ಮೈಸೂರು: ಐಟಿ ಕಂಪನಿ ಇನ್ಫೋಸಿಸ್ ತನ್ನ ಮೈಸೂರು ಕ್ಯಾಂಪಸ್‌ನಲ್ಲಿ ಫೌಂಡೇಶನ್ ಟ್ರೈನಿಂಗ್ ಪಡೆದ 300 ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ವಜಾಗೊಳಿಸಿದೆ. ಮೂರು ಪ್ರಯತ್ನಗಳ ನಂತರವೂ ಆಂತರಿಕ ಮೌಲ್ಯಮಾಪನದಲ್ಲಿ (Internal assessment) ಉತ್ತೀರ್ಣರಾಗಲು ಸಾಧ್ಯವಾಗದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಐಟಿ ಉದ್ಯೋಗಿಗಳ ಒಕ್ಕೂಟ NITES, ಈ ಕ್ರಮದ ವಿರುದ್ಧ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಅಧಿಕೃತ ದೂರು ಸಲ್ಲಿಸುವುದಾಗಿ ಬೆದರಿಕೆ ಹಾಕಿದೆ. ತುರ್ತು ಮಧ್ಯಸ್ಥಿಕೆ ಮತ್ತು ಕಂಪನಿಯ ವಿರುದ್ಧ ಕಠಿನ ಕ್ರಮವನ್ನು ಕೋರಿದೆ.
ಇನ್ಫೋಸಿಸ್ ಬೆಂಗಳೂರಿನ ಪ್ರಧಾನ ಕಚೇರಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು “ಇನ್ಫೋಸಿಸ್‌ನಲ್ಲಿ ನಾವು ಕಠಿನ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ, ನಮ್ಮ ಮೈಸೂರು ಕ್ಯಾಂಪಸ್‌ನಲ್ಲಿ ಫೌಂಡೇಶನ್ ಟ್ರೈನಿಂಗ್ ಪಡೆದ ನಂತರ ಎಲ್ಲಾ ಹೊಸಬರಿಗೆ ಆಂತರಿಕ
ಮೌಲ್ಯಮಾಪನಗಳನ್ನು ಮಾಡಲಾಗುತ್ತದೆ. ಎಲ್ಲಾ ಫ್ರೆಶರ್‌ಗಳು ಮೌಲ್ಯಮಾಪನ ದಲ್ಲಿ ಉತ್ತೀರ್ಣರಾಗಲು ಮೂರು ಪ್ರಯತ್ನಗಳನ್ನು ಪಡೆಯುತ್ತಾರೆ, ಅಲ್ಲಿ ವಿಫಲವಾದರೆ ಅವರು ಸಂಸ್ಥೆಯೊಂದಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ, ಈ ಷರತ್ತನ್ನು ಅವರ ಒಪ್ಪಂದದಲ್ಲಿ ಸಹ ಉಲ್ಲೇಖಿಸಲಾಗಿದೆ. ಈ ಪ್ರಕ್ರಿಯೆ ಎರಡು ದಶಕಗಳಿಂದ ಅಸ್ತಿತ್ವದಲ್ಲಿದ್ದು ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪ್ರತಿಭೆಯ ಲಭ್ಯತೆಯನ್ನು ಖಚಿತಪಡಿಸುತ್ತಿದ್ದೇವೆ” ಎಂದು ಹೇಳಿದೆ.
ವಜಾಗೊಂಡಿರುವವರು ಆಫರ್ ಲೆಟರ್‌ಗಳನ್ನು ಸ್ವೀಕರಿಸಿ ಈಗಾಗಲೇ ಎರಡು ವರ್ಷವಾಗಿದ್ದು, ದೀರ್ಘ ಕಾಯುವಿಕೆ ಸಹಿಸಿಕೊಂಡಿದ್ದಾರೆ ಎಂದು NITES ಹೇಳಿದೆ.













































