ಮಳೆ ಮಾಪನ ವ್ಯವಸ್ಥೆ ಬಲಪಡಿಸಲು ಕೃಷಿಕ ಹಿತರಕ್ಷಣಾ ಸಮಿತಿ ಮನವಿ |ಕೃಷಿಕರ ಹಿತದೃಷ್ಟಿಯಿಂದ ಕೇಂದ್ರ–ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಮಿತಿ ಸಂಚಾಲಕ ಶ್ರೀ ಕೃಷ್ಣ ಪ್ರಸಾದ್ ಮಡ್ತಿಲ

Picture of Savistara

Savistara

Bureau Report

ಸುಳ್ಯ–ಪುತ್ತೂರು–ಕಡಬ ತಾಲೂಕುಗಳು ವಿಶಾಲ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದ್ದು, ಬೆಟ್ಟ, ಕಣಿವೆ, ಅರಣ್ಯ ಹಾಗೂ ಕೃಷಿ ಪ್ರದೇಶಗಳನ್ನು ಒಳಗೊಂಡಿವೆ.

ಸುಳ್ಯ ತಾಲೂಕಿನ ಐವರ್ನಾಡು, ಬೆಳ್ಳಾರೆ, ಕಲ್ಮಕಾರು, ಅಜ್ಜಾವರ, ಮಂಡೆಕೋಲು, ಪುತ್ತೂರು–ಕಡಬ ತಾಲೂಕುಗಳ ಕೊಳ್ತಿಗೆ, ಗುತ್ತಿಗಾರು, ದೊಡ್ಡತೊಟ, ಬಾಳುಗೊಡು, ಕಲ್ಮಕಾರು, ಒಟ್ಟಿನಲ್ಲಿ ಸುಳ್ಯ–ಪುತ್ತೂರು–ಕಡಬ ತಾಲೂಕುಗಳ ಹೆಚ್ಚಿನ ಕಡೆಗಳಲ್ಲಿ ಹಾಗೂ ಸುಬ್ರಹ್ಮಣ್ಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸೇರಿದಂತೆ ವಿವಿದೆಡೆ ಭೌಗೋಳಿಕವಾಗಿ ವೈವಿಧ್ಯಮಯವಾಗಿವೆ. ಒಂದೇ ಮಳೆ ಮಾಪನ ಕೇಂದ್ರದ ಮಾಹಿತಿಯು ಈ ವಿಶಾಲ ಪ್ರದೇಶದ ನೈಜ ಮಳೆಯ ಪ್ರಮಾಣವನ್ನು ಸಮರ್ಪಕವಾಗಿ ಪ್ರತಿಬಿಂಬಿಸದಿರುವ ಸಾಧ್ಯತೆ ಇದೆ. ಮಳೆಯ ಪ್ರಮಾಣದಲ್ಲಿನ ವ್ಯತ್ಯಾಸವು ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತದೆ.

ವಿವಿಧ ಪ್ರದೇಶಗಳಲ್ಲಿ ಸ್ಥಳೀಯ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇರುವುದರಿಂದ, ಸೀಮಿತ ಮಳೆ ಮಾಪನ ಕೇಂದ್ರಗಳ ಅಂಕಿ-ಅಂಶಗಳು ಪ್ರತಿಯೊಂದು ಪ್ರದೇಶದ ವಾಸ್ತವಿಕ ಮಳೆ ಪರಿಸ್ಥಿತಿಯನ್ನು ಸಮರ್ಪಕವಾಗಿ ಪ್ರತಿಬಿಂಬಿಸುತ್ತವೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಸಮಿತಿ ತಿಳಿಸಿದೆ. ಮಳೆ ಮಾಪನದ ನಿಖರವಾದ ಸ್ಥಳೀಯ ದತ್ತಾಂಶವು ಬೆಳೆ ವಿಮೆ, ಬೆಳೆಹಾನಿ ಮೌಲ್ಯಮಾಪನ, ಅತಿವೃಷ್ಟಿ–ಅನಾವೃಷ್ಟಿ ನಿರ್ಧಾರ, ಕೃಷಿ ಯೋಜನೆ ಹಾಗೂ ಪರಿಹಾರ ಕ್ರಮಗಳಿಗೆ ಮಹತ್ವದ್ದಾಗಿದೆ.

