ಉಪ್ಪಿನಂಗಡಿ: ವ್ಯಾಪಕ ಅವ್ಯವಹಾರ, ಭ್ರಷ್ಟಾಚಾರಗಳ ದೂರಿನ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ.ಗೆ ಸೆ.9ರಂದು ಲೋಕಾಯುಕ್ತ ದಾಳಿ ನಡೆಯಿತು.
ಲೋಕಾಯುಕ್ತ ಡಿವೈಎಸ್ಪಿ ಗಾನ ಕುಮಾರಿ ನೇತೃತ್ವದ ಲೋಕಾಯುಕ್ತ ತಂಡವು ದಾಳಿ ನಡೆಸಿ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಿತು.
ದೂರುಗಳ ಸುರಿಮಳೆ:ಗ್ರಾ.ಪಂ.ಗೆ ಲೋಕಾಯುಕ್ತ ದಾಳಿ ನಡೆಸಿರುವ ಸುದ್ದಿ ತಿಳಿದ ಕೂಡಲೇ ಗ್ರಾ.ಪಂ. ವ್ಯಾಪ್ತಿಯ ಸಂತ್ರಸ್ತ ವರ್ತಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಗ್ರಾ.ಪಂ.ನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಲೋಕಾಯುಕ್ತ ತಂಡಕ್ಕೆ ದೂರು ನೀಡಿದರು.
ಪಂಜಳದ ಶಾಲಿವಾಹನ ಪ್ಯೂಯೆಲ್ಸ್ನ ಮಾಲಕ ಚಂದ್ರಶೇಖರ ತಾಳ್ತಜೆಯವರು, ತನ್ನ ಪೆಟ್ರೋಲ್ ಪಂಪ್‌ನ ಪರವಾನಿಗೆಯನ್ನು ನವೀಕರಣ ಮಾಡಿಕೊಡುತ್ತಿಲ್ಲ. ನವೀಕರಣಕ್ಕೆ ಅರ್ಜಿಯನ್ನು ಕೂಡಾ ಗ್ರಾ.ಪಂ.ನಲ್ಲಿ ತೆಗೆದುಕೊಳ್ಳುತ್ತಿಲ್ಲ. ಹಲವು ತಿಂಗಳಿನಿಂದ ಇದಕ್ಕಾಗಿ ನಾನು ಅಲೆದಾಡುತ್ತಿದ್ದೇನೆ. ಅಲ್ಲದೇ, ನನ್ನ ಮಾಲಕತ್ವದ ಕಟ್ಟಡಗಳ ತೆರಿಗೆಯನ್ನು ಕೂಡಾ ಗ್ರಾ.ಪಂ.ನಲ್ಲಿ ತಗೊಳ್ತಾ ಇಲ್ಲ. ಸಿಬ್ಬಂದಿಗಳಲ್ಲಿ ಈ ಬಗ್ಗೆ ವಿಚಾರಿಸಿದರೆ ಪಿಡಿಒ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದಾರೆ ಎನ್ನುತ್ತಾರೆ. ಅವರು ಕೇಳಿದಷ್ಟು ಲಂಚ ಕೊಟ್ಟರೆ ಮಾತ್ರ ಇಲ್ಲಿ ಕೆಲಸಗಳು ನಡೆಯುತ್ತವೆ ಎಂದು ಲೋಕಾಯುಕ್ತ ಡಿವೈಎಸ್ಪಿ ಅವರಲ್ಲಿ ತಿಳಿಸಿದರು.ಉಲ್ಲಾಸ್ ಬಾರ್‌ನ ಕರುಣಾಕರ ಸುವರ್ಣ ಅವರು, ನಾನು 1987ರಿಂದ ಉಪ್ಪಿನಂಗಡಿಯಲ್ಲಿ ಉಲ್ಲಾಸ್ ಬಾರ್ ನಡೆಸಿಕೊಂಡು ಬರುತ್ತಿದ್ದೇನೆ. ಆದರೆ ಈ ಬಾರಿ ಅದರ ಪರವಾನಿಗೆ ನವೀಕರಣ ಗ್ರಾ.ಪಂ. ಮಾಡಿಕೊಡುತ್ತಿಲ್ಲ. ಅದಕ್ಕೆ ಅರ್ಜಿಯನ್ನು ಕೂಡಾ ತೆಗೆದುಕೊಳ್ಳುತ್ತಿಲ್ಲ ಎಂದು ತನ್ನ ದೂರಿನಲ್ಲಿ ತಿಳಿಸಿದರು.
