ಪುತ್ತೂರು, ನ.22: ರೈ ಎಸ್ಟೇಟ್ ಎಜ್ಯುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ 14ನೇ ವರ್ಷದ ‘ಅಶೋಕ ಜನಮನ-2026’ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಸೇವೆಯನ್ನು ಶ್ಲಾಘಿಸುವುದರ ಜೊತೆಗೆ ರಾಮನ ಹೆಸರಿನಲ್ಲಿ ಚಂದಾ ವಸೂಲಿ ಮಾಡಿದವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, “ಅಶೋಕ್ ರೈ ಅವರು ಯಾರಿಂದಲೂ ಚಂದಾ ವಸೂಲಿ ಮಾಡಿ ದಾನ ಮಾಡುತ್ತಿಲ್ಲ. ತಮ್ಮ ಸ್ವಂತ ಬೆವರಿನ ಸಂಪಾದನೆಯ ಒಂದಂಶವನ್ನು ಜನರಿಗೆ ಹಂಚುತ್ತಿದ್ದಾರೆ. ಇದೇ ನಿಜವಾದ ದಾನ, ಇದೇ ನಿಜವಾದ ಸೇವೆ” ಎಂದರು.


“ಈ ದೇಶದಲ್ಲಿ ರಾಮನ ಹೆಸರಲ್ಲಿ ಚಂದಾ ವಸೂಲಿ ಮಾಡಿ, ರಾಮ ಮಂದಿರಕ್ಕಾಗಿ ಎಂದು ಹೇಳಿ ಜನರಿಂದ ಹಣ ಪಡೆದು ಅಯೋಧ್ಯೆಯಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಎಂಬ ಆರೋಪವಿದೆ. ಜನರ ಭಕ್ತಿಯನ್ನು ಬಳಸಿಕೊಂಡು ತಮ್ಮ ಹೆಸರು ಮಾಡಿಕೊಂಡವರು ಇದ್ದಾರೆ. ಆದರೆ ಅಶೋಕ್ ರೈ ಹಾಗಲ್ಲ. ಅವರು ಜನರ ಹಣ ಲೂಟಿ ಮಾಡಿ ತೋರಿಸಿಕೊಳ್ಳುವ ಕೆಲಸ ಮಾಡಿಲ್ಲ” ಎಂದು ಹರಿಪ್ರಸಾದ್ ಹೇಳಿದರು.“ರಾಮ ಎಂದರೆ ಕೋಮು ದ್ವೇಷ ಅಲ್ಲ. ರಾಮ ಎಂದರೆ ಎಲ್ಲರನ್ನು ಪ್ರೀತಿಸುವುದು, ಎಲ್ಲರಿಗೂ ಅನ್ನ ಕೊಡುವುದು, ಎಲ್ಲರಿಗೂ ಬಟ್ಟೆ ಕೊಡುವುದು. ಇಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದಾರೆ.


ಇದೇ ಕರ್ನಾಟಕದ ಸಂಸ್ಕೃತಿ” ಎಂದು ಅವರು ಹೇಳಿದರು.ಅಶೋಕ್ ರೈ ಅವರು ಕಳೆದ 14 ವರ್ಷಗಳಿಂದ ನಿರಂತರವಾಗಿ ಈ ಸೇವೆ ಮಾಡುತ್ತಿರುವುದನ್ನು ಸ್ಮರಿಸಿದ ಹರಿಪ್ರಸಾದ್, “1 ಲಕ್ಷ ಜನರಿಗೆ ಉಡುಗೊರೆ, 60 ಸಾವಿರ ಜನರಿಗೆ ಊಟ ಕೊಡುವುದು ಸಣ್ಣ ಕೆಲಸ ಅಲ್ಲ.


ಇದಕ್ಕೆ ದೊಡ್ಡ ಮನಸ್ಸು ಬೇಕು. ಆ ಮನಸ್ಸು ಅಶೋಕ್ ರೈ ಅವರಿಗೆ ಇದೆ. ಟೀಕೆ ಮಾಡುವವರು ಮಾಡುತ್ತಿರಲಿ, ಜನರ ಆಶೀರ್ವಾದ ನಿಮ್ಮ ಜೊತೆ ಇದೆ” ಎಂದರು.


ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಯು.ಟಿ. ಖಾದರ್, ಸ್ವಾಮೀಜಿಗಳಾದ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಈಶ ವಿಠಲದಾಸ ಸ್ವಾಮೀಜಿ, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರಿಗೆ ಸೀರೆ, ಬೆಡ್‌ಶೀಟ್, ಬಾತ್ ಟವೆಲ್, ತಟ್ಟೆ, ಬಟ್ಟಲು ಸೇರಿದಂತೆ ಉಡುಗೊರೆ ವಿತರಿಸಲಾಯಿತು. 60 ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾನ, 1 ಲಕ್ಷ ದೋಸೆ ವಿತರಣೆ ಮಾಡಲಾಯಿತು. ಗೂಡುದೀಪ ಸ್ಪರ್ಧೆ ಹಾಗೂ 10 ಬಡ ಸಾಧಕರಿಗೆ ಸನ್ಮಾನ ನಡೆಯಿತು.















































