ಸುಳ್ಯ: “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜದಲ್ಲಿ ಶಿಸ್ತು ಬೆಳೆಸುವುದರ ಜೊತೆಗೆ ಅನೇಕ ಬಡ ಕುಟುಂಬಗಳ ಬದುಕಿಗೆ ಆಸರೆಯಾಗಿ ನಿಂತಿದೆ. ಶಿಕ್ಷಣ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ಜೊತೆಗೆ ಗೌರವಯುತವಾಗಿ ಜನರ ಜೀವನ ಮಟ್ಟವನ್ನು ಎತ್ತರಿಸುವ ಸಮಾಜಮುಖಿ ಕೆಲಸವನ್ನು ಈ ಯೋಜನೆ ನಿರ್ವಹಿಸುತ್ತಿದೆ” ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲೆ-2ರ ವತಿಯಿಂದ ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಸುಳ್ಯದ ಕೇರ್ಪಳ ಬೂಡಿನ ಆಶಾ ಪ್ರಕಾಶ್ ಶೆಟ್ಟಿ ಬಂಟರ ಸಮುದಾಯ ಭವನದಲ್ಲಿ ನಡೆದ ‘ಗಾಂಧಿಸ್ಕೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿ ಕನಸನ್ನು ನನಸು ಮಾಡುತ್ತಿರುವ ಖಾವಂದರು:ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿ, “ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಗಾಂಧೀಜಿಯವರ ಸತ್ಯ ಹಾಗೂ ಅಹಿಂಸೆಯ ತತ್ವಗಳು ನಮಗೆ ದಾರಿದೀಪವಾಗಿವೆ. ಗ್ರಾಮೀಣ ಭಾಗದ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಯೋಜನೆ ವತಿಯಿಂದ 75 ಸಾವಿರ ಬೆಂಚ್-ಡೆಸ್ಕ್‌ಗಳನ್ನು ವಿತರಿಸಲಾಗುತ್ತಿದೆ.
ಮದ್ಯವರ್ಜನ ಶಿಬಿರಗಳ ಮೂಲಕ ಲಕ್ಷಾಂತರ ಜನರ ಬದುಕಿನಲ್ಲಿ ಬೆಳಕು ಚೆಲ್ಲಲಾಗಿದೆ” ಎಂದರು.ವೇದಿಕೆಯ ಜಿಲ್ಲಾಧ್ಯಕ್ಷ ಎನ್. ವಿಶ್ವನಾಥ ರೈ ಕಳಂಜ ಮಾತನಾಡಿ, “ಸರ್ಕಾರ ಮಾಡಬೇಕಾದ ಹಲವು ಅಭಿವೃದ್ಧಿ ಕಾರ್ಯಗಳನ್ನು ಪೂಜ್ಯ ಖಾವಂದರು ಗ್ರಾಮೀಣ ಮಟ್ಟದಲ್ಲಿ ಕೈಗೊಂಡು ಜನರ ಜೀವನ ಮಟ್ಟ ಸುಧಾರಿಸುತ್ತಿದ್ದಾರೆ” ಎಂದು ಶ್ಲಾಘಿಸಿದರು.
ವಿವಿಧ ಅನುದಾನ ವಿತರಣೆ, ಸನ್ಮಾನ:ಸಮಾವೇಶದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಅನುದಾನ ವಿತರಿಸಲಾಯಿತು. ಇದೇ ವೇಳೆ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್, ಸಿಇಒ ಅನಿಲ್ ಕುಮಾರ್ ಎಸ್.ಎಸ್. ಹಾಗೂ ರಾಜ್ಯ ಸಂಘಟನಾಧ್ಯಕ್ಷ ನಟರಾಜ ಬಾದಾಮಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಮುಖರಾದ ನಟರಾಜ ಬಾದಾಮಿ, ಎನ್.ಎ. ರಾಮಚಂದ್ರ, ಪದ್ಮನಾಭಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ, ಸುರೇಶ್ ಕಣೆಮರಡ್ಕ, ಸುಭಾಶ್ಚಂದ್ರ ರೈ ತೋಟ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಎ. ಬಾಬು ನಾಯ್ಕ ಸ್ವಾಗತಿಸಿದರೆ, ಮಾಧವ ಗೌಡ ಧನ್ಯವಾದ ಸಮರ್ಪಿಸಿದರು. ಪ್ರಕಾಶ್ ಹಾಗೂ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.












































