ಮುಂಬೈ: ಇದೇ ವರ್ಷದ ಏಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳದಲ್ಲಿಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಐಎಎಸ್ ಅಧಿಕಾರಿ ತುಕಾರಾಂ ಮುಂಡೆ ಅವರಿಗೆ ಆಘಾತಕಾರಿ ಸುದ್ದಿಯೊಂದು ಬಂದಿತ್ತು. ಅವರ 90 ವರ್ಷದ ತಾಯಿ ಅಸರ್‌ಬಾಯಿ ಅವರು ನಿಧನರಾಗಿದ್ದರು. ವಿಚಾರ ತಿಳಿಯುತ್ತಿದ್ದಂತೆ, ಅಂತಿಮ ವಿಧಿಯಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ಬೀಡ್ ಜಿಲ್ಲೆಗೆ ಧಾವಿಸಿದರು.
ಆಕಾಶವೇ ಕಳಚಿಬೀಳುವಂತಹ ದುಃಖದ ನಡುವೆಯೂ ತುಕಾರಾಂ ಅವರು, ತಾಯಿಯ ಅಂತ್ಯ ಸಂಸ್ಕಾರದ ನಂತರದ ವಿಧಿವಿಧಾನಗಳನ್ನು ಸಾಂಪ್ರದಾಯಿಕ ಕಟ್ಟುಪಾಡುಗಳಂತೆ ಮುಂದುವರಿಸದಿರುವ ತೀರ್ಮಾನ ಮಾಡಿದರು. ಅಮ್ಮನ ಚಿತಾಭಸ್ಮವನ್ನು ನದಿಯಲ್ಲಿ ತೇಲಿಬಿಡುವ ಬದಲು, ಸಂಸ್ಕಾರ ಮಾಡಿದ ಸ್ಥಳದಲ್ಲಿ ಆಲದ ಸಸಿಯೊಂದನ್ನು ನೆಟ್ಟು ಪೋಷಿಸಲು ಮುಂದಾದರು. ಆ ಮೂಲಕ ಅವರು, ಹೆತ್ತವಳು ಹಾಗೂ ಜೀವನದುದ್ದಕ್ಕೂ ಸಲಹುತ್ತಿರುವ ಪ್ರಕೃತಿ ಮಾತೆಗೆ ಗೌರವ ಸಲ್ಲಿಸಿದರು.ಸದ್ಯ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಆಯುಕ್ತರಾಗಿರುವ ತುಕಾರಾಂ ಅವರ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ಸ್ಪಷ್ಟವಾಗಿ ಕಟ್ಟಿಕೊಡುತ್ತದೆ.2005ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ತುಕಾರಾಂ, ಕಳೆದ 21 ವರ್ಷಗಳ ವೃತ್ತಿ ಜೀವನದಲ್ಲಿ ಬರೋಬ್ಬರಿ 25 ಸಲ ವರ್ಗಾವಣೆಯಾಗಿದ್ದಾರೆ. ಇದು, ಮಹಾರಾಷ್ಟ್ರದ ಮಟ್ಟಿಗೆ ದಾಖಲೆಯೇ ಎನ್ನಬಹುದು. ಎರಡು ದಶಕಗಳ ವೃತ್ತಿಬದುಕಿನಲ್ಲಿ ಜನಾನುರಾಗಿ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಅವರನ್ನು ಜನರು, ಪ್ರೀತಿಯಿಂದ ‘ಸಿಂಗಂ’, ‘ಯುವಕರ ಕಣ್ಮಣಿ’, ‘ಜನ ನಾಯಕ’ ಎಂಬಿತ್ಯಾದಿಯಾಗಿ ಕರೆಯುತ್ತಾರೆ.
