ವಾರಣಾಸಿ: ಮಹಿಳೆಯರ ಸುರಕ್ಷತೆಗೆ ಭಂಗ ತರುವವರು ಜೈಲು ಅಥವಾ ನರಕದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಪರಾಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕೆಲಸ ಮಾಡುವ ಮಹಿಳೆಯರ ಸನ್ಮಾನ ಸಮಾರಂಭಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ, ‘ಮನೆಯಿಂದ ಹೊರಬರಲು ಹೆದರಿಕೊಳ್ಳುತ್ತಿದ್ದ ಮಹಿಳೆಯರು ಮತ್ತು ಬಾಲಕಿಯರು ಇದೀಗ ಯಾವುದೇ ಭಯವಿಲ್ಲದೆ ಹೊರಗೆ ಬರುತ್ತಿದ್ದಾರೆ’ ಎಂದು ಹೇಳಿದ್ದಾರೆ.ನಾವು 2017ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಮಹಿಳಾ ಸುರಕ್ಷತೆಯು ಕಳವಳದ ವಿಷಯವಾಗಿತ್ತು. ಕಾಲೇಜು ಅಥವಾ ಕೆಲಸಕ್ಕೆ ತೆರಳಿದ ಹೆಣ್ಣುಮಕ್ಕಳ ಸುರಕ್ಷತೆಯ ಕುರಿತು ಅವರ ಕುಟುಂಬಗಳು ಚಿಂತಿಸುತ್ತಿದ್ದವು. ಇದರಿಂದ ಹಲವು ಹೆಣ್ಣುಮಕ್ಕಳ ಕನಸು ನನಸಾಗಿರಲಿಲ್ಲ ಎಂದು ಹೇಳಿದ್ದಾರೆ.ನಾವು ಅಧಿಕಾರಕ್ಕೆ ಬಂದ ನಂತರ ಮಹಿಳಾ ಸುರಕ್ಷತೆಗೆ ಒತ್ತು ನೀಡುವ ಮೂಲಕ, ಅವರ ಶಿಕ್ಷಣ ಮತ್ತು ಪ್ರಗತಿಗೆ ಕಾರಣವಾದೆವು. ಮಹಿಳಾ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮ ಮತ್ತು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ವಿರೋಧ ಪಕ್ಷಗಳು ಸುಳ್ಳು ಭರವಸೆ, ಜಾತಿಯ ಹೆಸರಲ್ಲಿ ಜನರನ್ನು ವಿಭಜಿಸುವುದು ಮತ್ತು ಸಮಾಜವನ್ನು ವಿಭಾಗಿಸುವ ಕೆಲಸದಲ್ಲಿ ತೊಡಗಿಕೊಂಡಿವೆ. ಆದರೆ, ಮಾಫಿಯಾಗಳ ಎದುರು ಕ್ರಮತೆಗೆದುಕೊಳ್ಳಲು ಧೈರ್ಯವಿಲ್ಲದೆ ಕೈಕಟ್ಟಿ ಕುಳಿತುಕೊಳ್ಳುತ್ತಾರೆ. ಮತ ಬ್ಯಾಂಕ್ ರಾಜಕೀಯದ ಕಾರಣಕ್ಕಾಗಿ ನಾವು ಮಾಫಿಯಾಗಳ ಮುಂದೆ ಅಂಗಲಾಚಿಲ್ಲ ಎಂದು ಯಾವುದೇ ಪಕ್ಷದ ಹೆಸರನ್ನು ಉಲ್ಲೇಖಿಸದೇ ಹೇಳಿದ್ದಾರೆ.ವಾರಣಾಸಿಯ ಅಭಿವೃದ್ಧಿಗಾಗಿ ಕಳೆದ 12 ವರ್ಷಗಳಲ್ಲಿ ₹1 ಲಕ್ಷ ಕೋಟಿ ಮೌಲ್ಯದ ವಿವಿಧ ಯೋಜನೆಗಳನ್ನು ಜಾರಿಮಾಡಲಾಗಿದೆ ಎಂದು ಹೇಳಿದ್ದಾರೆ.
















































