ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಆಗಸ್ಟ್ 5ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ.
ಬೆಂಗಳೂರು: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ನಿಧನರಾದ ಹಿನ್ನೆಲೆಯಲ್ಲಿ ಮಂಗಳವಾರ (ನಾಳೆ) ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆಸಲು ಉದ್ದೇಶಿಸಿದ್ದ ಮತಗಳ್ಳತನ ವಿರುದ್ಧದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶವನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ.ಈ ಬಗ್ಗೆ ಮಾತನಾಡಿರುವ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ”ಕೆಪಿಸಿಸಿ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ ಮಾಜಿ ಸಿಎಂ ಶಿಬು ಸೊರೇನ್ ಅವರು ದುರದೃಷ್ಟವಶಾತ್ ನಿಧನರಾಗಿದ್ದಾರೆ. ಈ ಬಗ್ಗೆ ಸಿಎಂ ಹೇಮಂತ್ ಸೊರೇನ್ ಮಾಹಿತಿ ನೀಡಿದ್ದಾರೆ. ಶಿಬು ಸೊರೇನ್ ಅವರಿಗೆ ನಾವು ಶ್ರದ್ಧಾಂಜಲಿ ಅರ್ಪಿಸುತ್ತೇವೆ. ನಾಳೆ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡಿದ್ದಾರೆ. ಹೀಗಾಗಿ, ನಾಳೆಯ ಪ್ರತಿಭಟನಾ ಕಾರ್ಯಕ್ರಮವನ್ನು ಮುಂದೂಡಿದ್ದೇವೆ. ಆಗಸ್ಟ್ 8ರಂದು ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಿದ್ದೇವೆ” ಎಂದರು.
ಗಡಿಬಿಡಿ ಬೇಡವೆಂದು ಪ್ರತಿಭಟನೆ ಮುಂದೂಡಿಕೆ: ಇದೇ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ”ಶಿಬು ಸೊರೇನ್ ಅವರು ಇಂಡಿಯಾ ಒಕ್ಕೂಟದ ಸದಸ್ಯರಾಗಿದ್ದರು. ಈ ಬಗ್ಗೆ ನಾವೆಲ್ಲ ಕೂತು ಚರ್ಚೆ ಮಾಡಿದ್ದೇವೆ. ಇಲ್ಲಿಗೆ ಬಂದು, ಬಳಿಕ ಅಲ್ಲಿಗೆ ಹೋಗುವುದು ಅಂತ ಮೊದಲು ಮಾತುಕತೆ ಆಗಿತ್ತು. ಆದರೆ ದೊಡ್ಡ ಸಂದೇಶ ಕೊಡುವ ದಿನ ಇದಾಗಿದೆ. ಹೀಗಾಗಿ, ಗಡಿಬಿಡಿ ಬೇಡ ಎಂದು ಪ್ರತಿಭಟನೆ ಮುಂದೂಡುವ ತೀರ್ಮಾನ ಮಾಡಿದ್ದೇವೆ” ಎಂದು ತಿಳಿಸಿದರು.
ಆಗಸ್ಟ್ 8ರಂದು ವರ ಮಹಾಲಕ್ಷ್ಮಿ ಹಬ್ಬ ಇದೆ. ಆದರೆ ಪಕ್ಷದ ಹೋರಾಟವನ್ನು ಅವತ್ತು ಮಾಡಬೇಕಾಗಿದೆ. ಪ್ರತಿಭಟನೆ ಮಾಡುತ್ತೇವೆ, ಪ್ರಕೃತಿ ನಿಯಮವನ್ನು ಯಾರೂ ತಡೆಯಲು ಆಗುವುದಿಲ್ಲ. ರಾಹುಲ್ ಗಾಂಧಿ ನಾಳೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲೇಬೇಕು. ಇಲ್ಲದಿದ್ದರೆ ಬೇರೆ ಸಂದೇಶ ರವಾನೆಯಾಗುತ್ತದೆ. ಹೀಗಾಗಿ, ಆಗಸ್ಟ್ 8ರಂದು ಪ್ರತಿಭಟನೆ ನಿಗದಿ ಮಾಡಿದ್ದೇವೆ ಎಂದು ಡಿಕೆಶಿ ಹೇಳಿದರು.













