ನಿರಾಲ ಬಾರ್‌ನ ನವೀನ ರೈಯವರು ಕೂಡಾ ಅವರ ಮಾಲಕತ್ವದ ನಿರಾಲ ಬಾರ್‌ನ ಲೈಸನ್ಸ್ ನವೀಕರಣ ಮಾಡಿಕೊಡುತ್ತಿಲ್ಲ ಎಂದು ದೂರಿದರು. ಕಾರ್ತಿಕ್ ಬಾರ್‌ನ ಆದಿತ್ಯ ಭಟ್ ಅವರು ಕೂಡಾ ಬಾರ್ ಲೈಸನ್ಸ್ ನವೀಕರಣ ಮಾಡದಿರುವ ಬಗ್ಗೆ ದೂರು ನೀಡಿದರು. ರಹಿಮಾನ್ ಪೊರುಂಕಾಜೆಯವರು ಉಪ್ಪಿನಂಗಡಿಯಲ್ಲಿ ಈ ಹಿಂದೆ ಏಲಂ ಆದ ಗ್ರಾ.ಪಂ. ಕಟ್ಟಡಗಳನ್ನು ಅವಧಿ ಮುಗಿದ ಬಳಿಕ ಏಲಂ ನಡೆಸದೇ ಕೊಠಡಿ ಪಡೆದವರಿಂದ ಹೆಚ್ಚುವರಿಯಾಗಿ ಲಂಚ ತೆಗೆದುಕೊಂಡು ಅವರಿಗೆ ಆ ಕೊಠಡಿಯನ್ನು ಮಾಡಿಕೊಡುವುದು, ತ್ಯಾಜ್ಯ ಘಟಕದ ಅವ್ಯವಸ್ಥೆಯ ಬಗ್ಗೆ ದೂರು ನೀಡಿದರಲ್ಲದೆ, ಕೆಲವು ಬಾರಿ ರಾತ್ರಿ ಇಲ್ಲಿ ಪಿಡಿಒ, ಒಂದೆರಡು ಸಿಬ್ಬಂದಿ ಹಾಗೂ ಮಧ್ಯವರ್ತಿಗಳು ಗ್ರಾ.ಪಂ.ನಲ್ಲಿ ಮೀಟಿಂಗ್ ನಡೆಸುವ ಕುರಿತು ಆರೋಪಿಸಿದರಲ್ಲದೆ, ಈ ಬಗ್ಗೆ ಸಿಸಿ ಕ್ಯಾಮರಾ ಪರಿಶೀಲಿಸಲು ಆಗ್ರಹಿಸಿದರು.ಹಲವು ಮಂದಿ ವರ್ತಕರು ಕೂಡಾ ಈ ಸಂದರ್ಭ ಗ್ರಾ.ಪಂ.ಗೆ ಆಗಮಿಸಿ ಇಲ್ಲಿನ ಅವ್ಯವಹಾರಗಳು, ಪರವಾನಿಗೆ ನವೀಕರಣಕ್ಕೆ ಲಂಚಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಎಳೆಎಳೆಯಾಗಿ ಲೋಕಾಯುಕ್ತರ ಮುಂದೆ ಬಿಚ್ಚಿಟ್ಟರು.
