ತಮಿಳುನಾಡಿನ ಶಾಸಕರಿಗೆ ಸರ್ಕಾರಿ ಕಾರು, ವಿಮೆ ಮೊತ್ತ ಹೆಚ್ಚಳ ಸೇರಿ ಹಲವು ಕೊಡುಗೆ

Picture of Savistara

Savistara

Bureau Report

ಚೆನ್ನೈ (ಪಿಟಿಐ): ತಮಿಳುನಾಡಿನ ಎಲ್ಲ ಶಾಸಕರಿಗೆ ಸರ್ಕಾರಿವಾಹನ, ವಿಮೆ ಮೊತ್ತ ಹೆಚ್ಚಳ ಸೇರಿದಂತೆ ಹಲವಾರು ‘ಕೊಡುಗೆ’ಗಳನ್ನು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಬುಧವಾರ ಘೋಷಿಸಿದ್ದಾರೆ.

ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ವಿವಿಧ ವರ್ಗಗಳ ಜನರಿಗೂ ಹಲವು ಘೋಷಣೆಗಳನ್ನು ಮಾಡಿದರು.’ಶಾಸಕರಿಗೆ ನೀಡುವ ವಾಹನಗಳ ನಿರ್ವಹಣೆ, ಇಂಧನ ಭತ್ಯೆ ಹಾಗೂ ಚಾಲಕರ ವೇತನಕ್ಕಾಗಿ ತಿಂಗಳಿಗೆ ₹75 ಸಾವಿರ. ಸಹಾಯಕರೊಬ್ಬರನ್ನು ನೇಮಕ ಮಾಡಿಕೊಳ್ಳುವುದಕ್ಕಾಗಿ ತಿಂಗಳಿಗೆ ₹25 ಸಾವಿರ ನೀಡಲಾಗುವುದು. ಜತೆಗೆ, ಶಾಸಕರಿಗೆ ₹1 ಲಕ್ಷ ರೂಪಾಯಿ ಮಾಸಿಕ ಭತ್ಯೆ ನೀಡಲಾಗುವುದು’ ಎಂದು ಪ್ರಕಟಿಸಿದರು.ಶಾಸಕರಿಗೆ ಘೋಷಿಸಲಾದ ವಿವಿಧ ಸೌಲಭ್ಯಗಳ ಕುರಿತು ಪ್ರಸ್ತಾಪಿಸಿದ ಅವರು, ‘ಶಾಸಕರು ಆಡಳಿತಾತ್ಮಕ ವೆಚ್ಚ ಹಾಗೂ ಇತರ ಅಗತ್ಯಗಳಿಗೆ ಇತರರನ್ನು ಅವಲಂಬಿಸದೇ ಇರಲು ಈ ಸೌಲಭ್ಯಗಳು ನೆರವಾಗುತ್ತವೆ. ಇಂತಹ ವಿಷಯಗಳಿಗೆ ಸಂಬಂಧಿಸಿ ರಾಜಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಕ್ಕೆ ಶಾಸಕರಿಗೆ ಸಾಧ್ಯವಾಗಲಿದೆ’ ಎಂದು ಪ್ರತಿಪಾದಿಸಿದರು.

