ಬೆಂಗಳೂರಲ್ಲಿ ಭಾರಿ ಗಾಳಿ, ಮಳೆ: ಧರೆಗುರುಳಿದ ಮರಗಳು, ಹಲವು ವಿಮಾನಗಳು ಚೆನ್ನೈಗೆ ಮಾರ್ಗ ಬದಲಾವಣೆ

Picture of Savistara

Savistara

Bureau Report

ಗಾಳಿ ಸಹಿತ ಭಾರೀ ಮಳೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬರುತ್ತಿದ್ದ ಹಲವು ವಿಮಾನಗಳನ್ನು ಚೆನ್ನೈಗೆ ಮಾರ್ಗ ಬದಲಾವಣೆ ಮಾಡಲಾಗಿದೆ.

ದೇವನಹಳ್ಳಿ/ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು ಹಲವೆಡೆ ಮರಗಳು ಮತ್ತು ಮರದ ಕೊಂಬೆಗಳು ಧರೆಗೆ ಉರುಳಿವೆ. ಅಬ್ಬರದ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೂ ಸಹ ಅಡಚಣೆಯುಂಟಾಗಿದೆ. ಮಳೆ ಮತ್ತು ಪ್ರತಿಕೂಲ ಹವಮಾನದಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಮಾರ್ಗವನ್ನು ಚೆನ್ನೈಗೆ ಬದಲಾವಣೆ ಮಾಡಲಾಗಿದೆ.ಕಳೆದ ಎರಡು ತಿಂಗಳಿನಿಂದ ಕಡು ಬಿಸಿಲಿನಿಂದ ಕೆಂಡದಂತಾಗಿದ್ದ ರಾಜಧಾನಿ ಬೆಂಗಳೂರಿಗೆ ವರುಣದೇವ ತಂಪೆರೆದಿದ್ದಾನೆ. ಸಂಜೆ 5 ಗಂಟೆಯ ಬಳಿಕ ಆರಂಭವಾದ ಗುಡುಗು, ಗಾಳಿ ಸಹಿತ ಮಳೆ ರಾತ್ರಿ 10 ಗಂಟೆಯ ತನಕ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸುರಿದು ವಾತಾವರಣವನ್ನು ತಂಪಾಗಿಸಿದೆ.

ಆಲಿಕಲ್ಲು ಸಹಿತ ಧಾರಾಕಾರ ಮಳೆ: ಯಲಹಂಕ ಸುತ್ತಮುತ್ತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಮೇಖ್ರಿ ಸರ್ಕಲ್, ಹೆಬ್ಬಾಳ, ಬ್ಯಾಟರಾಯನಪುರ, ಜಕ್ಕೂರು, ಕೆಂಪೇಗೌಡ ವಿಮಾನ ನಿಲ್ದಾಣ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಮಳೆ ಬಿದ್ದಿದೆ ಎಂದು ವರದಿಯಾಗಿದೆ. ಯಲಹಂಕ ವಲಯದಲ್ಲಿ 16 ರಿಂದ 52.50 ಮಿ.ಮೀ ನಷ್ಟು ಪ್ರಮಾಣದ ಮಳೆ ಸುರಿದಿದೆ. ಸಂಜಯನಗರ, ಭೂಪಸಂದ್ರ, ಯಲಹಂಕ ಮತ್ತು ಹೆಬ್ಬಾಳ ಸುತ್ತಮುತ್ತ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಧಾರಾಕಾರ ಮಳೆ ಆಗಿದೆ. ಅನಿರೀಕ್ಷಿತ ಮಳೆಯಿಂದಾಗಿ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಯಿತು.ವಿದ್ಯಾರಣ್ಯಪುರ ಪೊಲೀಸ್ ಠಾಣೆ ಸಮೀಪ ಭಾರೀ ಮಳೆಗೆ ಮರ ಉರುಳಿ ಬಿದ್ದು ನಂತರ ತೆರವುಗೊಳಿಸಲಾಯಿತು. ಮಹದೇವಪುರ, ಬೊಮ್ಮನಹಳ್ಳಿ, ಆರ್ ಆರ್ ನಗರ, ಬೆಂಗಳೂರು ದಕ್ಷಿಣ ಭಾಗದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮುಂಗಾರು ಪೂರ್ವ ಮಳೆ ಧಾರಾಕಾರವಾಗಿ ಬಿದ್ದಿದೆ.

10 ವಿಮಾನಗಳು ಚೆನ್ನೈಗೆ ಮಾರ್ಗ ಬದಲಾವಣೆ: ಬೆಂಗಳೂರು ಸುತ್ತಮುತ್ತ ಗಾಳಿ ಸಹಿತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬರುತ್ತಿದ್ದ 10 ವಿಮಾನಗಳನ್ನು ಚೆನ್ನೈಗೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಸಂಜೆ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಬೆಂಗಳೂರಿನ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಸಹ ಉಂಟಾಗಿತ್ತು. ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ವಿಮಾನ ಹಾರಾಟದಲ್ಲಿ ವಿಳಂಬವಾಗಿದೆ. ಮತ್ತು ಕೆಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಿರುವುದರಿಂದ ಪ್ರಯಾಣಿಕರಿಗೆ ಅಡಚಣೆ ಉಂಟಾಗಿದೆ.ಈ ಬಗ್ಗೆ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಏರ್ ಇಂಡಿಯಾ ಸಂಸ್ಥೆಗಳು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಯಾಣಿಕರಲ್ಲಿ ಮನವಿ ಮಾಡಿದ್ದು, ತಮ್ಮ ವಿಮಾನಗಳ ಸ್ಥಿತಿಯನ್ನು ತಿಳಿದುಕೊಂಡು ಮುಂದಿನ ಪ್ರಯಾಣ ಮಾಡುವಂತೆ ಸಲಹೆ ನೀಡಿವೆ.ಹವಾಮಾನ ಪರಿಸ್ಥಿತಿಯು ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಲ್ಲದೇ, ಈ ಬಗ್ಗೆ ಪ್ರಯಾಣಿಕರಿಗೆ ಅಪ್​​ಡೇೆಟ್ ಮಾಡುತ್ತಿದ್ದೇವೆ. ರಿಯಲ್ ಟೈಮ್ ಇನ್ಪರ್ಮೆಷನ್​​ನಲ್ಲಿ ವಿಮಾನಗಳ ಮಾಹಿತಿ ತಿಳಿದುಕೊಳ್ಳುತ್ತೀರಿ. ನಮ್ಮ ವೆಬ್​ಸೈಟ್ ಮೂಲಕ ಗ್ರಾಹಕರಿಗೆ ಅನುಕೂಲವಾಗುವಂತೆ ಮರು ಬುಕ್ಕಿಂಗ್ ಮತ್ತು ಮರುಪಾವತಿ ಸೌಲಭ್ಯವಿದೆ ಎಂದು ಇಂಡಿಗೋ ಸಂಸ್ಥೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ.

ಭಾರೀ ಮಳೆಯಿಂದಾಗಿ ಉಂಟಾದ ವಾಯು ಸಂಚಾರ ದಟ್ಟಣೆಯಿಂದ ವಿಮಾನ ಕಾರ್ಯಚರಣೆಯ ಮೇಲೆ ಪರಿಣಾಮ ಬೀರಿದೆ ಎಂದು ಏರ್ ಇಂಡಿಯಾ ಸಂಸ್ಥೆ ತಿಳಿಸಿದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!