ಅವರು ಎಫ್‌ಡಿಎ ಆಯುಕ್ತರಾದ ನಂತರ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ – 2006’ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಆ ಮೂಲಕ, ಕಾನೂನನ್ನು ಉಲ್ಲಂಘಿಸುವವರ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಈ ಕುರಿತು ಮಾತನಾಡಿರುವ ತುಕಾರಾಂ, ‘ಕಾನೂನಿಗೆ ಅನುಸಾರವಾಗಿ ನಡೆಯುವ ಯಾರೂ, ಭಯಪಡಬೇಕಾಗಿಲ್ಲ. ನಿಯಮಗಳನ್ನು ಮೀರುವವರಿಗೆ ಆತಂಕ ಇದ್ದಿದ್ದೇ. ಸಾರ್ವಜನಿಕರ ಸೇವಕನಾಗಿ ಏನೆಲ್ಲ ಮಾಡಬೇಕೋ, ಅದನ್ನು ಸಂಪೂರ್ಣ ಜವಾಬ್ದಾರಿಯಿಂದ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.ತುಕಾರಾಂ ಅವರು, ಎಫ್‌ಡಿಎಗೆ ನಿಯೋಜನೆಗೊಳ್ಳುವ ಮೊದಲು ವಿಪತ್ತು ನಿರ್ವಹಣೆ, ಪರಿಹಾರ ಮತ್ತು ಪುನರ್ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಏನಿವರ ಹಿನ್ನೆಲೆ?
1975ರ ಜೂನ್ 3ರಂದು ಬೀಡ್ ಜಿಲ್ಲೆಯ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ತುಕಾರಾಂ, ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕೂ ಪರದಾಡುವ ಸ್ಥಿತಿಯಲ್ಲಿಯೇ ಬೆಳೆದವರು. ಹಾಗೆಂದ ಮಾತ್ರಕ್ಕೆ ಅವರು ಎಂದೂ ಕುಗ್ಗಿ ಕೂರಲಿಲ್ಲ. ಬದುಕಿನುದ್ದಕ್ಕೂ ಶಿಸ್ತನ್ನು ಮೈಗೂಡಿಸಿಕೊಂಡರು. ಓದಿನತ್ತ ಗಮನ ಹರಿಸಿದರು.
ಹೊಲದಲ್ಲಿ ಪೋಷಕರಿಗೆ ಸಹಾಯ ಮಾಡುತ್ತಲೇ ಓದು ಮುಂದುವರಿಸಿದರು. ವಿದ್ಯುತ್ ಇಲ್ಲದ ಹೊತ್ತಲ್ಲಿ, ಮಣ್ಣಿನ ದೀಪದ ಕೆಳಗೇ ಅಧ್ಯಯನ ಮಾಡುತ್ತಾ, ಶಾಲಾ ಶಿಕ್ಷಣ ಪೂರೈಸಿದರು. ಆಗಿನ ಔರಂಗಬಾದ್‌ನಲ್ಲಿರುವ (ಈಗ ಛತ್ರಪತಿ ಸಂಭಾಜಿನಗರ) ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡಾ ವಿಶ್ವವಿದ್ಯಾಲಯದಿಂದ ಪದವಿ (ಬಿಎ) ಹಾಗೂ ಸ್ನಾತಕೋತ್ತರ ಪದವಿ (ಎಂಎ) ವ್ಯಾಸಂಗ ಮಾಡಿದರು.ಆರ್ಥಿಕವಾಗಿ ಸದೃಢವಾಗಿಲ್ಲದಿದ್ದರೂ, ಛಲ ಬಿಡದೆ ಓದು ಮುಂದುವರಿಸಿದ ಅವರು ಕೇಂದ್ರೀಯ ನಾಗರಿಕ ಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲೂ ಯಶಸ್ಸು ಸಾಧಿಸಿ, ತಮ್ಮದೇ ರಾಜ್ಯಕ್ಕೆ ನೇಮಕಗೊಂಡರು. ಆದರೆ, ಕಳೆದ 21 ವರ್ಷಗಳ ವೃತ್ತಿ ಬದುಕಿನಲ್ಲಿ ಅವರು 25 ಸಲ ಬೇರೆ ಬೇರೆ ಇಲಾಖೆಗೆ ವರ್ಗಾವಣೆಯಾಗಿದ್ದಾರೆ. ಆದರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ, ರಾಜಕೀಯ ಒತ್ತಡಗಳಿಗೆ ಮಣಿಯದ ತುಕಾರಾಂ, ನಿಯೋಜನೆಗೊಂಡ ಪ್ರತಿಯೊಂದು ಇಲಾಖೆಯಲ್ಲೂ ತಮ್ಮದೇ ಛಾಪು ಮೂಡಿಸಿ, ಜನಪ್ರಿಯ’ ಎನಿಸಿದ್ದಾರೆ.