ರೈತರು ಬೆಳೆ ವಿಮೆಗೆ ತಮ್ಮ ಪಾಲಿನ ಪ್ರೀಮಿಯಂ ಪಾವತಿಸುವುದರ ಜೊತೆಗೆ ಸರ್ಕಾರವೂ ಪ್ರೀಮಿಯಂಗೆ ತನ್ನ ಪಾಲಿನ ಸಹಾಯಧನವನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ, ಇಂತಹ ವ್ಯವಸ್ಥೆಯಲ್ಲಿ ಬಳಸಲಾಗುವ ಹವಾಮಾನ ದತ್ತಾಂಶವು ವಿಶ್ವಾಸಾರ್ಹವಾಗಿರಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಿರುವ ಮಳೆ ಮಾಪನ ಕೇಂದ್ರಗಳ ಸಮಗ್ರ ಪರಿಶೀಲನೆ ನಡೆಸಿ, ಅವುಗಳ ಕಾರ್ಯನಿರ್ವಹಣಾ ಸ್ಥಿತಿ ಪರಿಶೀಲಿಸುವುದು, ನಿಯಮಿತ ನಿರ್ವಹಣೆ ಮತ್ತು ಪುನರ್‌ಮಾಪನ ಕೈಗೊಳ್ಳುವುದು ಹಾಗೂ ಅಗತ್ಯವಿರುವಲ್ಲಿ ದುರಸ್ತಿ ಅಥವಾ ಬದಲಾವಣೆ ಮಾಡುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಅದೇ ರೀತಿ, ಭೌಗೋಳಿಕ ಹಾಗೂ ಕೃಷಿ ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ಸ್ಥಳಗಳಲ್ಲಿ ಸ್ವಯಂಚಾಲಿತ ಮಳೆ ಮಾಪನ ಕೇಂದ್ರಗಳು (ARG) ಹಾಗೂ ಸ್ವಯಂಚಾಲಿತ ಹವಾಮಾನ ಕೇಂದ್ರಗಳು (AWS) ಸ್ಥಾಪಿಸಿ, ಅವುಗಳನ್ನು ನಿರಂತರವಾಗಿ ನಿರ್ವಹಿಸುವ ಮೂಲಕ ಸ್ಥಳೀಯ ಮಟ್ಟದ ಮಳೆ ದತ್ತಾಂಶವನ್ನು ಬಲಪಡಿಸುವ ಅಗತ್ಯವನ್ನು ಸಮಿತಿ ಮುಂದಿಟ್ಟಿದೆ.

ಸ್ಥಳೀಯವಾಗಿ ಸಂಗ್ರಹವಾಗುವ ಮಳೆ ದತ್ತಾಂಶವನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಸಮರ್ಪಕವಾಗಿ ದಾಖಲಿಸಿ, ಅಗತ್ಯವಿರುವ ಸಂದರ್ಭದಲ್ಲಿ ಬೆಳೆ ವಿಮೆ, ಬೆಳೆಹಾನಿ ಮೌಲ್ಯಮಾಪನ ಹಾಗೂ ಪರಿಹಾರ ವ್ಯವಸ್ಥೆಗಳಲ್ಲಿ ಪರಿಣಾಮಕಾರಿಯಾಗಿ ಬಳಸುವಂತಾಗಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಹವಾಮಾನ ಬದಲಾವಣೆ ಹಾಗೂ ಮಳೆಯಲ್ಲಿನ ಅಸ್ಥಿರತೆ ಹೆಚ್ಚುತ್ತಿರುವ ಸಂದರ್ಭದಲ್ಲಿ, “ಯಾವ ಪ್ರದೇಶದಲ್ಲಿ ಎಷ್ಟು ಮಳೆ ಬಂತು?” ಎಂಬ ಪ್ರಶ್ನೆಗೆ ನಿಖರವಾದ ಉತ್ತರ ದೊರೆಯುವಂತಹ ವ್ಯವಸ್ಥೆ ರೂಪಿಸುವುದು ಕೃಷಿಕರ ಹಿತದೃಷ್ಟಿಯಿಂದ ಅಗತ್ಯ ಎಂದು ಕೃಷಿಕ ಹಿತರಕ್ಷಣಾ ಸಮಿತಿ ಅಭಿಪ್ರಾಯಪಟ್ಟಿದೆ. ಈ ಸಂಬಂಧ ಪ್ರಧಾನಿ ಕಾರ್ಯಾಲಯ, ಕರ್ನಾಟಕ ಮುಖ್ಯಮಂತ್ರಿ ಕಾರ್ಯಾಲಯ, ಕೇಂದ್ರ ಹಾಗೂ ರಾಜ್ಯ ಕೃಷಿ ಸಚಿವಾಲಯಗಳಿಗೂ ಸಮಿತಿಯ ವತಿಯಿಂದ ಮನವಿ ಸಲ್ಲಿಸಲಾಗಿದೆ ಎಂದು ಸಂಚಾಲಕ ಕೃಷ್ಣ ಪ್ರಸಾದ್ ಮಡ್ತಿಲ ತಿಳಿಸಿದ್ದಾರೆ.

[t4b-ticker]
error: Content is protected !!