ನಮ್ಮ ಎಲ್ಲಾ ಮಿಲಿಟರಿ ನೆಲೆಗಳು, ಅದರ ವ್ಯವಸ್ಥೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವಾಯುಸೇನೆಯ ಉನ್ನತ ಅಧಿಕಾರಿ ತಿಳಿಸಿದ್ದಾರೆ.
ನವದೆಹಲಿ: ಭಾರತದ ದಾಳಿಗೆ ಬೆದರಿ ಬೆಂಡಾಗಿರುವ ಪಾಕಿಸ್ತಾನವು, ಮೊದಲ ಬಾರಿಗೆ ಗಡಿಯಲ್ಲಿ ಒಂದೇ ಒಂದು ಗುಂಡು ಹಾರಿಸಿಲ್ಲ. ಇದರಿಂದ ಇದೇ ಮೊದಲ ಬಾರಿಗೆ ಕಾಶ್ಮೀರ ಮತ್ತು ಗಡಿಯಲ್ಲಿ ಶಾಂತ ರಾತ್ರಿ ಇತ್ತು ಎಂದು ಸೇನೆ ತಿಳಿಸಿದೆ.ಪಾಕಿಸ್ತಾನ ಜೊತೆಗಿನ ಸಂಘರ್ಷದ ಬಳಿಕ ಸೇನಾ ನೆಲೆಗಳು ಮತ್ತು ಅದರ ವ್ಯವಸ್ಥೆಯ ಬಗ್ಗೆ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಐಎಎಫ್‌ನ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು, ದೇಶದಲ್ಲಿನ ನಮ್ಮ ಎಲ್ಲ ಸೇನಾ ನೆಲೆಗಳು ಸುವ್ಯವಸ್ಥಿತ ಮತ್ತು ಸನ್ನದ್ಧ ಸ್ಥಿತಿಯಲ್ಲಿವೆ. ಅಗತ್ಯಬಿದ್ದಲ್ಲಿ ಯಾವುದೇ ಕಾರ್ಯಾಚರಣೆಗೂ ಸಿದ್ಧವಾಗಿವೆ ಎಂದು ಹೇಳಿದರು.ಭಾರತವು ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ನಮ್ಮ ಸೇನಾ ನೆಲೆಗಳ ಮೇಲೆ ಪಾಕಿಸ್ತಾನ ನಡೆಸಿದ ದಾಳಿಗಳನ್ನು ಯಶಸ್ವಿಯಾಗಿ ವಿಫಲಗೊಳಿಸಲಾಗಿದೆ. ವಾಯು ರಕ್ಷಣಾ ಶಸ್ತ್ರಾಸ್ತ್ರಗಳಾದ ಆಕಾಶ್ನಂತಹ ವ್ಯವಸ್ಥೆ ನಮ್ಮಲ್ಲಿದೆ. ಇದನ್ನು ಬೇಧಿಸಲು ಪಾಕಿಸ್ತಾನಕ್ಕೆ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ನಮ್ಮಲ್ಲಿನ ಇಂಟಿಗ್ರೇಟೆಡ್ ಏರ್ ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್ ಪಾಕಿಸ್ತಾನದ ಸೇನಾ ದಾಳಿಯನ್ನು ವಿಫಲಗೊಳಿಸಿತು. ನಮ್ಮ ಕಾರ್ಯಾಚರಣೆಯು ಉಗ್ರರು ಮತ್ತು ಅದರ ಸಂಘಟನೆಗಳ ವಿರುದ್ಧವಾಗಿತ್ತು. ಆದರೆ, ಪಾಕಿಸ್ತಾನ ಸೇನೆಯು ಭಯೋತ್ಪಾದಕರನ್ನು ಬೆಂಬಲಿಸಿ ಸಂಘರ್ಷವನ್ನು ವಿಸ್ತರಿಸಿತು” ಎಂದು ಐಎಎಫ್ ಅಧಿಕಾರಿ ಹೇಳಿದರು.
ಕಾಶ್ಮೀರ ಮತ್ತು ಗಡಿಯಲ್ಲಿ ಸಂಪೂರ್ಣ ಶಾಂತಿ: ಕದನ ವಿರಾಮದ ಬಳಿಕ ಜಮ್ಮು- ಕಾಶ್ಮೀರ ಸೇರಿದಂತೆ ಭಾರತದ ಗಡಿ ಭಾಗದಲ್ಲಿ ಪರಿಸ್ಥಿತಿ ಸಂಪೂರ್ಣ ಶಾಂತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜನರು ಶಾಂತ ರಾತ್ರಿಯನ್ನು ಕಳೆದರು ಎಂದು ಭಾರತೀಯ ಸೇನೆ ತಿಳಿಸಿದೆ.ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಮೇ 7 ರಂದು ಭಾರತೀಯ ಸೇನಾ ಪಡೆಗಳು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಪ್ರಬಲವಾದ ಕ್ಷಿಪಣಿಗಳನ್ನು ಬಳಸಿ ನಾಶ ಮಾಡಿತು.ಭಾರತದ ಸೇನೆ ಸತತ ನಾಲ್ಕು ದಿನ ನಡೆಸಿದ ಕಾರ್ಯಾಚರಣೆಯಿಂದ ತತ್ತರಿಸಿದ ಪಾಕಿಸ್ತಾನವು, ಅಮೆರಿಕದ ಮೊರೆ ಹೋಗಿ ಕದನ ವಿರಾಮಕ್ಕೆ ದುಂಬಾಲು ಬಿದ್ದಿತು. ಅಮೆರಿಕದ ಮಧ್ಯಸ್ಥಿಕೆಗೆ ಮನ್ನಣೆ ನೀಡಿದ ಭಾರತ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.













