ಸದ್ಯ ಎಫ್‌ಡಿಎ ಆಯುಕ್ತರಾಗಿರುವ ಬಗ್ಗೆ ಮಾತನಾಡಿರುವ ತುಕಾರಾಂ, ‘ಆಹಾರ ಸುರಕ್ಷತೆಯು ಕೇವಲ ಕಡತಗಳು, ಕಾರ್ಯಾಚರಣೆಗಳಿಗಷ್ಟೇ ಸಂಬಂಧಿಸಿದ್ದಲ್ಲ. ಅದು ನೇರವಾಗಿ ಜನರ ಕಾಳಜಿಗೆ ಸಂಬಂಧಿಸಿದ್ದಾಗಿದೆ. ಒಂದು ಹೊತ್ತಿನ ಸುರಕ್ಷಿತ ಊಟವೂ ಒಂದು ಕುಟುಂಬವನ್ನು ರಕ್ಷಿಸುತ್ತದೆ. ಕಳಪೆ ಅಥವಾ ಅಸುರಕ್ಷಿತವಾದ ಆಹಾರದ ವಿರುದ್ಧ ನಾವು ಕೈಗೊಳ್ಳುವ ಪ್ರತಿಯೊಂದು ಕ್ರಮವೂ ನಾಗರಿಕರ ಆರೋಗ್ಯ, ಘನತೆ, ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ’ ಎಂದು ಅವರು ಹೇಳಿದ್ದಾರೆ.’ಏನು ಮಾಡಬೇಕು ಎಂಬುದು ಸ್ಪಷ್ಟವಾಗಿ ತಿಳಿದಿದ್ದಾಗ, ಪ್ರತಿಯೊಂದು ಕ್ರಮವೂ ನ್ಯಾಯಯುತವಾಗಿದ್ದಾಗ ಮತ್ತು ಅವುಗಳನ್ನು ಜಾರಿಗೊಳಿಸುವ ಮಾರ್ಗವು ಮಾನವೀಯವಾಗಿ ಇದ್ದರೆ ಆಡಳಿತವು ಜನರ ವಿಶ್ವಾಸವನ್ನು ಗಳಿಸಿಕೊಳ್ಳಲು ಸಾಧ್ಯ ಎಂಬುದು ಮಹಾರಾಷ್ಟ್ರದ ಸೇವಾ ಅವಧಿಯಲ್ಲಿ ಅನುಭವಕ್ಕೆ ಬಂದಿದೆ’ ಎಂದೂ ಹೇಳಿಕೊಂಡಿದ್ದಾರೆ.
ಕಟ್ಟುನಿಟ್ಟಿನ ಆಡಳಿತದಿಂದ ಕೆಂಗಣ್ಣಿಗೆ ಗುರಿ
ಎಫ್‌ಡಿಎ ಆಯುಕ್ತರಾಗಿ ಮೇ 26ರಂದು ಅಧಿಕಾರ ವಹಿಸಿಕೊಂಡಾಗಿನಿಂದಲೂ ತುಕಾರಾಂ ಅವರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ವಿಚಾರದಲ್ಲಿ ಪ್ರತಿಯೊಂದು ಹೋಟೆಲ್, ರೆಸ್ಟೋರೆಂಟ್, ಆಹಾರ ಮಳಿಗೆ, ಕ್ಯಾಂಟೀನ್‌ಗಳ ಮೇಲೆ ಒತ್ತಡ ತಂದಿದ್ದಾರೆ. ಎಷ್ಟು ಪ್ರಭಾವಿಗಳ ಎದುರಾದರೂ, ಯಾರಿಗೂ ಜಗ್ಗದೆ ಮುನ್ನುಗ್ಗಿದ್ದಾರೆ. ಗುಟ್ಕಾ, ನಕಲಿ ಔಷಧಗಳ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದಾರೆ.
