ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ನಡೆಯುತ್ತಿರುವ ಅವಹೇಳನಕಾರಿ ಹೇಳಿಕೆಗಳು ಮತ್ತು ಅಪಪ್ರಚಾರವನ್ನು ಖಂಡಿಸಿ ಧರ್ಮಸ್ಥಳ ಗ್ರಾಮಸ್ಥರು ಮಾ 27ರಂದು ಬೆಳಿಗ್ಗೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರು, ಮಾ. 27: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ನಡೆಯುತ್ತಿರುವ ಅವಹೇಳನಕಾರಿ ಹೇಳಿಕೆಗಳು ಮತ್ತು ಅಪಪ್ರಚಾರವನ್ನು ಖಂಡಿಸಿ ಧರ್ಮಸ್ಥಳ ಗ್ರಾಮಸ್ಥರು ಮಾ 27ರಂದು ಬೆಳಿಗ್ಗೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.ಈ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದು, ಕ್ಷೇತ್ರದ ಗೌರವವನ್ನು ಎತ್ತಿಹಿಡಿಯುವ ದೃಢಸಂಕಲ್ಪವನ್ನು ಅವರು ಮಾಡಿದರು.
ಪ್ರತಿಭಟನೆಗೂ ಮುನ್ನ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗದಲ್ಲಿ ಗ್ರಾಮಸ್ಥರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತೆಂಗಿನಕಾಯಿ ಒಡೆದು, ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವವರಿಗೆ ಶಿಕ್ಷೆ ನೀಡುವಂತೆ ಪ್ರಾರ್ಥಿಸಲಾಯಿತು.
ನಂತರ, ಅಣ್ಣಪ್ಪ ಸ್ವಾಮಿ ಬೆಟ್ಟದಿಂದ ಅಮೃತ ವರ್ಷಿಣಿ ಸಭಾಭವನದವರೆಗೆ ಪ್ರತಿಭಟನಾ ಜಾಥಾ ನಡೆಸಲಾಯಿತು. ಈ ಜಾಥಾದಲ್ಲಿ ಭಾಗವಹಿಸಿದವರು ಧರ್ಮಸ್ಥಳದ ಪವಿತ್ರತೆಗೆ ಭಂಗ ತರುತ್ತಿರುವವರವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯ ಭಾಗವಾಗಿ ಧರ್ಮಸ್ಥಳದಲ್ಲಿ ಸ್ವಯಂ ಪ್ರೇರಿತ ಬಂದ್ ಘೋಷಿಸಲಾಗಿತ್ತು. ಇದರಿಂದಾಗಿ ಕ್ಷೇತ್ರದ ಸುತ್ತ ಅಂಗಡಿ ಮುಂಗಟ್ಟುಗಳು ಮತ್ತು ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಧರ್ಮಸ್ಥಳ ಪಾಂಗಾಳ ನಿವಾಸಿ 17ರ ಹರೆಯದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಕಳೆದ 13 ವರ್ಷಗಳಿಂದ ಸುದ್ದಿಯಲ್ಲಿದೆ.
ಸೌಜನ್ಯಳ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವು ಎರಡು ತಂಡಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ. ಹೋರಾಟ ನಡೆಸುತ್ತಿರುವ ಒಂದು ತಂಡವು ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿನ ಧರ್ಮಾಧಿಕಾರಿಗಳನ್ನು ಗುರಿಯಾಗಿಸಿ ಅಪಪ್ರಚಾರ ನಡೆಸುತ್ತಿದೆ ಎಂದು ಇನ್ನೊಂದು ತಂಡವು ಆರೋಪಿಸುತ್ತಿದೆ. ಇದೇ ಹಿನ್ನಲೆಯಲ್ಲಿ ಇಂದಿನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯರು, “ಧರ್ಮಸ್ಥಳವು ಭಕ್ತರಿಗೆ ಆಧ್ಯಾತ್ಮಿಕ ಕೇಂದ್ರವಾಗಿದ್ದು. ಇದರ ವಿರುದ್ಧ ಯಾವುದೇ ಅಪಪ್ರಚಾರವನ್ನು ಸಹಿಸುವುದಿಲ್ಲ” ಎಂದು ತಿಳಿಸಿದರು. ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇರಿಸಲು ನಿಗಾ ಇರಿಸಿದೆ.










