ಸಿಬ್ಬಂದಿಗೆ ತರಾಟೆ:
ದೂರುಗಳನ್ನು ಆಲಿಸಿದ ಲೋಕಾಯುಕ್ತ ಡಿವೈಎಸ್ಪಿಯವರು ಗ್ರಾ.ಪಂ. ಸಿಬ್ಬಂದಿಯವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಯಾವುದೇ ಅರ್ಜಿಗಳನ್ನು ತೆಗೆದು ಅದಕ್ಕೆ ಬೇಕಾದ ಹಿಂಬರಹ ಕೊಡೋದು ನಿಮ್ಮ ಕರ್ತವ್ಯ. ಪಿಡಿಒ ಅರ್ಜಿ ತಗೆದುಕೊಳ್ಳಬೇಡಿ ಎಂದು ಹೇಳಿದರೂ ನೀವು ನಿಮ್ಮ ಕರ್ತವ್ಯ ಮಾಡಬೇಕು ಎಂದರಲ್ಲದೆ, ಆ ಸಂದರ್ಭ ಅಲ್ಲಿ ಬಂದ ದೂರುದಾರರಲ್ಲಿದ್ದ ಅರ್ಜಿಗಳನ್ನು ತಕ್ಷಣವೇ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ ಹಿಂಬರಹ ನೀಡಬೇಕೆಂದು ಸೂಚಿಸಿದರು.24ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಪಿಡಿಒ ಹೇಳದೇ ಯಾವುದೇ ಕೆಲಸಗಳನ್ನು ಸಿಬ್ಬಂದಿಗಳು ಮಾಡುತ್ತಿಲ್ಲ. ಲಂಚ ಕೊಟ್ಟರೆ ಮಾತ್ರ ಅಂತವರ ಕೆಲಸ ಮಾಡಿ ಎಂದು ಪಿಡಿಒ ಹೇಳುತ್ತಾರೆ. ಇಲ್ಲದಿದ್ದಲ್ಲಿ ಅರ್ಜಿಗಳನ್ನು ಕೂಡಾ ಇಲ್ಲಿನ ಸಿಬ್ಬಂದಿ ತೆಗೆದುಕೊಳ್ಳುವುದಿಲ್ಲ. ಪಿಡಿಒ ಅವರೊಂದಿಗೆ ಭ್ರಷ್ಟಾಚಾರದಲ್ಲಿ ಒಂದಿಬ್ಬರು ಮಾಜಿ ಗ್ರಾ.ಪಂ. ಸದಸ್ಯರು, ಓರ್ವ ಉದ್ಯಮಿ, ಕೆಲ ಗ್ರಾ.ಪಂ. ಸಿಬ್ಬಂದಿಯೂ ಭಾಗಿಯಾಗಿದ್ದಾರೆ. ಈ ಬಗ್ಗೆಯೂ ಸಮಗ್ರ ತನಿಖೆ ನಡೆಸಿ ಎಂದು ಸಂತ್ರಸ್ತರು ಲೋಕಾಯುಕ್ತ ತಂಡಕ್ಕೆ ಮನವಿ ಮಾಡಿದರಲ್ಲದೆ, ಇಲ್ಲಿನ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಲೋಕಾಯುಕ್ತ ತಂಡ ಗ್ರಾ.ಪಂ.ಗೆ ದಾಳಿ ನಡೆಸಿದಾಗ ಇಲ್ಲಿನ ಪ್ರಭಾರ ಪಿಡಿಒ ವಿಲೈಡ್ ಲಾರೆನ್ಸ್ ರೊಡ್ರಿಗಸ್ ಮಾತ್ರ ಕಚೇರಿಯಲ್ಲಿ ಇರಲಿಲ್ಲ.
ಸಂಜೆ 4ಕ್ಕೆ ದೂರು ನೀಡಲು ಅವಕಾಶ: ಲೋಕಾಯುಕ್ತಎಲ್ಲರ ದೂರುಗಳನ್ನು ಸ್ವೀಕರಿಸಿದ ಲೋಕಾಯುಕ್ತ ಡಿವೈಎಸ್ಪಿ ಗಾನ ಕುಮಾರಿಯವರು, ನಿಮ್ಮ ಎಲ್ಲಾ ದೂರುಗಳ ತನಿಖೆಯನ್ನು ನಡೆಸುತ್ತೇನೆ. ಇನ್ಯಾರಾದರೂ ಸಾರ್ವಜನಿಕರಿಗೆ ದೂರು ನೀಡಲು ಬಾಕಿಯಿದ್ದರೆ, ಇಂದು ಸಂಜೆ 4 ಗಂಟೆಗೆ ಗ್ರಾ.ಪಂ. ಸಭಾಂಗಣಕ್ಕೆ ಬನ್ನಿ. ಎಲ್ಲರ ದೂರನ್ನು ಪಡೆದುಕೊಂಡು ತನಿಖೆ ನಡೆಸಲಾಗುವುದು. ಈಗ ಕಚೇರಿಯೊಳಗಿನ ಕಡತಗಳ ಪರಿಶೀಲನೆ ನಡೆಸುತ್ತೇವೆ ಎಂದರು.
















