ತುಕಾರಾಂ ಅವರು ತಮ್ಮ ನಿರ್ಭೀತ ಕ್ರಮಗಳ ಕಾರಣಕ್ಕಾಗಿ ಬಾಂಬೆ ಹೈಕೋರ್ಟ್ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ‘ಮೊದಲು ಗುಂಡು ಹಾರಿಸಿ, ನಂತರ ಪ್ರಶ್ನೆ ಕೇಳುವ ರೂಢಿಯು ಕಾನೂನಿಗೆ ಅನ್ವಯವಾಗುವುದಿಲ್ಲ. ನಿಮ್ಮ ಅಧಿಕಾರ ವ್ಯಾಪ್ತಿಯ ಬಗ್ಗೆ ನಮ್ಮದೇನೂ ತಕರಾರಿಲ್ಲ. ಸಮಸ್ಯೆ ಏನೆಂದರೆ, ನಿಮಗೆ ಕತ್ತಿ ಬಳಸುವ ಅಧಿಕಾರವಿದೆ. ಆದರೆ, ನೀವು ಅದನ್ನು ಸೊಳ್ಳೆಗಳನ್ನು ಕೊಲ್ಲಲು ಬಳಸುತ್ತಿದ್ದೀರಿ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಮಂತ್ರಾಲಯ ಕ್ಯಾಂಟೀನ್‌ಗೆ ‘ಶೇ 98ರಷ್ಟು ಶುದ್ಧ’ ಎಂಬ ಪ್ರಮಾಣಪತ್ರ ನೀಡಿದ್ದರ ಬಗ್ಗೆ ಪ್ರಶ್ನಿಸಿದ್ದ ನ್ಯಾಯಾಲಯ, ‘ಎಫ್‌ಡಿಎ ಕ್ರಮಗಳು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಇರಬೇಕು. ನಿಮ್ಮ ಪ್ರಕಾರ, ಮಂತ್ರಾಲಯ ಕ್ಯಾಂಟೀನ್ ತುಂಬಾ ಶುಚಿಯಾಗಿದೆ ಎಂಬುದಾದರೆ, ಪೂರ್ಣಿಮಾ ರೆಸ್ಟೋರೆಂಟ್ ವಿಚಾರದಲ್ಲಿ ತಪಾಸಣೆಯ ಸಂದರ್ಭದಲ್ಲಿ ಸೆರೆಹಿಡಿಯಲಾದ ವಿಡಿಯೊ, ಫೋಟೊಗಳನ್ನು ಸಲ್ಲಿಸಿರುವಂತೆ ಮಂತ್ರಾಲಯ ಕ್ಯಾಂಟೀನ್ ತಪಾಸಣೆಯ ವಿಡಿಯೊ, ಫೋಟೊಗಳನ್ನೂ ಸಲ್ಲಿಸಿ. ಖಾಸಗಿ ಆಸ್ತಿಗಳನ್ನು ಮಾತ್ರವೇ ಗುರಿ ಮಾಡಲು ಸಾಧ್ಯವಿಲ್ಲ. ಎಲ್ಲರ ವಿಚಾರದಲ್ಲೂ ಒಂದೇ ರೀತಿ ಇರಬೇಕು’ ಎಂದು ಕಿವಿ ಹಿಂಡಿತ್ತು.
