ಚಿಕ್ಕಬಳ್ಳಾಪುರ: ಆಗ್ನಿಯ ಪದವೀಧರ ಕ್ಷೇತ್ರದ ಚುನಾವಣಾಕಾವು ಜಿಲ್ಲೆಯಲ್ಲಿ ಹೆಚ್ಚಿದೆ. ಪದವೀಧರ ಕ್ಷೇತ್ರದ ಮತದಾರರ ಮನಗೆಲ್ಲಲು ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್‌ನ ಎನ್‌ಡಿಎ ಮೈತ್ರಿ ಅಭ್ಯರ್ಥಿ ಮತ್ತು ಮುಖಂಡರು ಕ್ಷೇತ್ರದಲ್ಲಿ ಬಿರುಸಿನ ಓಡಾಟ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಈಚೆಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯೆ ಎನ್‌ಡಿಎ ಮುಖಂಡರು ಸಮನ್ವಯ ಸಭೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಮಾತ್ರ ಹೀಗೆ ಜಿಲ್ಲಾ ಮಟ್ಟದಲ್ಲಿ ಸಭೆಗಳು ನಡೆದಿಲ್ಲ. ಒಗ್ಗಟ್ಟು ಪ್ರದರ್ಶನವಾಗಿಲ್ಲ. ಸ್ಥಳೀಯ ಮಟ್ಟದಲ್ಲಿ ಪ್ರಚಾರ, ಭೇಟಿಗಳು ನಡೆಯುತ್ತಿವೆ.ತುಮಕೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ದಾವಣಗೆರೆ (ಹರಿಹರ, ಜಗಳೂರು, ದಾವಣಗೆರೆ ತಾಲ್ಲೂಕುಗಳು ಮಾತ್ರ) ಆಗ್ನೆಯ ಪದವೀಧರರ ಕ್ಷೇತ್ರ ವ್ಯಾಪ್ತಿಯಲ್ಲಿವೆ. ಈ ಕ್ಷೇತ್ರ ವ್ಯಾಪ್ತಿಗೆ 34 ವಿಧಾನಸಭಾ ಕ್ಷೇತ್ರಗಳು ಒಳಪಡಲಿವೆ. ಅ.23ರಂದು ಮತದಾನ ನಡೆಯಲಿದೆ. ಅ.27ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.ದಾವಣಗೆರೆಯ ಸೋಮೇಶ್ವರ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕೆ.ಎಂ.ಸುರೇಶ್ ಬಿಜೆಪಿ ಅಭ್ಯರ್ಥಿಯಾಗಿ ಎನ್‌ಡಿಎಯಿಂದ ಕಣಕ್ಕೆ ಇಳಿದಿದ್ದಾರೆ. ತುಮಕೂರಿನ ಯುವ ಮುಖಂಡ ಶಶಿಹುಲಿಕುಂಟೆ ಮರ್ ಕಾಂಗ್ರೆಸ್ ಅಭ್ಯರ್ಥಿ.ಇಡೀ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಕಡಿಮೆ ಮತದಾರರನ್ನು ಹೊಂದಿರುವ ಜಿಲ್ಲೆ ಚಿಕ್ಕಬಳ್ಳಾಪುರ. ತುಮಕೂರು ಜಿಲ್ಲೆ ಅತಿ ಹೆಚ್ಚು ಮತದಾರರನ್ನು ಹೊಂದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಲಿಂಗಾಯತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ.ಆಗ್ನೆಯ ಪದವೀಧರ ಕ್ಷೇತ್ರಕ್ಕೆ 2020ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಚಿದಾನಂದ್ ಗೆಲುವು ಸಾಧಿಸಿದ್ದರು. ಈಗ ಬಿಜೆಪಿ ವಶದಲ್ಲಿರುವ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸಾಹಸ ನಡೆಸಿದೆ.
ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಕಾಂಗ್ರೆಸ್ ಇಲ್ಲಿ ‘ಪ್ರಭಾವಿ’ ಎನಿಸಿಲ್ಲ. ಆ ಪಕ್ಷ ಗೆದ್ದು ಎರಡು ದಶಕಗಳೇ ಆಗಿವೆ. ಬಿಜೆಪಿ ಮತ್ತು ಜೆಡಿಎಸ್ ಪರಂಪರಾಗತ ಎದುರಾಳಿಗಳು. ಜೆಡಿಎಸ್ ಮತ್ತು ಬಿಜೆಪಿ ಇಲ್ಲಿ ಪ್ರತಿ ಚುನಾವಣೆಗಳಲ್ಲಿ ಎದುರಾಳಿಗಳಾಗಿದ್ದವು. ಆದರೆ ಈಗ ಪರಸ್ಪರ ಒಗ್ಗಟ್ಟು ಜಪಿಸುತ್ತ ಒಗ್ಗೂಡಿವೆ. ಆದ ಕಾರಣ ಕಾಂಗ್ರೆಸ್ ಎದುರಾಳಿಯಾಗಿದೆ.2002ರಲ್ಲಿ ಜೆಡಿಎಸ್‌ನ ಎಚ್.ಎಸ್.ಶಿವಶಂಕರ್, 2008ರಲ್ಲಿ ಬಿಜೆಪಿಯ ಡಾ.ಎ.ಎಚ್.ಶಿವಯೋಗಿ ಸ್ವಾಮಿ, 2014ರಲ್ಲಿ ಜೆಡಿಎಸ್‌ನ ಚೌಡರೆಡ್ಡಿ ತೂಪಲ್ಲಿ, 2020ರಲ್ಲಿ ಬಿಜೆಪಿಯ ಚಿದಾನಂದ ಗೌಡ ಗೆಲುವು ಸಾಧಿಸಿದ್ದಾರೆ. ವೈಯಕ್ತಿಕ ಸಂಪರ್ಕ, ಪಕ್ಷಗಳ ಬಲಾಬಲ, ಓಡಾಟ…ಹೀಗೆ ನಾನಾ ಲೆಕ್ಕಾಚಾರಗಳನ್ನು ಕ್ಷೇತ್ರದ ಅಗ್ನಿಕುಂಡದಲ್ಲಿ ಅಭ್ಯರ್ಥಿಗಳು ಹದ ವಾಗಿ ಬೇಯಿಸುತ್ತಿದ್ದಾರೆ.ಬಿಜೆಪಿ ಭದ್ರಕೋಟೆ: ಆಗ್ನೆಯ ಪದವೀಧರ ಕ್ಷೇತ್ರವು ಬಿಜೆಪಿಯಭದ್ರಕೋಟೆ. 1972ರಿಂದ ಈ ಕ್ಷೇತ್ರದಲ್ಲಿ 8 ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿಯ ಚಿದಾನಂದ ಎಂ.ಗೌಡ ಅವಧಿ ನವೆಂಬರ್‌ಗೆ ಕೊನೆಗೊಳ್ಳಲಿದೆ. ತನ್ನ ಪ್ರಾಬಲ್ಯದ ಕ್ಷೇತ್ರವನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಮುಖಂಡರು ಜಿಲ್ಲೆಯಲ್ಲಿ ಭರಾಟೆಯಿಂದ ಪ್ರಚಾರ ನಡೆಸಿದ್ದಾರೆ.2020ರ ಆಗ್ನೆಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಡಿ.ಟಿ ಶ್ರೀನಿವಾಸ್ (ಆಗ್ನೆಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ) ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಬಿಜೆಪಿ ಬಂಡಾಯ ಅಭ್ಯರ್ಥಿ ಎನ್ನುವ ಹಣೆಪಟ್ಟಿ ಹೊಂದಿದ್ದ ಶ್ರೀನಿವಾಸ್, ಬಿಜೆಪಿ ಅಭ್ಯರ್ಥಿ ಚಿದಾನಂದ ಗೌಡ ಅವರಿಗೆ ತೀವ್ರ ಪೈಪೋಟಿ ನೀಡಿದ್ದರು. ಸಮೀಪದ ಪ್ರತಿಸ್ಪರ್ಧಿಯಾಗಿ ಸೋಲು ಅನುಭವಿಸಿದರು.
ನಂತರ ಡಿ.ಟಿ ಶ್ರೀನಿವಾಸ್ ಕಾಂಗ್ರೆಸ್ ಸೇರಿ ಆಗ್ನಿಯ ಶಿಕ್ಷಕರ ಕ್ಷೇತ್ರದಿಂದ ಕಣಕ್ಕೆ ಇಳಿದು ಗೆಲುವು ಸಾಧಿಸಿದರು. ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಳೆದ ಬಾರಿ ‘ಹಿಂದುಳಿದ ವರ್ಗ’ ಅಸ್ತ್ರವನ್ನು ಕಾಂಗ್ರೆಸ್ ಬಳಸಿತ್ತು. ಪದವೀಧರರ ಕ್ಷೇತ್ರದಲ್ಲಿ ಶಿಕ್ಷಕರೇ ಅತಿಹೆಚ್ಚು ಸಂಖ್ಯೆಯಲ್ಲಿ ಮತದಾರರು ಇದ್ದಾರೆ. ಅಲ್ಲದೆ ಶ್ರೀನಿವಾಸ್ ಅವರು ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಿ ಉತ್ತಮ ಮತಗಳನ್ನು ಸಹ ಗಳಿಸಿದ್ದರು. ಆದ್ದರಿಂದ ಶ್ರೀನಿವಾಸ್‌ಗೆ ಪಕ್ಷದ ಅಭ್ಯರ್ಥಿ ಶಶಿಹುಲಿಕುಂಟೆ ಮಠ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ನೀಡಿದೆ.ಹೀಗೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ‘ಎನ್‌ಡಿಎ’ ಅಭ್ಯರ್ಥಿ ಮತ್ತು ಕಾಂಗ್ರೆಸ್ ನಡುವೆ ನೇರ ಸೆಣಸಾಟವಿದೆ.12 ವರ್ಷದಿಂದ ಒಕ್ಕಲಿಗ ಶಾಸಕರುಆಗ್ನೆಯ ಪದವೀಧರ ಕ್ಷೇತ್ರದಲ್ಲಿ ಈವರೆಗೂ ಐದು ಬಾರಿ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಚಿದಾನಂದ ಎಂ.ಗೌಡ ಕೂಡ ಒಕ್ಕಲಿಗರು. ಜೆಡಿಎಸ್‌ನಿಂದ ತೂಪಲ್ಲಿ ಚೌಡರೆಡ್ಡಿ ಕೂಡ ಗೆದ್ದಿದ್ದರು.











































