ಶೀಘ್ರದಲ್ಲೇ ಬಿಯರ್ 15 ರೂ.ವರೆಗೆ ದುಬಾರಿ?

Picture of Savistara

Savistara

Bureau Report

ಹೆಚ್ಚುವರಿ ಅಬಕಾರಿ ಸುಂಕ ಏರಿಕೆ ಆಕ್ಷೇಪಣೆಗೆ 7 ದಿನ ಅವಕಾಶ; ಎರಡು ವರ್ಷಗಳಲ್ಲಿ ಬಿಯರ್ ದರ ಶೇ. 30 ಹೆಚ್ಚಳ ಸಾಧ್ಯತೆ

ಬೆಂಗಳೂರು: ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿಸುಂಕವನ್ನು (ಎಇಡಿ) ಶೇ.10ರಷ್ಟು ಹೆಚ್ಚಿಸಲು ನಿರ್ಧರಿಸಿರುವ ಸರಕಾರ, ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಿದೆ. ಅಬಕಾರಿ ಇಲಾಖೆ ಈ ನಿರ್ಧಾರದಿಂದ ಶೀಘ್ರದಲ್ಲೇ ಬಿಯರ್‌ದರ 10ರಿಂದ 15 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ.ಸರಕಾರದ ಕ್ರಮಕ್ಕೆ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್‌ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ. ಮದ್ಯ ಮತ್ತು ಬಿಯರ್ ದರಗಳ ಮೇಲೆ ಹೆಚ್ಚುವರಿ ಅಬಕಾರಿ ಶುಲ್ಕವನ್ನು ನಿಗದಿಪಡಿಸುವಾಗ ವೈಜ್ಞಾನಿಕ ಮಾನದಂಡಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದೆ.ಸದ್ಯ ರಾಜ್ಯದಲ್ಲಿ ಬಿಯರ್ ಮೇಲಿನ ಎಇಡಿಯು ಉತ್ಪಾದನ ವೆಚ್ಚವು ಶೇ.195ರಷ್ಟಿದೆ. ಈಗ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.205ಕ್ಕೆ ಹೆಚ್ಚಿಸುವ ಬಗ್ಗೆ ಹೊಸ ಕರಡು ಅಧಿಸೂಚನೆಯಲ್ಲಿ ಅಬಕಾರಿ ಇಲಾಖೆ ಉಲ್ಲೇಖೀಸಿದೆ. ಈ ಹಿನ್ನೆಲೆಯಲ್ಲಿ ಪ್ರೀಮಿಯಂ ಅಥವಾ ಇತರ ಬಿಯ‌ರ್ ಬ್ರಾಂಡ್ ಗಳ ಬೆಲೆಯು ಪ್ರತಿ ಬಾಟಲಿಗೆ ಸರಾಸರಿ 10ರಿಂದ 15 ರೂ. ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿದೆ ಎಂದು ವೈನ್ ಅಸೋಸಿಯೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ.

3ನೇ ಬಾರಿ ದರ ಏರಿಕೆ

ಮಧ್ಯಮ ಶ್ರೇಣಿಯ ಮತ್ತು ಅಗ್ಗದ ಸ್ಥಳೀಯ ಬ್ಯಾಂಡ್ ಗಳ ಬಿಯರ್ ದರ 5 ರೂ. ವರೆಗೆ ಏರಿಕೆಯಾಗುವ ನಿರೀಕ್ಷೆಯಿದೆ. ದರ ಏರಿಕೆಯು ಟ್ರ್ಯಾಂಡ್ ನಿಂದ ಬ್ರಾಂಡ್ ಗೆ ವ್ಯತ್ಯಾಸವಾಗುವ ಸಾಧ್ಯತೆಯಿದೆ. 2023ರ ಜುಲೈಯಲ್ಲಿ ಕಾಂಗ್ರೆಸ್ ಸರಕಾರ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.175ರಿಂದ ಶೇ.185ಕ್ಕೆ ಹೆಚ್ಚಿಸಿತ್ತು. 2025ರ ಜ.20ರಂದು ಬಜೆಟ್‌ಗೂ ಮುನ್ನವೇ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.185ರಿಂದ ಶೇ. 195ಕ್ಕೆ ಹೆಚ್ಚಿಸಲಾಗಿತ್ತು. ಈಗ ಮೂರನೇ ಬಾರಿಗೆ ತೆರಿಗೆ ಹೆಚ್ಚಳ ಮಾಡಲು ಸರಕಾರ ಮುಂದಾಗಿದೆ. ಕಳೆದ 2 ಬಾರಿ ಅಬಕಾರಿ ಸುಂಕ ಹೆಚ್ಚಳ ಮಾಡಿದಾಗ ರಾಜ್ಯದಲ್ಲಿ ವಿವಿಧ 6 ಬಗೆಯ ಬಿಯರ್‌ಗಳು ಕನಿಷ್ಠ 10 ರೂ.ನಿಂದ ಗರಿಷ್ಠ 45 ರೂ.ವರೆಗೂ ದುಬಾರಿಯಾಗಿತ್ತು.

ಆಕ್ಷೇಪ ಸಲ್ಲಿಸಲು ಮುಂದಾದ ವೈನ್‌ ಮರ್ಚಂಟ್ಸ್ ಅಸೋಸಿಯೇಶನ್‌

ಅಬಕಾರಿ ಇಲಾಖೆಯ ನಿರ್ಧಾರಕ್ಕೆ ಫೆಡರೇಷನ್‌ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಸೋಸಿಯೇಶನ್‌ ಅಧ್ಯಕ್ಷ ಎಸ್. ಗುರುಸ್ವಾಮಿ ಮೈಸೂರು, ಮಾರಾಟಕ್ಕೆ ಹೊಡೆತ ಬೀಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬಿಯರ್ ದರ ಏರಿಕೆ ಸಂಬಂಧ ಅಸೋಸಿಯೇಶನ್ ಆಕ್ಷೇಪಣೆ ಸಲ್ಲಿಸಲಿದೆ ಎಂದು ಹೇಳಿದ್ದಾರೆ.ಮದ್ಯ ಮತ್ತು ಬಿಯರ್ ದರಗಳನ್ನು ನಿಗದಿಪಡಿಸುವಾಗ ಚಿಲ್ಲರೆ ಮದ್ಯ ಮಾರಾಟಗಾರರ ಸಂಘಗಳ ಸಭೆ ಕರೆದು ಅಭಿಪ್ರಾಯಗಳನ್ನು ಪಡೆದುಕೊಳ್ಳುವಂತೆ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ ಅಬಕಾರಿ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ದರಗಳ ಯಾವತ್ತೂ ಗ್ರಾಹಕರ ಕೈಗೆಟಕುವಂತಿರಬೇಕು ಎಂದು ಆಗ್ರಹಿಸಿದ್ದಾರೆ.

[t4b-ticker]
error: Content is protected !!