ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಬ್ದುಲ್ ರಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ.
ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಅಡಿ ಬಂಧಿತರಾಗಿದ್ದ ಭರತ್ ಕುಮ್ಡೇಲು ಸೇರಿದಂತೆ 8 ಮಂದಿ ಆರೋಪಿಗಳಿಗೆ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಕೋಕಾ) ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ಆರೋಪಿಗಳಾಗಿರುವ ಭರತ್, ಪ್ರದೀಪ್, ರಂಜಿತ್, ಶಿವಪ್ರಸಾದ್, ಅಭಿನ್ ರೈ, ಸಾಹಿತ್, ಸಚಿನ್ ಹಾಗೂ ತೇಜಾಕ್ಷ (ಆರೋಪಿ ಸ್ಥಾನ ಎ-6 ಮತ್ತು ಎ-7 ರಿಂದ ಎ-13) ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಕಲಂ 483ರ ಅಡಿಯಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ನ್ಯಾಯಾಂಗ ಬಂಧನ ವಿಸ್ತರಣೆ: ನ್ಯಾಯಾಂಗ ಬಂಧನದಲ್ಲಿದ್ದ ಎ-1 ರಿಂದ ಎ-13 ರವರೆಗಿನ ಆರೋಪಿಗಳನ್ನು ಮಂಗಳವಾರ ತಾಂತ್ರಿಕ ಸಮಸ್ಯೆಯ ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಸಾಧ್ಯವಾಗಲಿಲ್ಲ. ಜಾಮೀನಿನ ಮೇಲಿದ್ದ ಆರೋಪಿ ಎ-14 ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ರಿಮಾಂಡ್ ಅವಧಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸಿದೆ.
ಇದೇ ಪ್ರಕರಣದಲ್ಲಿ ಈ ಹಿಂದೆ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದ ಎ-15 ರಿಂದ ಎ-23 ರವರೆಗಿನ ಆರೋಪಿಗಳ ಪರವಾಗಿ ವಕೀಲರು ವಕಾಲತ್ತು ಮತ್ತು ಹೈಕೋರ್ಟ್ ಆದೇಶ ಪ್ರತಿಗಳನ್ನು ಸಲ್ಲಿಸಿದ್ದು, ಅವರಿಗೆ ಅಕ್ಟೋಬರ್ 15ರೊಳಗೆ ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಮರು ಜಾರಿ ಮಾಡಲು ನ್ಯಾಯಾಲಯ ಸೂಚಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿದೆ.
ಶರಣ್ ಪಂಪ್‌ವೆಲ್ ಅಭಿನಂದನೆ:
ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ಹಿರಿಯ ವಕೀಲರಾದ ಮಹೇಶ್ ಕಜೆ ಹಾಗೂ ರಾಘವೇಂದ್ರ ಮೈಸೂರು ವಾದ ಮಂಡಿಸಿದ್ದರು.ಈ ಬೆಳವಣಿಗೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್, “ಬಂಟ್ವಾಳದ ಅಬ್ದುಲ್ ರಹಮಾನ್ ಕೊಲೆ ಪ್ರಕರಣದಲ್ಲಿ ಭರತ್ ಕುಮ್ಡೇಲು ಸೇರಿದಂತೆ ಇತರರನ್ನು ಸುಳ್ಳು ಕೇಸಿಗೆ ಸಿಲುಕಿಸಿ, ಕೋಕಾ ಕಾಯ್ದೆಯಡಿ ಜೈಲಿಗೆ ಅಟ್ಟಲಾಗಿತ್ತು. ಇಂದು ಮೈಸೂರಿನ ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ದೊರೆತಿದೆ. ನಿರಪರಾಧಿಗಳ ಪರವಾಗಿ ದೃಢವಾಗಿ ನಿಂತು ಸತ್ಯವನ್ನು ಎತ್ತಿಹಿಡಿದು ಜಾಮೀನು ಕೊಡಿಸುವಲ್ಲಿ ಯಶಸ್ವಿಯಾದ ವಕೀಲ ಮಹೇಶ್ ಕಜೆ ಹಾಗೂ ರಾಘವೇಂದ್ರ ಅವರಿಗೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.

















































