ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಜನಸೇವೆಯ ಕೃತಜ್ಞತೆಯ ಸಂಕೇತವಾಗಿ ಬಿಜೆಪಿ ವತಿಯಿಂದ ‘ಸೇವಾ ಸಂಕಲ್ಪ ಅಭಿಯಾನ’ವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಭಾಗವಾಗಿ ಸೆಪ್ಟೆಂಬರ್ 17 ರಂದು ರಾಷ್ಟ್ರವ್ಯಾಪಿ ‘ಆಶೀರ್ವಾದದ ದೀಪ’ ಬೆಳಗುವ ವಿಶೇಷ ಕಾರ್ಯಕ್ರಮಕ್ಕೆ ಪಕ್ಷದ ಮುಖಂಡರು ಕರೆ ನೀಡಿದ್ದಾರೆ.
ಈ ಕಾರ್ಯಕ್ರಮದ ಅಂಗವಾಗಿ ಸಂಜೆ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಆಶೀರ್ವಾದದ ದೀಪ ಬೆಳಗಿಸುವ ಮೂಲಕ ವಿಶ್ವನಾಯಕನಿಗೆ ಶುಭ ಕೋರಬೇಕು ಎಂದು ಬಿಜೆಪಿ ರಾಷ್ಟ್ರೀಯ ನಾಯಕರು ಮನವಿ ಮಾಡಿದ್ದಾರೆ. ಮೋದಿ ಅವರ ಸುದೀರ್ಘ ಆಡಳಿತಾವಧಿಯಲ್ಲಿ ಭಾರತವು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಅಭಿವೃದ್ಧಿಯನ್ನು ಸ್ಮರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ವಿವಿಧ ಕ್ಷೇತ್ರಗಳ ಸಾಧನೆಗಳ ಸ್ಮರಣೆ:ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವಾ ಪಯಣದಲ್ಲಿ ದೇಶ ಕಂಡ ರೈತ ಕಲ್ಯಾಣ, ಶಿಕ್ಷಣ, ಆರೋಗ್ಯ, ಡಿಜಿಟಲ್ ಇಂಡಿಯಾ, ರೈಲ್ವೆ ಮತ್ತು ಬಾಹ್ಯಾಕಾಶ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಕ್ರಾಂತಿಕಾರಿ ಬದಲಾವಣೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತಿದೆ. ಈ ಐತಿಹಾಸಿಕ ಪಯಣಕ್ಕೆ ಗೌರವ ಸೂಚಿಸಲು ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿ ಬೆಂಬಲ ಸೂಚಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿ ವಿನಂತಿಸಿದ್ದಾರೆ.

















































