬೇಂಗಮಲೆ ಮುಂತಾದ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಸತತವಾಗಿ ರೈತರ ತೋಟಗಳಿಗೆ ದಾಳಿ ನಡೆಸುತ್ತಿದ್ದು, ಕೃಷಿ ಬೆಳೆಯನ್ನು ನಾಶಮಾಡುತ್ತಿದೆ. ಇದರಿಂದ ಕೃಷಿಕರು ತೋಟಗಳಲ್ಲಿ ಕೆಲಸ ಮಾಡಲು ಹಾಗೂ ರಬ್ಬರ್ ಕಾರ್ಮಿಕರು ಟ್ಯಾಪಿಂಗ್ ಮಾಡಲು ಭಯಪಡುವಂತಾಗಿದೆ ಎಂದು ನಿಯೋಗದ ಸದಸ್ಯರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು. ಈ ನಿಟ್ಟಿನಲ್ಲಿ, ಕೆಳಗಿನ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು:
• ಕಾಡಾನೆಗಳನ್ನು ಶೀಘ್ರವಾಗಿ ‘ಕೋಂಬಿಂಗ್’ ಕಾರ್ಯಾಚರಣೆಯ ಮೂಲಕ ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಬೇಕು.
• ಆನೆಗಳ ದಾಳಿಯಿಂದ ನಷ್ಟ ಅನುಭವಿಸಿದ ರೈತರಿಗೆ ತಕ್ಷಣ ಸೂಕ್ತ ಪರಿಹಾರ ಒದಗಿಸಬೇಕು.
• ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ಕುರಿತು ರೈತರಿಗೆ ಅಗತ್ಯ ಮಾಹಿತಿ ನೀಡಲು, ಐವರ್ನಾಡಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಬೇಕು.
ಕೃಷಿಕರ ಮನವಿಯನ್ನು ಆಲಿಸಿದ ಅರಣ್ಯಾಧಿಕಾರಿಗಳು, ಸಮಸ್ಯೆ ಪರಿಹಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಶೀಘ್ರದಲ್ಲೇ ACF ಸುಬ್ಬಯ್ಯ ನಾಯ್ಕ ಅವರ ಉಪಸ್ಥಿತಿಯಲ್ಲಿ ಐವರ್ನಾಡಿನಲ್ಲಿ ಒಂದು ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಇದರ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು. ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದರು.
ಕೃಷಿಕ – ಬಂಧುಗಳ ನಿಯೋಗದಲ್ಲಿದ್ದವರು:
ನಿಯೋಗದಲ್ಲಿ ಕೃಷ್ಣ ಪ್ರಸಾದ್ ಮಡ್ತಿಲ, ಕಿಶನ್ ಜಬಳೆ, ಗಣೇಶ್ ಕೊಚ್ಚಿ, ಮುರಳೀಧರ ಕೊಚ್ಚಿ, ಜಯಂತ್ ಕುದುಂಗು, ಸಾತ್ವಿಕ್ ಕುದುಂಗು, ನಂದಕುಮಾರ್ ಬಾರೆತ್ತಡ್ಕ, ನಿಖಿಲ್ ಮಡ್ತಿಲ, ಗಣೇಶ್ ಭಜಂತಡ್ಕ, ಮೋಹಕ್ ಹಸಿಯಡ್ಕ, ರಕ್ಷಿತ್ ಸಾರಕೂಟೇಲು, ನವೀನ್ ಸಾರಕೆರೆ ಮತ್ತು ಅನಿಂದಿತ್ ಕೆ ಎಸ್ ಉಪಸ್ಥಿತರಿದ್ದರು.
















































