ಬೆಂಗಳೂರು: ಎತ್ತಿನಹೊಳೆ ಯೋಜನೆಯನ್ನು 2027ರ ಅಂತ್ಯಕ್ಕೆಆದ್ಯತೆ ಮೇಲೆ ಪೂರ್ಣಗೊಳಿಸಿ, ಉದ್ದೇಶಿತ ಏಳು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತದೆ ಎಂದು ವಿಧಾನ ಪರಿಷತ್‌ನ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ ಭರವಸೆ ನೀಡಿದರು.
ಕಾಂಗ್ರೆಸ್‌ನ ಐವನ್ ಡಿಸೋಜ ಅವರ ಗಮನಸೆಳೆಯುವ ಸೂಚನೆಗೆ ಜಲಸಂಪನ್ಮೂಲ ಸಚಿವರ ಪರವಾಗಿ ಅವರು ಉತ್ತರ ನೀಡಿದರು.’ಎತ್ತಿನಹೊಳೆಯ ಪರಿಷ್ಕೃತ ಯೋಜನಾ ವರದಿಯಂತೆ ಕೊರಟಗೆರೆ ತಾಲ್ಲೂಕು ಬೈರಗೊಂಡ್ಲು ಗ್ರಾಮ ಸಮೀಪದ ಸ್ಥಳದ ಬದಲಾಗಿ ದೊಡ್ಡಬಳ್ಳಾಪುರದ ಲಕ್ಕೇನಹಳ್ಳಿ ಗ್ರಾಮದ ಸಮೀಪ ಸಮತೋಲನ ಜಲಾಶಯ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗುವ ಸಂಭವವಿರುವುದರಿಂದ ಕೊರಟಗೆರೆ ತಾಲ್ಲೂಕಿನ ವಡೇರಹಳ್ಳಿಯಲ್ಲಿ 1.20 ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯದ ಮತ್ತೊಂದು ಸಮತೋಲನ ಜಲಾಶಯವನ್ನು ನಿರ್ಮಿಸಲು ವಿಸ್ಕೃತ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆ ನೀಡಲಾಗಿದೆ’ ಎಂದುಮಾಹಿತಿ ನೀಡಿದರು.’ಸಮತೋಲನ ಜಲಾಶಯದ ನಂತರ ಕೋಲಾರ ಲಿಫ್ಟ್ ಪ್ಯಾಕೇಜ್-1 ಮತ್ತು ಗುರುತ್ವ ಪೈಪ್‌ಲೈನ್ ಪ್ಯಾಕೇಜ್-2 ಕಾಮಗಾರಿಗಳು ವಿವಿಧ ಹಂತದಲ್ಲಿವೆ. ಕೋಲಾರ ಗುರುತ್ವ ಪೈಪ್ ಲೈನ್ ಪ್ಯಾಕೇಜ್-3 ಮತ್ತು 4, ಕೋಲಾರ ಮತ್ತು ಶ್ರೀನಿವಾಸಪುರ ಫೀಡರ್ ಪೈಪ್ ಲೈನ್ ನಿರ್ಮಾಣದ 5 ಪ್ಯಾಕೇಜ್ ಕಾಮಗಾರಿಗಳ ಪಂಕೀಕರಣ ವಿನ್ಯಾಸ ನಕ್ಷೆಗಳಿಗೆ ಅನುಮೋದನೆ ನೀಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದ್ದು, ರೈತರೊಂದಿಗೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡು ಶೀಘ್ರವಾಗಿ ಕಾಮಗಾರಿಗಳನ್ನು ಆರಂಭಿಸಲಾಗುವುದು’ ಎಂದರು.
‘2013-14ರಲ್ಲಿ ಆರಂಭವಾದ ಎತ್ತಿನಹೊಳೆ ಯೋಜನೆ ಅನುಷ್ಠಾನದಲ್ಲಿ ಅರಣ್ಯ ತೀರುವಳಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಕರಣಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ, ರೈಲ್ವೆ ಇಲಾಖೆಯ ಅನುಮತಿ, ಭೂಸ್ವಾಧೀನ ಪ್ರಕ್ರಿಯೆಗಳಲ್ಲಿನ ವಿಳಂಬದಿಂದ ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾಗುತ್ತಿದೆ’ ಎಂದು ಹೇಳಿದರು.*14 ವರ್ಷದ ಹಿಂದೆ ₹8 ಸಾವಿರ ಕೋಟಿ ವೆಚ್ಚದಲ್ಲಿ ಆರಂಭವಾದ ಎತ್ತಿನಹೊಳೆ ಯೋಜನೆ, ಈಗ ₹30 ಸಾವಿರ ಕೋಟಿಗೆ ಬಂದು ನಿಂತಿದೆ. ಅಧಿಕಾರಿಗಳು ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಹಣ ಲೂಟಿಯಾಗುತ್ತಿದೆ. ಇತ್ತೀಚೆಗೆ ಪೈಪ್ ಸ್ಪೋಟಗೊಂಡಿತ್ತು. ಇದು ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿ. ಈ ಯೋಜನೆ ಉದ್ದೇಶವೇ ಈಡೇರಿಲ್ಲ. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದು ಐವನ್ ಡಿಸೋಜ ಆಗ್ರಹಿಸಿದರು.’ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಯತೀಂದ್ರ ಭರವಸೆ ನೀಡಿದರು.













































