ಭಾರತದ ದಾಳಿಗೆ ಉಗ್ರ ಮಸೂದ್​ ಅಜರ್​ನ ಜೆಇಎಂ ಸಂಘಟನೆಯ ಕೇಂದ್ರ ಕಚೇರಿ ನೆಲಸಮ

Picture of Savistara

Savistara

Bureau Report

ಭಾರತದ ದಾಳಿಯಲ್ಲಿ ಉಗ್ರರ 9 ನೆಲೆಗಳು ನಾಶವಾಗಿವೆ. ಅದರಲ್ಲಿ ಜೆಇಎಂ ಸಂಘಟನೆಯ ಕೇಂದ್ರ ಕಚೇರಿ ನೆಲಸಮವಾಗಿದೆ.

ನವದೆಹಲಿ: ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತೀಯ ಸೇನಾಪಡೆಗಳು ನಡೆಸಿದ ನಿಖರ ದಾಳಿಯಲ್ಲಿ ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಪ್ರಧಾನ ಕಚೇರಿ ಧ್ವಂಸವಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಭಾರತದ ಪ್ರತೀಕಾರದ ದಾಳಿಗೆ ಅತಿ ಹೆಚ್ಚು ನಷ್ಟ ಅನುಭವಿಸಿದ್ದು, ಪುಲ್ವಾಮಾ ದಾಳಿಯ ರೂವಾರಿ ಜೈಶ್​-ಎ-ಮೊಹಮದ್​ ಉಗ್ರ ಸಂಘಟನೆ. ಅದರ ಸಂಸ್ಥಾಪಕ ಪ್ರಮುಖ ಉಗ್ರ ಮಸೂದ್ ಅಜರ್​ ಕುಟುಂಬದ 10 ಸದಸ್ಯರು ಸೇರಿ ಹಲವು ಉಗ್ರರು ಹತರಾಗಿದ್ದಾಗಿ ವರದಿಯಾಗಿದೆ.ಪಾಕಿಸ್ತಾನದ ಗುಪ್ತಚರ ದಳವಾದ ಐಎಸ್​ಐನ ನೆರವಿನಿಂದ ಸ್ಥಾಪಿತವಾಗಿರುವ ಜೆಇಎಂ ಉಗ್ರ ಸಂಘಟನೆಯ ಕೇಂದ್ರ ಕಚೇರಿಯ ಮೇಲಿನ ದಾಳಿಯಲ್ಲಿ ಅತಿ ಪ್ರಬಲವಾದ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ. ಇದರಿಂದ ಇಡೀ ಕಟ್ಟಡವೇ ಧ್ವಂಸವಾಗಿದೆ. ಇದು ಭಾರತಕ್ಕೆ ಸಿಕ್ಕ ದೊಡ್ಡ ಯಶಸ್ಸು ಎಂದು ಮೂಲಗಳು ಹೇಳಿವೆ.

ಡಿಜಿಎಂಒಗಳ ನಡುವೆ ಮಾತುಕತೆ: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸಲು (ಕದನ ವಿರಾಮ) ಉಭಯ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರ ​​ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವೆ ಮಾತ್ರ ಮಾತುಕತೆ ನಡೆದಿತ್ತು ಎಂದು ತಿಳಿದು ಬಂದಿದೆ.ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಒಬ್ಬ ನೇಪಾಳಿ ಪ್ರಜೆ ಸೇರಿದಂತೆ 26 ಪ್ರವಾಸಿಗರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಈ ಕಾರ್ಯಾಚರಣೆ ನಡೆಸಿತ್ತು. ಮೇ 7ರ ಮುಂಜಾನೆ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಕೆ)ದಲ್ಲಿ 9 ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಕ್ಷಿಪಣಿ, ಡ್ರೋನ್​ ದಾಳಿ ನಡೆಸಿದೆ.

ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಿದ ಬಳಿಕ ಅಮೆರಿಕವು ಮಧ್ಯಸ್ಥಿಕೆ ವಹಿಸಿ ಕದನ ವಿರಾಮ ನೀಡಲು ಉಭಯ ರಾಷ್ಟ್ರಗಳನ್ನು ಒಪ್ಪಿಸಿದ್ದಾಗಿ ಹೇಳಿದೆ. ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಈ ಬಗ್ಗೆ ಮೊದಲು ಪ್ರಕಟಿಸಿದ್ದರು. ಬಳಿಕ ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳು ಕದನ ವಿರಾಮವನ್ನು ಒಪ್ಪಿಕೊಂಡಿದ್ದರು.

ಭೀಕರ ಮರು ದಾಳಿ ನಡೆಸಲು ಮೋದಿ ಸೂಚನೆ: ಆದಾಗ್ಯೂ, ಪಾಕಿಸ್ತಾನವು ಗಡಿಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿ ದಾಳಿ ನಡೆಸುತ್ತಿದೆ ಎಂದು ಭಾರತ ಆರೋಪಿಸಿದೆ. ಪಾಕಿಸ್ತಾನವು ದಾಳಿ ನಡೆಸಿದ್ದೇ ಆದಲ್ಲಿ ಅದಕ್ಕೆ ಪ್ರಬಲವಾದ ಪ್ರತಿಕ್ರಿಯೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಪಡೆಗಳಿಗೆ ಸೂಚನೆ ನೀಡಿದ್ದಾಗಿ ತಿಳಿದು ಬಂದಿದೆ.ಆಪರೇಷನ್​ ಸಿಂಧೂರ ಬಗ್ಗೆ ಮಾಹಿತಿ ನೀಡಿದ ಭಾರತದ ಡಿಜಿಎಂಒಗಳು, ಮೇ 7ರಂದು ನಡೆದ ಕಾರ್ಯಾಚರಣೆಯಲ್ಲಿ 9 ಭಯೋತ್ಪಾದಕ ನೆಲೆಗಳ ಧ್ವಂಸ, 100ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿದಿದ್ದಾಗಿ ತಿಳಿಸಿದ್ದಾರೆ. ಅದರಲ್ಲಿ IC814 ವಿಮಾನ ಅಪಹರಣ ಮತ್ತು ಪುಲ್ವಾಮಾ ಸ್ಫೋಟದಲ್ಲಿ ಭಾಗಿಯಾಗಿದ್ದ ಪ್ರಮುಖ ಉಗ್ರ ಯೂಸುಫ್ ಅಜರ್ ಕೂಡ ಹತನಾಗಿದ್ದಾನೆ. 35ರಿಂದ 40 ಪಾಕಿಸ್ತಾನದ ಯೋಧರೂ ಸಾವನ್ನಪ್ಪಿದ್ದಾರೆ. 700ಕ್ಕೂ ಅಧಿಕ ಡ್ರೋನ್​ಗಳನ್ನು ನಾಶ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

[t4b-ticker]
error: Content is protected !!