ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವ ಭಕ್ತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಪವಿತ್ರ ಇರುಮುಡಿ ಕಟ್ಟನ್ನು ವಿಮಾನದ ಕ್ಯಾಬಿನ್ ಬ್ಯಾಗೇಜ್‌ನಲ್ಲಿ (ಕೈ ಸಾಮಾನು) ಕೊಂಡೊಯ್ಯಲು ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿ ನೀಡಿದೆ.

ಸತತ ಮೂರನೇ ವರ್ಷವೂ ಈ ವಿಶೇಷ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಶಬರಿಮಲೆ ಯಾತ್ರೆಯಲ್ಲಿ ಇರುಮುಡಿ ಕೊಂಡೊಯ್ಯುವುದು ಶತಮಾನಗಳ ಹಳೆಯ ಸಂಪ್ರದಾಯವಾಗಿದ್ದು, ಇದು ಭಕ್ತರ ನಂಬಿಕೆ ಮತ್ತು ಭಕ್ತಿಭಾವದ ಸಂಕೇತವಾಗಿದೆ ಎಂದಿದ್ದಾರೆ.


ಭಕ್ತರು ಯಾವುದೇ ತೊಂದರೆಯಿಲ್ಲದೆ ಯಾತ್ರೆ ಕೈಗೊಳ್ಳಲು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಹಾಗೂ ಎಲ್ಲಾ ವಿಮಾನ ನಿಲ್ದಾಣಗಳ ನಿರ್ವಹಣಾ ಸಂಸ್ಥೆಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.



ಈ ಹಿಂದೆ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆ ವೇಳೆ ಇರುಮುಡಿ ಕಟ್ಟಿನಲ್ಲಿರುವ ತೆಂಗಿನಕಾಯಿಗಳನ್ನು ಕೊಂಡೊಯ್ಯುವುದಕ್ಕೆ ಭದ್ರತಾ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಕಾರಣ ಕೆಲವೊಮ್ಮೆ ವಾಗ್ವಾದಗಳು ನಡೆಯುತ್ತಿದ್ದವು.

ಈ ಸಮಸ್ಯೆಯನ್ನು ಬಗೆಹರಿಸಲು ಇದೀಗ ಇರುಮುಡಿ ಕಟ್ಟಿನ ತಪಾಸಣೆಗೆ ಪ್ರತ್ಯೇಕ ಟ್ರೇಗಳನ್ನು ಮೀಸಲಿಡುವ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಪಾದರಕ್ಷೆಗಳನ್ನು ತಪಾಸಣೆ ಮಾಡುವ ಟ್ರೇಗಳಲ್ಲಿ ಇರುಮುಡಿಯನ್ನು ಇಡದೆ, ಪ್ರತ್ಯೇಕವಾಗಿ ಪರಿಶೀಲಿಸುವಂತೆ ಕ್ರಮ ಕೈಗೊಳ್ಳಲಾಗಿದೆ.
ಇದರಿಂದ ಭಕ್ತರು ತಮ್ಮ ಇರುಮುಡಿಯನ್ನು ಚೆಕ್-ಇನ್ ಲಗೇಜ್‌ನಲ್ಲಿ ನೀಡುವ ಆತಂಕವಿಲ್ಲದೆ, ವಿಮಾನದ ಕ್ಯಾಬಿನ್‌ನಲ್ಲೇ ತಮ್ಮೊಂದಿಗೆ ಸುರಕ್ಷಿತವಾಗಿ ಕೊಂಡೊಯ್ಯಬಹುದಾಗಿದೆ.ನವೆಂಬರ್ 12ರಂದು ಸಚಿವಾಲಯವು ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಹಾಗೂ ಖಾಸಗಿ ವಿಮಾನ ನಿಲ್ದಾಣಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಲಾಗಿದೆ.
ನವೆಂಬರ್ 17ರಿಂದ ಆರಂಭವಾಗಿರುವ ಶಬರಿಮಲೆ ಮಂಡಲ ಕಾಲವು 2027ರ ಜನವರಿ 20ರವರೆಗೆ ನಡೆಯಲಿದ್ದು, ವಿಮಾನದ ಮೂಲಕ ಯಾತ್ರೆ ಕೈಗೊಳ್ಳುವ ಲಕ್ಷಾಂತರ ಅಯ್ಯಪ್ಪ ಭಕ್ತರಿಗೆ ಈ ನಿರ್ಧಾರದಿಂದ ಹೆಚ್ಚಿನ ಅನುಕೂಲವಾಗಲಿದೆ.















































