ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ತೀಕ್ಷ್ಣ ವಾಗ್ವಾದವೊಂದು ಆಣೆ-ಪ್ರಮಾಣದ ಹಂತ ತಲುಪಿ, ಕೊನೆಗೆ ಸುಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ವಿಶೇಷ ಪ್ರಾರ್ಥನೆಯೊಂದಿಗೆ ಶಮನಗೊಂಡಿದೆ.’ಅರುಣ್ ಕುಮಾರ್ ಪುತ್ತಿಲ ಫ್ಯಾನ್ಸ್ ಕ್ಲಬ್’ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾಗಿದ್ದ ಪೋಸ್ಟ್‌ಗೆ ಸಂಬಂಧಿಸಿದಂತೆ ಡಬ್ಬಿ, ರಶೀದಿ ಹಾಗೂ ಹಣಕಾಸಿನ ವ್ಯವಹಾರದ ಕುರಿತು ಪ್ರವೀಣ್ ಆಚಾರ್ಯ ಎಂಬ ಖಾತೆಯಿಂದ ಹಲವು ಆರೋಪಗಳನ್ನು ಮಾಡಲಾಗಿತ್ತು. ಈ ವಿಷಯವಾಗಿ ಪುತ್ತಿಲ ಪರಿವಾರದ ಮನೀಷ್ ಕುಲಾಲ್ ಹಾಗೂ ಶ್ರೀರಾಮ ಸೇನೆಯ ಮಾಜಿ ಸಂಚಾಲಕ ಉದಯ ಪಾಟಾಳಿ ಬೆಳ್ಳಾರೆ ನಡುವೆ ಕಾಮೆಂಟ್ ಸೆಕ್ಷನ್‌ನಲ್ಲಿ ಮಾತಿನ ಚಕಮಕಿ ನಡೆದಿತ್ತು. ವಾಗ್ವಾದ ತೀವ್ರಗೊಂಡು ಇಬ್ಬರೂ ದೇವಸ್ಥಾನದಲ್ಲಿ ಆಣೆ-ಪ್ರಮಾಣ ಮಾಡಲು ನಿರ್ಧರಿಸಿದ್ದರು.ನಿಗದಿತ ಸಮಯದಂತೆ ಎರಡೂ ತಂಡದವರು ದೇವಸ್ಥಾನಕ್ಕೆ ಆಗಮಿಸಿದ್ದರು. ಆದರೆ ಅರ್ಚಕ ವಿ.ಎಸ್. ಭಟ್ ಅವರು “ವಿವಾದವನ್ನು ಇನ್ನಷ್ಟು ಬೆಳೆಸುವುದು ಬೇಡ, ಯಾರು ತಪ್ಪು ಮಾಡಿದ್ದಾರೆ ಅವರಿಗೆ ಸೂಕ್ತ ಫಲ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ” ಎಂದು ಸಲಹೆ ನೀಡಿದರು. ಇದಕ್ಕೆ ಎರಡೂ ಕಡೆಯವರು ಸಮ್ಮತಿಸಿದ ನಂತರ ಅರ್ಚಕರ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅರುಣ್ ಕುಮಾರ್ ಪುತ್ತಿಲ, ಉದಯ್ ಪಾಟಾಳಿ, ಮನೀಶ್ ಕುಲಾಲ್, ಅನಿಲ್ ತೆಂಕಿಲ ಹಾಗೂ ದೀಕ್ಷಿತ್ ರೈ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಪ್ರಾರ್ಥನೆಯ ನಂತರ ದೇವಸ್ಥಾನದ ಆವರಣದ ಹೊರಗೆ ಎರಡೂ ಗುಂಪುಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಮನೀಷ್ ಕುಲಾಲ್, “ಇದು ನಮ್ಮ ವೈಯಕ್ತಿಕ ವಿಚಾರ. ಫೇಸ್‌ಬುಕ್‌ನಲ್ಲಿ ಆದ ಗೊಂದಲವನ್ನು ಮಾತನಾಡಿ ಬಗೆಹರಿಸಿಕೊಂಡಿದ್ದೇವೆ” ಎಂದು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾ ವಾಗ್ವಾದ ಆಣೆ-ಪ್ರಮಾಣದ ಹಂತಕ್ಕೆ: ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಮುಕ್ತಾಯ ಕಂಡ ವಿವಾದ!
Savistara
Bureau Report
[t4b-ticker]















































