ನವದೆಹಲಿ: ಅಮೆರಿಕದ ವಿಶ್ವವಿದ್ಯಾನಿಲಯವೊಂದರಲ್ಲಿನಡೆದ ಸಂವಾದದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಶ್ರೀರಾಮ “ಪೌರಾಣಿಕ ವ್ಯಕ್ತಿ” ಎಂದು ಕರೆದಿದ್ದು ವಿವಾದಕ್ಕೆ ಕಾರಣವಾಗಿದೆ. ಹೇಳಿಕೆ’ ಹಿಂದೂ ವಿರೋಧಿ ಮನಸ್ಥಿತಿ’ಯನ್ನು ತೋರಿಸಿದ್ದು ರಾಹುಲ್ ಗಾಂಧಿ, “ರಾಮ ವಿರೋಧಿ” ಎಂದು ಬಿಜೆಪಿ ಆಕ್ರೋಶ ಹೊರ ಹಾಕಿದೆ.ಬ್ರೌನ್ ವಿಶ್ವವಿದ್ಯಾಲಯದ ವ್ಯಾಟ್ಸನ್ ಇನ್ಸಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಅಂಡ್ ಪಬ್ಲಿಕ್ ಅಫೇರ್ಸ್ ನಲ್ಲಿ ರಾಹುಲ್ ಅವರು ಈ ಹೇಳಿಕೆ ನೀಡಿದ್ದು, ಹಿಂದೂ ರಾಷ್ಟ್ರೀಯತೆಯಿಂದ ಪ್ರಾಬಲ್ಯ ಹೊಂದಿರುವ ಯುಗದಲ್ಲಿ ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಜಾತ್ಯತೀತ ರಾಜಕೀಯವನ್ನು ಹೇಗೆ ರೂಪಿಸಬೇಕು ಎಂಬ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.ಭಾರತದ ಯಾವುದೇ ಮಹಾನ್ ಸಮಾಜ ಸುಧಾರಕರು ಮತ್ತು ರಾಜಕೀಯ ಚಿಂತಕರು ಧರ್ಮಾಂಧರಲ್ಲ, ಬಿಜೆಪಿಯ ಕಲ್ಪನೆಯನ್ನು ಹಿಂದೂ ಎಂದು ನಾನು ಪರಿಗಣಿಸುವುದಿಲ್ಲ ಎಂದು ರಾಹುಲ್ ಉತ್ತರಿಸಿದ್ದಾರೆ.
“ನಮ್ಮ ಪೌರಾಣಿಕ ವ್ಯಕ್ತಿ ಶ್ರೀರಾಮ ಆ ರೀತಿಯವನಾಗಿದ್ದನು. ಅವನು ಕ್ಷಮಿಸುವವನಾಗಿದ್ದನು, ಕರುಣಾಮಯಿಯಾಗಿದ್ದನು. ಬಿಜೆಪಿ ಹೇಳುವುದನ್ನು ಹಿಂದೂ ಕಲ್ಪನೆ ಎಂದು ನಾನು ಪರಿಗಣಿಸುವುದಿಲ್ಲ.ಹಿಂದೂ ಕಲ್ಪನೆಯನ್ನು ಹೆಚ್ಚು ಬಹುತ್ವ, ಹೆಚ್ಚು ಆಲಿಂಗನ, ಹೆಚ್ಚು ಪ್ರೀತಿ, ಹೆಚ್ಚು ಸಹಿಷ್ಣು ಮತ್ತು ಮುಕ್ತ ಎಂದು ನಾನು ಪರಿಗಣಿಸುತ್ತೇನೆ. ಪ್ರತಿಯೊಂದು ರಾಜ್ಯ ಮತ್ತು ಸಮುದಾಯದಲ್ಲಿ ಆ ವಿಚಾರಗಳ ಪರವಾಗಿ ನಿಂತ, ಆ ವಿಚಾರಗಳಿಗಾಗಿ ಬದುಕಿದ ಮತ್ತು ಆ ವಿಚಾರಗಳಿಗಾಗಿ ಸತ್ತ ಜನರಿದ್ದಾರೆ. ಗಾಂಧೀಜಿ ಅವರಲ್ಲಿ ಒಬ್ಬರು. ನನಗೆ, ಜನರ ವಿರುದ್ಧ ದ್ವೇಷ ಮತ್ತು ಕೋಪವು ಭಯದಿಂದ ಬರುತ್ತದೆ. ನೀವು ಭಯಪಡದಿದ್ದರೆ, ನೀವು ಯಾರನ್ನೂ ದ್ವೇಷಿಸುವುದಿಲ್ಲ” ಎಂದು ರಾಹುಲ್ ಹೇಳಿದ್ದಾರೆ.ರಾಹುಲ್ ಗಾಂಧಿ ಹೇಳಿಕೆಯ ವಿಡಿಯೋ ತುಣುಕನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ವಕ್ತಾರರು ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ.













































