ಆರತಕ್ಷತೆ ಕಾರ್ಯಕ್ರಮಕ್ಕೆ ಹೂವಿನ ಬೊಕ್ಕೆಗಳು, ಡ್ರೈಫ್ರೂಟ್ಸ್‌ಗಳನ್ನು ದಯವಿಟ್ಟು ತರಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಫೇಸ್ ಬುಕ್ ಹಾಗೂ ಯು ಟ್ಯೂಬ್ ಲೈವ್ ನಲ್ಲಿ ಕಾರಣವನ್ನೂ ಸಹ ಕೊಟ್ಟಿದ್ದರು.
ಬೆಂಗಳೂರು: ಹೂವಿನ ಬೊಕ್ಕೆಗಳ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯನ್ನು ಹಿಂಪಡೆಯುವಂತೆ ದಕ್ಷಿಣ ಭಾರತ ಪುಷ್ಪ ಕೃಷಿ ಸಂಘ ಭಾನುವಾರ ತರಾಟೆಗೆ ತೆಗೆದುಕೊಂಡಿದೆ. ಗುರುವಾರ ರೆಸಾರ್ಟ್ ವೊಂದರಲ್ಲಿ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರೊಂದಿಗೆ ದಾಂಪತ್ಯ ಜೀವನಕ್ಕೆಕಾಲಿಸಿರಿದ ತೇಜಸ್ವಿ ಸೂರ್ಯ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮ ಇಂದು ಅರಮನೆ ಮೈದಾನದಲ್ಲಿ ನಡೆಯಿತು.ಆರತಕ್ಷತೆ ಕಾರ್ಯಕ್ರಮಕ್ಕೆ ಹೂವಿನ ಬೊಕ್ಕೆಗಳು, ಡ್ರೈಫ್ರೂಟ್ಸ್‌ಗಳನ್ನು ದಯವಿಟ್ಟು ತರಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಫೇಸ್ ಬುಕ್ ಹಾಗೂ ಯು ಟ್ಯೂಬ್ ಲೈವ್ ನಲ್ಲಿ ಕಾರಣವನ್ನೂ ಸಹ ಕೊಟ್ಟಿದ್ದರು.ಜವಾಬ್ದಾರಿಯುತ ಸ್ಥಾನದಲ್ಲಿರುವ ತೇಜಸ್ವಿ ಸೂರ್ಯ ಅವರ ಇಂತಹ ಹೇಳಿಕೆಗಳು ಅನುಚಿತ ಮತ್ತು ತಮ್ಮ ಜೀವನಕ್ಕಾಗಿ ಪುಷ್ಪ ಕೃಷಿಯನ್ನು ಅವಲಂಬಿಸಿರುವ ಲಕ್ಷಾಂತರ ರೈತರ ಶ್ರಮವನ್ನು ದುರ್ಬಲಗೊಳಿಸುತ್ತವೆ ಎಂದು ದಕ್ಷಿಣ ಭಾರತ ಪುಷ್ಪ ಕೃಷಿ ಸಂಘದ ಅಧ್ಯಕ್ಷ ಟಿ.ಎಂ ಅರವಿಂದ್ ಹೇಳಿದ್ದಾರೆ.
ಕರ್ನಾಟಕದಲ್ಲಿ 38,000 ಹೆಕ್ಟೇರ್‌ಗಳಲ್ಲಿ ಹೂ ಬೆಳೆಯಲಾಗುತ್ತದೆ. ಇದರಲ್ಲಿ 1,500 ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶಗಳಲ್ಲಿ ವಾಣಿಜ್ಯ ಹೂವಿನ ಬೆಳೆಗಳನ್ನು ಬೆಳೆಯಲಾಗುತ್ತದೆ.ರಾಜ್ಯದಲ್ಲಿ ಗುಲಾಬಿ, ಸೇವಂತಿ, ಮಾರಿಗೋಲ್ಡ್, ಮಲ್ಲಿಗೆ ಮತ್ತು ಕನಕಾಂಬರ ಸೇರಿದಂತೆ ವಿವಿಧ ಹೂವುಗಳನ್ನು ಬೆಳೆಯಲಾಗುತ್ತದೆ. ಅಲ್ಲದೇ ಜರ್ಬರಾಸ್, ಆಂಥೂರಿಯಂಗಳು ಮತ್ತು ಆರ್ಕಿಡ್ ನಂತಹ ವಾಣಿಜ್ಯಾತ್ಮಕ ಹೂಗಳನ್ನು ಹಸಿರುಮನೆಗಳು ಮತ್ತು ಪಾಲಿಹೌಸ್‌ಗಳಲ್ಲಿ ಬೆಳೆಯಲಾಗುತ್ತದೆ. 2.8 ಲಕ್ಷ ಎಕರೆ ಪ್ರದೇಶದಲ್ಲಿ ಹೂವಿನ ಕೃಷಿ ಮಾಡಲಾಗುತ್ತಿದ್ದು, 52 ಲಕ್ಷ ಜನರಿಗೆ ಪ್ರಯೋಜನವಾಗಿದೆ. ನೇರವಾಗಿ ಹಾಗೂ ಪರೋಕ್ಷವಾಗಿ 11 ಲಕ್ಷ ಜನರು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದಾಗಿ ಅವರು ವಿವರಿಸಿದ್ದಾರೆ.ಕೃತಕ ಹೂವುಗಳ ಪೈಪೋಟಿ ಮತ್ತು ಅಸ್ಥಿರ ಮಾರುಕಟ್ಟೆ ಬೆಲೆಗಳಂತಹ ಸವಾಲುಗಳ ಹೊರತಾಗಿಯೂ, ರೈತರು ನೈಸರ್ಗಿಕ ಹೂವುಗಳ ಬಳಕೆಯನ್ನು ಹೆಚ್ಚಿಸಲು ಶ್ರಮಪಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಭಾಗದಲ್ಲಿ 25,000 ಎಕರೆಯಲ್ಲಿ ಹೂವುಗಳನ್ನು ಬೆಳೆಯಲಾಗುತ್ತಿದೆ ಎಂದು ಸಂಸದ ಕೆ. ಸುಧಾಕರ್ ಇತ್ತೀಚಿಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು. ಹಿಂದೂ ಸಂಪ್ರದಾಯಗಳಲ್ಲಿ ಹೂವುಗಳು ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿವೆ ಎಂದು ಅವರು ತಿಳಿಸಿದ್ದಾರೆ.
“ಅತಿಯಾದ ಉಡುಗೊರೆ ತಪ್ಪಿಸುವುದು ಅರ್ಥವಾಗುವಂತಹದ್ದಾಗಿದೆ. ಆದರೆ ಹೂವಿನ ಬೊಕೆಗಳನ್ನು ನ್ಯಾಷನಲ್ ವೇಸ್ಟ್ ಎಂದು ಕರೆಯುವುದು ರೈತರ ಪ್ರಯತ್ನಗಳನ್ನು ಕಡೆಗಣಿಸುತ್ತದೆ ಮತ್ತು ಅವರ ಜೀವನೋಪಾಯಕ್ಕೆ ಧಕ್ಕೆ ತರುತ್ತದೆ” ಎಂದು ಅವರು ಹೇಳಿದ್ದಾರೆ.













