‘ಆರ್ಥಿಕವಾಗಿ ಶಕ್ತರಲ್ಲದ ನೂತನವಾಗಿ ಆಯ್ಕೆಯಾದ ಶಾಸಕರಿಗೆ ವಾಹನಗಳನ್ನು ಒದಗಿಸುವುದರಿಂದ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.ಇತರ ಘೋಷಣೆಗಳು: ‘ಆವಿನ್’ ಹಾಲು ಖರೀದಿ ದರ ಪ್ರತಿ ಲೀಟರ್‌ಗೆ ₹38 ಇದ್ದು, ಇದನ್ನು ₹41ಕ್ಕೆ ಹೆಚ್ಚಳ ಮಾಡಲಾಗುವುದು. ರಾಜ್ಯದ 3.16 ಲಕ್ಷ ಹಾಲು ಉತ್ಪಾದಕರಿಗೆ ಅನುಕೂಲವಾಗಲಿದೆ. ಇದರಿಂದ ಬೊಕ್ಕಸಕ್ಕೆ ವಾರ್ಷಿಕ ₹360 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಮುಖ್ಯಮಂತ್ರಿ ವಿಜಯ್ ಹೇಳಿದರು.’ಮುಖ್ಯಮಂತ್ರಿಯವರ ಸಮಗ್ರ ಆರೋಗ್ಯ ವಿಮಾ ಯೋಜನೆ’ಯಡಿ ಸದ್ಯ ವಾರ್ಷಿಕ ₹5 ಲಕ್ಷ ಮೊತ್ತದ ವಿಮಾ ಸೌಲಭ್ಯ ನೀಡಲಾಗುತ್ತಿದೆ. ಈ ಮೊತ್ತವನ್ನು ₹25 ಲಕ್ಷಕ್ಕೆ ಹೆಚ್ಚಳ ಮಾಡಲಾಗುವುದು. ಲಿಂಗತ್ವ ಅಲ್ಪಸಂಖ್ಯಾತರಿಗೆ ಏಳು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಹೇಳಿದರು.ಚೆನ್ನೈ ಉತ್ತರ ಭಾಗದ ಜನರಿಗಾಗಿ ಪೆರಂಬೂರಿನಲ್ಲಿ ₹300 ಕೋಟಿ ವೆಚ್ಚದಲ್ಲಿ 400 ಹಾಸಿಗೆಗಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ, ಮುಖ್ಯಮಂತ್ರಿಯವರ ಕ್ಯಾನ್ಸರ್ ಆರೈಕೆ ಕಾರ್ಯಕ್ರಮಕ್ಕೆ ಹೆಚ್ಚುವರಿಯಾಗಿ ₹677.44 ಕೋಟಿ ನೀಡುವುದು ಸೇರಿ ಹಲವು ಘೋಷಣೆಗಳನ್ನು ಮಾಡಿದರು.

ಸಂತಸ… ಹಾಡು ಹೇಳಿದ ಶಾಸಕಿ

ಶಾಸಕರಿಗೆ ವಾಹನ ಹಾಗೂ ಇತರ ಸೌಲಭ್ಯ ಒದಗಿಸುವ ಕುರಿತು ಘೋಷಣೆ ಮಾಡಿದ ಬೆನ್ನಲ್ಲೇ ಸಂತಸ ವ್ಯಕ್ತಪಡಿಸಿದ ಟಿವಿಕೆ ಶಾಸಕಿ ಕೆ.ಸಿಂಧೂ ಅವರು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ಹೊಗಳಿದರು. ತಮಿಳು ಚಿತ್ರದ ಗೀತೆಯೊಂದನ್ನು ಹಾಡಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. 1964ರಲ್ಲಿ ತೆರೆ ಕಂಡಿದ್ದ ತಮಿಳು ಚಿತ್ರರಂಗದ ಮೇರು ನಟ ಎಂ.ಜಿ.ರಾಮಚಂದ್ರನ್ ಅವರ ‘ಪದಗೊಟ್ಟಿ’ ಚಿತ್ರದ ಗೀತೆಯನ್ನು ಶಾಸಕಿ ಹಾಡಿದರು. ಈ ವೇಳೆ ಅವರತ್ತ ನೋಡಿದ ಮುಖ್ಯಮಂತ್ರಿ ವಿಜಯ್ ಮುಗುಳ್ಳಗೆ ಬೀರಿದರು. ಸಮಾನತೆ ಸಂದೇಶ ಸಾರುವ ಈ ಗೀತೆಯನ್ನು ವಾಲಿ ಅವರು ರಚಿಸಿದ್ದು ಟಿ.ಎಂ.ಸೌಂದರರಾಜನ್ ಹಾಡಿದ್ದಾರೆ.

[t4b-ticker]
error: Content is protected !!