ತಾವು ಕಾಲಿಟ್ಟ ಎಲ್ಲ ಇಲಾಖೆಗಳಲ್ಲೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ ತುಕಾರಾಂ ಅವರನ್ನು ವಿವಾದಗಳೂ ಹಿಂಬಾಲಿಸಿವೆ. ಛತ್ರಪತಿ ಸಂಭಾಜಿನಗರದಲ್ಲಿರುವ ಎಫ್‌ಡಿಎ ಕಚೇರಿಯ ಸುಮಾರು 29 ಅಧಿಕಾರಿಗಳು ಆಹಾರ ಮತ್ತು ಔಷಧ ಆಡಳಿತ ಸಚಿವ ನರಹರಿ ಜಿರ್ವಾಲ್ ಅವರಿಗೆ ದೂರು ನೀಡಿದ್ದಾರೆ. ಹೆಚ್ಚುವರಿ ಅವಧಿ ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಇದರಿಂದಾಗಿ ಸಿಬ್ಬಂದಿಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಆರೋಪಿಸಲಾಗಿದೆ.2014ರ ನವೆಂಬರ್‌ನಲ್ಲಿ ಸೋಲಾಪುರದ ಜಿಲ್ಲಾಧಿಕಾರಿಯಾಗಿದ್ದ ತುಕಾರಾಂ, ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿದ್ದರು. ಕಠಿಣ ಕ್ರಮಗಳು ಜಾರಿಯಾಗುತ್ತಿದ್ದಂತೆ, ಅಲ್ಲಿನ ಮರಳು ಮಾಫಿಯಾ ಕುಳಗಳ ಕೆಂಗಣ್ಣು ತುಕಾರಾಂ ಮೇಲೆ ಬಿದ್ದಿತ್ತು. ವರ್ಗಾವಣೆ ಅನಿವಾರ್ಯವಾಗಿತ್ತು.ನಾಗಪುರ ಪಾಲಿಕೆ ಆಯುಕ್ತರಾಗಿದ್ದಾಗಲೂ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದ್ದರು. ಪಾಲಿಕೆಯಲ್ಲಿ ನಡೆದಿದ್ದ ಅವ್ಯವಹಾರಗಳನ್ನು ಬಯಲಿಗೆಳೆದಿದ್ದರು. ಆದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಹೊತ್ತಿಗೆ ವರ್ಗಾವಣೆ ಆದೇಶ ಬಂದಿತ್ತು.2016ರ ಮೇ – ಅಕ್ಟೋಬರ್ ಅವಧಿಯಲ್ಲಿ ನವಿ ಮುಂಬೈ ಪಾಲಿಕೆಯ ಆಯುಕ್ತರಾಗಿದ್ದ ಅವರು ಅತ್ಯಲ್ಪ ಸಮಯದಲ್ಲೇ ಜನಾನುರಾಗಿ ಆಡಳಿತ ನೀಡಿದ್ದರು. 2019ರಿಂದ 2021ರವರೆಗೆ ಮಹಾರಾಷ್ಟ್ರ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಯೋಜನಾ ನಿರ್ದೇಶಕರಾಗಿ, 2021ರಿಂದ 2022ರವರೆಗೆ ರಾಜ್ಯ ಮಾನವ ಹಕ್ಕು ಆಯೋಗದ ಕಾರ್ಯದರ್ಶಿಯಾಗಿ, 2022ರಿಂದ 2023ರವರೆಗೆ ಕುಟುಂಬ ಕಲ್ಯಾಣ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್‌ನ ಆಯುಕ್ತ ಮತ್ತು ನಿರ್ದೇಶಕರಾಗಿದ್ದರು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ದಕ್ಷ ಆಡಳಿತದ ಮೂಲಕ ಹೆಸರು ಮಾಡಿದ್ದರು.
ನಾಯಕತ್ವದಲ್ಲಿ ನೈತಿಕತೆ ಕಾಪಾಡಿಕೊಳ್ಳುವುದು, ಆಡಳಿತದಲ್ಲಿ ಪಾಲ್ಗೊಳ್ಳುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಯು ಸಾರ್ವಜನಿಕ ಸೇವೆಯ ತಳಪಾಯವಾಗಿರಬೇಕು ಎಂಬುದು ತುಕಾರಾಂ ಅವರ ಅಭಿಮತ.













































